ಬೆಳ್ತಂಗಡಿ | ವಿದೇಶದಿಂದ ವಾಪಸ್ಸಾಗಿದ್ದ ನೆರಿಯದ ಮಹಿಳೆ ನಗ-ನಗದಿನೊಂದಿಗೆ ಪರಾರಿ, ಅಕ್ರಮ ಸಂಬಂಧದ ಶಂಕೆ, ನಾಪತ್ತೆ ದೂರು ದಾಖಲು
ಗೃಹಿಣಿಯೊಬ್ಬರು ರಾತ್ರಿ ವೇಳೆ ಮನೆಯಲ್ಲಿದ್ದ ಹಣ ಮತ್ತು ಒಡವೆಯೊಂದಿಗೆ ಪರಾರಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ನಡೆದಿದೆ.
ರಾಜಿ ರಾಘವನ್ (39) ನಾಪತ್ತೆಯಾಗಿರುವ ಮಹಿಳೆ. ಈ ಬಗ್ಗೆ ಅವರ ಪತಿ ಚಿದಾನಂದ ಅವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಾರೆ.
ವಿದೇಶದಲ್ಲಿ ಕೆಲಸಕ್ಕಿದ್ದ ರಾಜಿ ಜು.11ರಂದು ನೆರಿಯದ ನಾಯಿಕಟ್ಟೆ ಎಂಬಲ್ಲಿರುವ ಪತಿಯ ಮನೆಗೆ ಮರಳಿದ್ದರು. ಆದರೆ ಆ. 26ರಂದು ರಾತ್ರಿ ಬಳಿಕ ಕಾಣೆಯಾಗಿದ್ದಾರೆ. ರಾಜೀ -ಚಿದಾನಂದ ದಂಪತಿಗೆ 11 ವರ್ಷದ ಹೆಣ್ಣು ಮಗಳು, 10 ವರ್ಷದ ಗಂಡು ಮಗ ಇದ್ದಾರೆ.
ಅಂದು ಆಕೆ ರಾತ್ರಿ ಎಂದಿನಂತೆ ಪತಿಯ ಜೊತೆ ಮಲಗಿದ್ದವರು 11 ಗಂಟೆಯ ಸುಮಾರಿಗೆ ಆಚೆ ಕೋಣೆಯಲ್ಲಿ ಮಲಗಿದ್ದ ಮಗಳ ಜೊತೆ ಮಲಗುವುದಾಗಿ ಹೇಳಿ ಎದ್ದು ಹೋಗಿದ್ದರು. ಆದರೆ ಬೆಳಿಗ್ಗೆ ಐದು ಗಂಟೆಗೆ ಮಗಳು ಎದ್ದು ನೋಡುವ ವೇಳೆ ತಾಯಿ ತನ್ನ ಬಳಿಯೂ ಮಲಗಿರದೆ, ಮನೆಯಲ್ಲೇ ಇಲ್ಲದೆ ನಿಗೂಢವಾಗಿ ನಾಪತ್ತೆಯಾಗಿದ್ದರು.
ಪತಿ ನೀಡಿದ ದೂರಿನಲ್ಲಿ ಆಕೆ ಮನೆಯಿಂದ ಹೊರಹೋಗುವಾಗ ತಾಯಿ ಬ್ಯಾಂಕಿನಿಂದ ಸಾಲಪಡೆದು ತಂದ 1 ಲಕ್ಷ ರೂ. ನಲ್ಲಿ ಉಳಿದಿದ್ದ 95000 ರೂ. ಹಾಗೂ ತನ್ನ ತಾಯಿಯ ಎರಡು ಚಿನ್ನದ ಬಳೆಗಳನ್ನೂ ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿದ್ದಾರೆ.
ವಿದೇಶದಲ್ಲಿ ಆಕೆಗೆ ಪರಪುರುಷನೊಂದಿಗೆ ಸಂಬಂಧವಿದೆ ಎಂಬ ಶಂಕೆ ಇದ್ದು, ಈ ಬಗ್ಗೆ ಇತ್ತೀಚೆಗೆ ಪಂಚಾತಿಕೆ ಕೂಡ ಆಗಿತ್ತು ಎನ್ನಲಾಗಿದೆ. ಒಟ್ಟಾರೆ ಎಲ್ಲಾ ಬೆಳವಣಿಗೆಗಳ ಮಧ್ಯೆ ಇದೀಗ ಆಕೆ ಮನೆಬಿಟ್ಟು ಹೋಗಿದ್ದು ನಾಪತ್ತೆ ದೂರು ದಾಖಲಾಗಿದೆ.