12 ರಿಂದ 18 ವಯೋಮಾನದವರಿಗೂ ಸಿದ್ಧವಾಯಿತು ಲಸಿಕೆ | ತುರ್ತು ಬಳಕೆಗೆ ಸಿಕ್ಕಿತು ಅನುಮೋದನೆ

ಕೋವಿಡ್ ಸೋಂಕಿನ ವಿರುದ್ಧ ಝೈಡಸ್ ಕ್ಯಾಡಿಲಾ ಸಂಸ್ಥೆ ಸಿದ್ಧಪಡಿಸಿರುವ 3 ಡೋಸ್ ಗಳ ಲಸಿಕೆಯ ತುರ್ತು ಬಳಕೆಗೆ ಆ.20ರಂದು ಅನುಮೋದನೆ ಸಿಕ್ಕಿದೆ

ಸೂಜಿ ರಹಿತ ಲಸಿಕೆಯಾಗಿರುವ ಮೂರು ಡೋಸ್ ಪ್ರಮಾಣದ ZyCov-D ಲಸಿಕೆಯನ್ನು ತುರ್ತುಬಳಕೆಗೆ ಅನುಮೋದನೆ ನೀಡುವಂತೆ ಕೇಂದ್ರ ಆರೋಗ್ಯ ತಜ್ಞರು ಶಿಫಾರಸ್ಸು ಮಾಡಿದ ಬೆನ್ನಲ್ಲೇ ಇದಕ್ಕೆ ಅನುಮೋದನೆ ಸಿಕ್ಕಿದೆ.

ಝೈಕೋವ್-ಡಿ ವಿಶ್ವದ ಮೊದಲ ಡಿಎನ್ಎ ಲಸಿಕೆಯಾಗಿದ್ದು, ಈಗಾಗಲೇ ದೇಶದಲ್ಲಿ ಸೆರಂ ಇನ್ಸ್ಟಿಟ್ಯೂಟ್ ನ ಕೋವಿಶೀಲ್ಡ್, ಭಾರತ್ ಬಯೋಟೆಕ್ ನ ಕೊವಾಕ್ಸಿನ್, ರಷ್ಯಾದ ಸ್ಪುಟ್ನಿಕ್ ವಿ ಬಳಕೆಯಲ್ಲಿದ್ದು, ಇದಲ್ಲದೆ ಒಟ್ಟು 2 ಲಸಿಕೆಗಳಾದ ಅಮೆರಿಕದ ಮಾಡರ್ನಾ ಮತ್ತು ಜಾನ್ಸನ್ ಮತ್ತು ಜಾನ್ಸನ್ ಲಸಿಕೆಗಳು ತುರ್ತು ಬಳಕೆ ಅನುಮೋದನೆ ಪಡೆದಿವೆ.

ಈ ಮೂಲಕ ದೇಶದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದ 6ನೇ ಲಸಿಕೆ ಎಂಬ ಕೀರ್ತಿಗೆ ZyCoV-D ಪಾತ್ರವಾಗಿದೆ.

ಭಾರತದ ಔಷಧ ನಿಯಂತ್ರಕ ಜನರಲ್‌ನ ತಜ್ಞರ ಸಮಿತಿಯು ಈ ಲಸಿಕೆಯ ತುರ್ತು ಬಳಕೆಯನ್ನು ಅನುಮೋದಿಸಿದೆ. ಈ ಲಸಿಕೆಯ 2 ಡೋಸ್‌ಗಳ ಪರಿಣಾಮದ ಕುರಿತು ಸಮಿತಿಯು ಫಾರ್ಮಾ ಕಂಪನಿಯಿಂದ ಹೆಚ್ಚುವರಿ ದತ್ತಾಂಶವನ್ನು ಕೋರಿದೆ ಎನ್ನಲಾಗಿದೆ.

ಜೆನೆರಿಕ್ ಫಾರ್ಮಾಸ್ಯುಟಿಕಲ್ ಕಂಪನಿಯಾಗಿರುವ ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್ ಜುಲೈ 1 ರಂದು ZyCoV-D ಯ ತುರ್ತು ಬಳಕೆಗೆ ಅನುಮತಿಗಾಗಿ ಅರ್ಜಿ ಸಲ್ಲಿಸಿತ್ತು. 28 ಸಾವಿರ ಸ್ವಯಂಸೇವಕರ ಮೇಲೆ ನಡೆಸಿದ ಕೊನೆಯ ಹಂತದ ಪ್ರಯೋಗದ ಆಧಾರದ ಮೇಲೆ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು. ಲಸಿಕೆಯ ಪರಿಣಾಮಕಾರಿತ್ವವು ಶೇ. 66.6 ರಷ್ಟಿದೆ ಎಂದು ಈ ವರದಿಯಿಂದ ತಿಳಿದುಬಂದಿತ್ತು. ಈ ಲಸಿಕೆ 12 ರಿಂದ 18 ವಯೋಮಾನದವರಿಗೂ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಹೇಳಲಾಗಿದೆ. ಆದಾಗ್ಯೂ, ಅದರ ಪ್ರಾಯೋಗಿಕ ಡೇಟಾವನ್ನು ಇನ್ನೂ ಪ್ಯಾರ್ ರಿವ್ಯೂ ಮಾಡಲಾಗಿಲ್ಲ ಎನ್ನಲಾಗಿದೆ.

Leave A Reply