ಶಿಥಿಲಗೊಂಡಿದೆ ಉದನೆ ತೂಗುಸೇತುವೆ | ಬಿರುಕು ಬಿಟ್ಟ ಕಾಂಕ್ರೀಟ್ ಹಲಗೆ ,ಜನರ ಓಡಾಟಕ್ಕೆ ಅಪಾಯ
ಕಡಬ: ಎರಡು ದಶಕಗಳ ಹಿಂದೆ ನಿರ್ಮಾಣವಾದ ಶಿರಾಡಿ ಗ್ರಾಮದ ಉದನೆ ಎಂಬಲ್ಲಿನ ಗುಂಡ್ಯ ಹೊಳೆಗೆ ಅಡ್ಡಲಾಗಿರುವ ತೂಗುಸೇತುವೆಯ ಕಾಂಕ್ರಿಟ್ ಹಲಗೆ ಐದು ಕಡೆಗಳಲ್ಲಿ ಬಿರುಕು ಬಿಟ್ಟಿದ್ದು ಜನರ ಓಡಾಟಕ್ಕೆ ಅಪಾಯಕಾರಿಯಾಗಿದೆ.
ಕಡಬ ತಾಲೂಕಿನ ಶಿರಾಡಿ ಗ್ರಾಮದ ಉದನೆ ಪೇಟೆಯಿಂದ ಕೊಣಾಜೆ, ನೂಜಿಬಾಳ್ತಿಲ, ರೆಂಜಿಲಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ತೂಗುಸೇತುವೆ ಸುಮಾರು 24 ವರ್ಷಗಳ ಹಿಂದೆ ನಿರ್ಮಾಣವಾಗಿದೆ.
ಈ ತೂಗುಸೇತುವೆ ಮೂಲಕ ದಿನಂಪ್ರತಿ ನೂರಾರು ಜನರು , ನೂರಾರು ಬೈಕ್ ಸವಾರರೂ , ಶಾಲಾ ವಿದ್ಯಾರ್ಥಿಗಳು ಈ ತೂಗುಸೇತುವೆಯಲ್ಲಿಯೇ ಪ್ರಯಾಣಿಸುತ್ತಿದ್ದಾರೆ. ಈ ತೂಗುಸೇತುವೆಯ ಪಕ್ಕದಲ್ಲಿಯೇ ಹೊಸ ಸೇತುವೆ ನಿರ್ಮಾಣಗೊಳ್ಳುತ್ತಿದ್ದು ಇದರ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಸಂಚಾರಕ್ಕೆ ಇನ್ನಷ್ಟೇ ಮುಕ್ತವಾಗಬೇಕಾಗಿದೆ. ಅಲ್ಲಿಯವರೆಗೆ ಈ ತೂಗು ಸೇತುವೆಯಲ್ಲಿ ಅಪಾಯಕಾರಿ ನಡಿಗೆ ತಪ್ಪಿದಲ್ಲ.
ಕೊಣಾಜೆ ಗ್ರಾಮದ ಮಂದಿ ಶಿರಾಡಿ ಉದನೆಗೆ ಬರಬೇಕಾದಲ್ಲಿ ಕಲ್ಲುಗುಡ್ಡೆ, ಇಚ್ಲಂಪಾಡಿ ಮೂಲಕ ಶಿರಾಡಿಗೆ ಸುತ್ತು ಬಳಸಿ ಬರಬೇಕಿತ್ತು ಈ ಹಿನ್ನೆಲೆಯಲ್ಲಿ ಈ ಭಾಗದ ಜನರ ಬೇಡಿಕೆಯಂತೆ 1997ರಲ್ಲಿ ಈ ತೂಗು ಸೇತುವೆ ನಿರ್ಮಾಣಗೊಂಡಿತ್ತು.
ಕೊಣಾಜೆ ಭಾಗದಿಂದ ಉದನೆಗೆ, ಉದನೆ ಭಾಗದಿಂದ ಕೊಣಾಜೆಗೆ ರೈತರು, ಕೃಷಿಕರು, ಹೈನುಗಾರರು ಹಾಲು ಸೇರಿದಂತೆ ತಾವು ಬೆಳೆದ ಇತರೇ ಅಗತ್ಯ ವಸ್ತುಗಳನ್ನು ಮಾರುಕಟ್ಟೆಗೆ ಕೊಂಡೊಯ್ಯಲು ಈ ತೂಗುಸೇತುವೆಯ ಮೂಲಕವೇ ಸಂಚರಿಸುತ್ತಾರೆ. ಬಿರುಕು ಬಿಟ್ಟ ಕಾಂಕ್ರಿಟ್ ಹಲಗೆ ಮೂಲಕ ನದಿ ನೀರು ಕಾಣಿಸುತ್ತಿದೆ. ಜನರು ಓಡಾಟ ನಡೆಸುವ ವೇಳೆ ಆಯಾತಪ್ಪಿ ಹಲಗೆಯಲ್ಲಿ ಕಾಲು ಸಿಲುಕಿಕೊಂಡಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ತೂಗು ಸೇತುವೆಯ ಎರಡೂ ಬದಿಗೆ ಹಾಕಲಾಗಿರುವ ಕಬ್ಬಿಣದ ರಕ್ಷಣೆಯೂ ಅಲ್ಲಲ್ಲಿ ತುಕ್ಕು ಹಿಡಿದಿವೆ.
ಹೊಳೆಗೆ ಇಳಿದು ಮೀನು ಹಿಡಿಯದಂತೆ ತೂಗುಸೇತುವೆ ಪಕ್ಕದ ಉದನೆ ಭಾಗದಲ್ಲಿ ಹಾಕಲಾಗಿರುವ ಎಚ್ಚರಿಕೆ ಫಲಕದಲ್ಲಿನ ಅಕ್ಷರಗಳೆಲ್ಲವೂ ಅಳಿಸಿಹೋಗಿದ್ದು ಫಲಕವೂ ತುಕ್ಕು ಹಿಡಿದಿದೆ.