ಧರ್ಮಸ್ಥಳ | ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ

Share the Article

ಬಿಗ್‍ಬಾಸ್ ಸೀಸನ್ 8 ರ ವಿಜೇತ ಮಂಜು ಪಾವಗಡ ಅವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನವನ್ನು ಪಡೆದಿದ್ದಾರೆ.

ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಗ, ನನ್ನ ಜೀವ ಉಳಿಸಿದ್ದು ಮಂಜುನಾಥ ಸ್ವಾಮಿ ಎಂದು ಬಿಗ್ ಬಾಸ್ ಮನೆಯಲ್ಲಿ ಮಂಜು ಅವರು ಭಾವುಕರಾಗಿದ್ದರು. ಈ ಹಿನ್ನೆಲೆಯಲ್ಲಿ ಮಂಜು ಪಾವಗಡ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಧರ್ಮಸ್ಥಳ ಭೇಟಿಯ ಕಾರಣ?

ಮಂಜು ಪಾವಗಡ ಅವರದ್ದು ಕಡು ಬಡತನದ ಕುಟುಂಬ. ತಂದೆ ಹನುಮಂತರಾಯಪ್ಪ, ತಾಯಿ ಲಕ್ಷ್ಮಮ್ಮ. ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸುವಂತಹ ಕುಟುಂಬ. ಹೀಗೆ ಬದುಕು ಸಾಗುತ್ತಿರುವಾಗ ಮಂಜು ತೀರಾ ಚಿಕ್ಕವನಾಗಿದ್ದರು. ಆಗಿನ್ನೂ ಹೆಸರಿಟ್ಟಿರಲಿಲ್ಲ. ಅವರ ನಾಮಕರಣಕ್ಕೆ ಪೋಷಕರು ಸಕಲ ಸಿದ್ಧತೆ ಮಾಡಿದ್ದರು. ಆದರೆ ಅಂದು ನಡೆದಿರುವ ಘಟನೆ ವಿಚಿತ್ರವಾದ ಒಂದು ಪವಾಡಕ್ಕೆ ಸಾಕ್ಷಿಯಾಗಿತ್ತು.

ಮಂಜು ಅವರ ತಂದೆ ರೇಷ್ಮೆಗೂಡನ್ನು ಹಾಕಿಕೊಂಡು ರಾಮನಗರಕ್ಕೆ ಹೋಗಿದ್ದರು. ಅಲ್ಲಿಂದ ಅವರು ಬರುವಷ್ಟರಲ್ಲಿ ಮಂಜು ಅವರ ಆರೋಗ್ಯ ಹದಗೆಟ್ಟು, ತೀರಾ ಸೀರಿಯಸ್ಸ್ ಆಗಿಬಿಟ್ಟಿತ್ತು. ಉಸಿರಾಟಕ್ಕೆ ತೊಂದರೆಯಾಗಿ ಬಾಲ್ಯದಲ್ಲೇ ಮಂಜು ಕೋಮಾಗೆ ಹೋಗಿ ಬಿಟ್ಟಿದ್ದರು. ಆಸ್ಪತ್ರೆಗೆ ತೋರಿಸಿದರಾದರೂ ಕೂಡ ಮಂಜು ಆರೋಗ್ಯ ಸ್ಥಿತಿ ಸುಧಾರಿಸಿರಲಿಲ್ಲ.

ಮಂಜು ಅವರ ತಂದೆ ಧರ್ಮಸ್ಥಳಕ್ಕೆ ಹೋಗಿ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ನನ್ನ ಕುಡಿಯನ್ನು ಉಳಿಸಿಕೊಡು ಭಗವಂತ ಅಂತ ಶಿರಸಾಷ್ಟಾಂಗ ನಮಸ್ಕಾರ ಹಾಕಿ ಬೇಡಿಕೊಂಡರು. ವಿಶೇಷ ಪೂಜೆ ಮಾಡಿಸಿಕೊಂಡು ತೀರ್ಥ-ಪ್ರಸಾದ ತೆಗೆದುಕೊಂಡು ಬಂದು ಮಂಜುಗೆ ತೀರ್ಥ ಸೇವನೆ ಮಾಡಿಸಿದರು. ಇದಾಗಿ ಸ್ವಲ್ಪ ಹೊತ್ತಲ್ಲೇ ಮಂಜಣ್ಣ ನಿಟ್ಟುಸಿರು ಬಿಟ್ಟಿದ್ದರು ಅವರ ಆರೋಗ್ಯವು ಸುಧಾರಿಸಿತ್ತು. ಅಂತೆಯೇ ಮಂಜು ಎಂದು ನಾಮಕರಣ ಕೂಡ ಮಾಡಿದರು.

ಅಂದಿನಿಂದ ಇಂದಿನಿವರೆಗೂ ಮಂಜು ಧರ್ಮಸ್ಥಳದ ಶ್ರೀಮಂಜುನಾಥಸ್ವಾಮಿಗೆ ನೆನೆದುಕೊಳ್ಳುತ್ತಾರೆ. ಕಷ್ಟ-ಸುಖ-ಸಂತೋಷ ಯಾವುದೇ ಇರಲಿ ಅಲ್ಲಿಗೆ ಹೋಗಿ ಆಶೀರ್ವಾದ ಬೇಡಿಕೊಂಡು ಬರುತ್ತಾರಂತೆ. ಅವರು ಅಂದುಕೊಂಡತೆ ಅಭಿಮಾನಿಗಳ ಆಶೀರ್ವಾದ, ನಂಬಿರುವ ದೇವರ ಕೃಪೆಯಿಂದ ಬಿಗ್‍ಬಾಸ್ ವಿನ್ನರ್ ಪಟ್ಟವನ್ನು ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಜುನಾಥ ಸ್ವಾಮಿಯ ಕ್ಷೇತ್ರಕ್ಕೆ ಹೋಗಿ ದೇವರ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.

Leave A Reply