ಸವಣೂರು : ಪೆಟ್ರೋಲ್, ಡಿಸೇಲ್ ಮತ್ತು ಗ್ಯಾಸ್ ದರ ಏರಿಕೆ ವಿರೋಧಿಸಿ ಎಸ್.ಡಿ.ಪಿ.ಐ ಕಾರ್ಯಕರ್ತರು ಬುಧವಾರ ಸವಣೂರು ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸೇರಿದಂತೆ ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ತಡೆಯುವಲ್ಲಿವಿಫಲವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡ ಮಧ್ಯಮ ವರ್ಗದ ಜನ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ದರ ಕಡಿಮೆಯಾಗಿದ್ದರೂ ಕೂಡ ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್ ಬೆಲೆ ಏರಿಕೆ ಮಾಡುತ್ತಿದೆ. ಕೇಂದ್ರ ಸರ್ಕಾರ ಜನ ಸಾಮಾನ್ಯರ ನೋವುಗಳಿಗೆ ಸ್ಪಂದಿಸುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದರೂ ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸಿಲ್ಲ. ಬೆಲೆ ಏರಿಕೆ ಮರೆಮಾಚಲು ಭಾವನಾತ್ಮಕ ವಿಚಾರಗಳನ್ನು ಸೃಷ್ಟಿಸುತ್ತಿದೆ.ಉತ್ತಮ ಆಡಳಿತ ನೀಡುವುದಾಗಿ ಹೇಳಿದ್ದ ಬಿಜೆಪಿ ದೇಶದ ಜನತೆಗೆ ಮೋಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜನ ಜೀವನ ನಡೆಸುವುದೇ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಬಡ ಜನರಿಗೆ ನೆರವು ನೀಡಬೇಕಿದ್ದ ಸರ್ಕಾರ ಜನರಿಂದಲೇ ಹಣ ಕಸಿದುಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಇದೇನಾ ಕೇಂದ್ರ ಸರ್ಕಾರದ ಅಚ್ಛೇ ದಿನ್ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯ ಇಕ್ಬಾಲ್ ಬೆಳ್ಳಾರೆ ಮಾತನಾಡಿದರು.
ಸವಣೂರು ಗ್ರಾ.ಪಂ.ಸಮಿತಿ ಅಧ್ಯಕ್ಷ, ಗ್ರಾ.ಪಂ.ಸದಸ್ಯ ಅಬ್ದುಲ್ ರಜಾಕ್ ಕೆನರಾ, ಕಾರ್ಯದರ್ಶಿ ಸಿದ್ದಿಕ್ ಅಲೆಕ್ಕಾಡಿ,ಪಾಪ್ಯುಲರ್ ಫ್ರಂಟ್ ಸವಣೂರು ಡಿವಿಷನ್ ಅಧ್ಯಕ್ಷ ಇರ್ಷಾದ್ ಸರ್ವೆ ಮೊದಲಾದವರಿದ್ದರು.
ಸವಣೂರು ಗ್ರಾ.ಪಂ.ಸದಸ್ಯ ಎಂ.ಎ.ರಫೀಕ್ ಕಾರ್ಯಕ್ರಮ ನಿರೂಪಿಸಿದರು.