ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ನೂತನ ಕಚೇರಿ ಉದ್ಘಾಟನೆ | ಪತ್ರಕರ್ತರಿಗೆ ನಿವೇಶನ ನಮ್ಮ ಜವಾಬ್ದಾರಿ – ವೇದವ್ಯಾಸ್ ಕಾಮತ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರು ಕ್ರೀಯಾಶೀಲರಾಗಿದ್ದು, ಬ್ರ್ಯಾಂಡ್ ಮಂಗಳೂರು, ಗ್ರಾಮ ವಾಸ್ತವ್ಯ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮ ಮೂಲಕ ರಾಜ್ಯಕ್ಕೆ ಮಾದರಿಯಾದವರು. ಈ ಜಿಲ್ಲೆಯ ಪತ್ರಕರ್ತರ ಬಹುಕಾಲದ ಬೇಡಿಕೆಯಾದ ನಿವೇಶನದ ಕನಸು ನನಸು ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಮಂಗಳೂರಿನ ಲೇಡಿಹಿಲ್ ಪತ್ರಿಕಾಭವನದಲ್ಲಿ ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಸಹಕಾರ ಸಂಘಗಳ ಕೊಡುಗೆ ಅಪಾರವಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ರಕರ್ತರ ಸಹಕಾರ ಸಂಘ ಅಸ್ತಿತ್ವಕ್ಕೆ ಬಂದಿರುವುದು ಹೆಮ್ಮೆಯ ವಿಷಯ. ಸಂಘವು ಅತೀ ಶೀಘ್ರವಾಗಿ ಬೆಳವಣಿಗೆ ಕಂಡು ಷೇರು, ಡೆಪಾಸಿಟ್ ಸಂಗ್ರಹಿಸಿ ಬ್ಯಾಂಕಿಂಗ್ ವ್ಯವಹಾರವನ್ನು ಆರಂಭಿಸಲಿ. ಜಿಲ್ಲಾಮಟ್ಟದಿಂದ ತಾಲೂಕು ಮಟ್ಟಕ್ಕೂ ವಿಸ್ತರಣೆಯಾಗಲಿ. ಈ ಮೂಲಕ ಪತ್ರಕರ್ತರಲ್ಲಿ ಶಕ್ತಿಯನ್ನು ತುಂಬುವ ಕೆಲಸವಾಗಲಿ. ಪತ್ರಕರ್ತರಿಗೆ ನಿವೇಶನ ಸೇರಿದಂತೆ ಬ್ಯಾಂಕಿಂಗ್ ವ್ಯವಹಾರವನ್ನು ಯಶಸ್ವಿಯಾಗಿ ಮುನ್ನಡೆಯಲು ಶಾಸಕರಾಗಿ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.
ಮಂಗಳೂರು ಉತ್ತರ ಶಾಸಕ ಡಾ.ವೈ. ಭರತ್ ಶೆಟ್ಟಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಪತ್ರಕರ್ತರು ಅತ್ತ ಬಿಪಿಎಲ್ ಅಲ್ಲ, ಇತ್ತ ಎಪಿಎಲ್ ಇಲ್ಲ ಎಂಬಂತೆ ಮಧ್ಯಮ ಕುಟುಂಬದಲ್ಲಿ ಬದುಕುವವರು. ಸಮಾಜಕ್ಕೆ ಸದಾ ಒಳಿತನ್ನು ಬಯಸುವ ಇಂತಹ ಪತ್ರಕರ್ತರಿಗೆ ಸಹಕಾರ ನೀಡುವುದು ನಮ್ಮ ಕರ್ತವ್ಯವಾಗಿದೆ. ಒಳ್ಳೆಯ ಉದ್ದೇಶದೊಂದಿಗೆ ಈ ಸಹಕಾರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಇದರ ಶ್ರೇಯೋಭಿವೃದ್ಧಿ ಮತ್ತು ನಿವೇಶನಕ್ಕೆ ಸಂಬಂಧಪಟ್ಟಂತೆ ನನ್ನಿಂದ ಸಂಪೂರ್ಣ ಸಹಕಾರ ನೀಡುತ್ತೇನೆ. ಸಹಕಾರ ಸಂಘಗಳು ಆರ್ಥಿಕ ಶಿಸ್ತನ್ನು ಬೆಳೆಸಿಕೊಂಡಲ್ಲಿ ಅತೀ ವೇಗವಾಗಿ ಬೆಳವಣಿಗೆ ಕಾಣಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ದ.ಕ. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷೃ ಕೌಶಲ್ ಪ್ರಸಾದ್ ಶೆಟ್ಟಿ ಭಾಗವಹಿಸಿದ್ದರು.
ಪತ್ರಕರ್ತರ ಗಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷೃ ಶ್ರೀನಿವಾಸ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ವಂದಿಸಿದರು. ಸಹಕಾರಿ ಸಂಘದ ನಿರ್ದೇಶಕ ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು.