ಹೆಚ್ಚು ಹೆಚ್ಚು ಪರೀಕ್ಷೆ ನಡೆಸಿ, ಕೋವಿಡ್ ನಿಯಂತ್ರಿಸಿ | ಪಾಸಿಟಿವ್ ಬಂದವರ ಮೇಲೆ ನಿಗಾ -ಎಸ್. ಅಂಗಾರ

ಮಂಗಳೂರು : ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ನಡೆಸುವ ಮೂಲಕ ಕೋವಿಡ್-19 ಸೋಂಕನ್ನು ನಿಯಂತ್ರಿಸಬಹುದು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಸಲಹೆ ನೀಡಿದರು.
ಅವರು ಆ.30ರ ಸೋಮವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ಸೋಂಕು ನಿರ್ವಹಣೆ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿಂತೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ಸೂಚ್ಯಂಕ ಕಡಿಮೆಯಾಗುತ್ತಿದೆ, ಇದೀಗ ಪ್ರತಿದಿನ 15,000 ಕೊರೊನಾ ತಪಾಸಣೆಗಳನ್ನು ಮಾಡಲಾಗುತ್ತಿದೆ, ಈ ಪರೀಕ್ಷೆಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಮೂಲಕ ಸೋಂಕು ಹರಡುವಿಕೆಯನ್ನು ತಡೆಗಟ್ಟಬಹುದು ಎಂದ ಸಚಿವರು, ಹೋಂ ಕ್ವಾರಂಟೈನ್‍ನಲ್ಲಿರುವ ಕೋವಿಡ್ ಸೋಂಕಿತರು ಹೊರಗೆ ಬಾರದಂತೆ ಆ ಭಾಗದ ವ್ಯಾಪ್ತಿಗೊಳಪಡುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಜನಪ್ರತಿನಿಧಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ನಿಗಾವಹಿಸಬೇಕು ಎಂದರು.

ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿನ ವೈದ್ಯಾಧಿಕಾರಿಗಳು ಹಾಗೂ ಸಂಬಂಧಿಸಿದ ಸಿಬ್ಬಂದಿಗಳು ಕೋವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಗುರುತಿಸಬೇಕು, ಸೋಂಕು ಹೊಂದಿದ್ದಲ್ಲೀ ಅವರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‍ಗಳಿಗೆ ದಾಖಲಿಸಬೇಕು ಆ ಮೂಲಕವೂ ಸೋಂಕನ್ನು ನಿಯಂತ್ರಿಸಬಹುದು ಎಂದರು.
ಕೋವಿಡ್ ಸೋಂಕಿತರು ಆಯುಷ್ಮಾನ್ ಕಾರ್ಡ್ ಹೊಂದಿರುವ ಬಗ್ಗೆ ಪರಿಶೀಲಿಸಬೇಕು, ಹಾಗೂ ಅವರಿಗೆ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಅವರು ತಿಳಿಸಿದರು.

Ad Widget / / Ad Widget

ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆ.ವಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ಸೂಚ್ಯಂಕವು ಶೇ. 2.27 ಇದ್ದೂ, ಹೆಚ್ಚಿನ ಕೋವಿಡ್ ಪರೀಕ್ಷೆಗಳನ್ನು ಮಾಡುವುದರಿಂದ ಹಾಗೂ ಜನಸಾಮಾನ್ಯರು ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಕೊರೊನಾ ಸೋಂಕನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಈವರೆಗೆ 29 ಕಂಟೈನ್‍ಮೆಂಟ್ ಜೋನ್ ಮತ್ತು 28 ಮೈಕ್ರೋ ಕಂಟೈನ್‍ಮೆಂಟ್ ಜೋನ್ ಇದ್ದೂ, ಆಗಸ್ಟ್ 23 ರಿಂದ 29 ರವರೆಗೆ ಒಟ್ಟು 77,888 ಸ್ವಾಬ್‍ಗಳ ಪರೀಕ್ಷೆ ನಡೆಸಲಾಗಿದೆ, ಜಿಲ್ಲೆಗೆ ಪ್ರತಿದಿನ ಬರುವ ಕೊರೊನಾ ಲಸಿಕೆಯನ್ನು ಆಯಾ ದಿನವೇ ಫಲಾನುಭವಿಗಳಿಗೆ ನೀಡಬೇಕು ಎಂದು ಸಂಬಂಧಿಸಿದವರಿಗೆ ನಿರ್ದೇಶನ ನೀಡಿದರು.

ಶಾಸಕರಾದ ವೇದವ್ಯಾಸ್ ಕಾಮತ್, ಮಹಾನಗರಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಆಯುಕ್ತ ಅಕ್ಷಯ್ ಶ್ರೀಧರ್, ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಾಣೆ, ಡಿಸಿಪಿ ಹರಿರಾಂ ಶಂಕರ್, ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಆನಂದ ಕುಮಾರ್ ವೇದಿಕೆಯಲ್ಲಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

error: Content is protected !!
Scroll to Top
%d bloggers like this: