ಕುಖ್ಯಾತ ಗ್ಯಾಂಗ್ ‌ಸ್ಟರ್ ವಿಕಾಸ್ ದುಬೆ ಎನ್‌ಕೌಂಟರ್ ಪೊಲೀಸರಿಗೆ ನ್ಯಾಯಾಂಗ ಆಯೋಗದಿಂದ ಕ್ಲೀನ್ ಚಿಟ್

ಕುಖ್ಯಾತ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಮತ್ತು ಐದು ಮಂದಿ ಇತರರನ್ನು ಉತ್ತರ ಪ್ರದೇಶ ಪೊಲೀಸರು ಸರಣಿ ಎನ್‌ಕೌಂಟರ್ ಗಳಲ್ಲಿ ಹತ್ಯೆಗೈದ ಒಂದು ವರ್ಷದ ಬಳಿಕ ಘಟನೆಯ ಕುರಿತು ತನಿಖೆಗೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಚಿತವಾಗಿದ್ದ ತ್ರಿಸದಸ್ಯರ ನ್ಯಾಯಾಂಗ ಆಯೋಗ ತನ್ನ ವರದಿಯಲ್ಲಿ ಪೊಲೀಸರಿಗೆ ಕ್ಲೀನ್ ಚಿಟ್ ನೀಡಿದೆ.

ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಬಿ ಎಸ್ ಚೌಹಾಣ್ ನೇತೃತ್ವದ ಆಯೋಗದಲ್ಲಿ ಅಲಹಾಬಾದ್ ಹೈಕೋರ್ಟಿನ ನಿವೃತ ನ್ಯಾಯಾಧೀಶ ಶಶಿಕಾಂತ್ ಅಗರ್ವಾಲ್ ಮತ್ತು ಉತ್ತರ ಪ್ರದೇಶದ ಮಾಜಿ ಡಿಜಿಪಿ ಕೆ ಎಲ್ ಗುಪ್ತಾ ಇದ್ದರು.

ದುಬೆ ಮತ್ತಾತನ ತಂಡಕ್ಕೆ ಸ್ಥಳೀಯ ಪೊಲೀಸರು, ಕಂದಾಯ ಮತ್ತು ಆಡಳಿತಾತ್ಮಕ ಅಧಿಕಾರಿಗಳ ಬೆಂಬಲವಿತ್ತು ಎಂದೂ ವರದಿ ಹೇಳಿದೆಯಲ್ಲದೆ ‘ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆಗೆ ಶಿಫಾರಸು ಮಾಡಿದೆ.

ಕಳೆದ ವರ್ಷದ ಜುಲೈ 3ರಂದು ಪೊಲೀಸರ ಒಂದು ತಂಡ ಕಾನ್ಸುರ್ ನ ಬಿಕ್ರು ಗ್ರಾಮಕ್ಕೆ ದುಬೆಯನ್ನು ಬಂಧಿಸಲು ತೆರಳಿದ್ದ ಸಂದರ್ಭ ಆತನ ಮನೆಯ ಮಹಡಿಯಿಂದ ಕೆಲವರು ನಡೆಸಿದ ಗುಂಡಿನ ದಾಳಿಯಲ್ಲಿ ಡಿವೈಎಸ್ಪಿ ಒಬ್ಬರು ಸೇರಿದಂತೆ ಎಂಟು ಪೊಲೀಸರು ಹತರಾಗಿದ್ದರು.

ಈ ಪ್ರಕರಣದ ಎಫ್‌ಐಆರ್ ನಲ್ಲಿ 21 ಮಂದಿಯ ಹೆಸರುಗಳು ಉಲ್ಲೇಖಿತವಾಗಿದ್ದವು. ಅವರ ಪೈಕಿ ದುಬೆ ಸಹಿತ ಆರು ಮಂದಿಯನ್ನು ಪೊಲೀಸರು ಶಂಕಿತ ಎನ್‌ಕೌಂಟರ್ ಗಳಲ್ಲಿ ಮುಂದಿನ ದಿನಗಳಲ್ಲಿ ಹತ್ಯೆಗೈದಿದ್ದರು.

ಜುಲೈ 10ರಂದು ಪೊಲೀಸರಿಂದ ಬಂಧನಕ್ಕೊಳಗಾದ ದುಬೆಯನ್ನು ಉಜ್ಜಯಿನಿಯಿಂದ ಕರೆದುಕೊಂಡು ಬರುತ್ತಿದ್ದಾಗ ವಾಹನ ಅಪಘಾತಕ್ಕೀಡಾದಾಗ ದುಬೆ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಗುಂಡುಹಾರಿಸಿದ್ದರು.ಆ ವೇಳೆ ವಿಕಾಸ್ ದುಬೆ ಸಾವನ್ನಪ್ಪಿದ್ದ.

Leave A Reply

Your email address will not be published.