ತೆಂಗು ಬೆಳೆಗಾರನೇ ತೆಂಗು ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷ | 2023 ಸಿರಿಧಾನ್ಯಗಳ ವರ್ಷ -ಶೋಭಾ ಕರಂದ್ಲಾಜೆ
ತೆಂಗು ಬೆಳೆಯುವ ರೈತನೇ ತೆಂಗು ಅಭಿವೃದ್ಧಿ ಮಂಡಳಿಯ ಅಧ್ಯಕ್ಷನಾಗಬೇಕೆಂದು ತೀರ್ಮಾನಿಸಲಾಗಿದೆ. ತೆಂಗು ಹಾಗೂ ಅದರ ಉತ್ಪನ್ನಗಳ ರಫ್ತಿಗೆ ಇದ್ದ ನಿಷೇಧವನ್ನು ತೆಗೆದುಹಾಕಿದ್ದರಿಂದ ಬೆಲೆಯಲ್ಲಿ ಏರಿಕೆಯಾಗಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಗುರುವಾರ ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆಹಾರ ಉತ್ಪಾದನೆಯಲ್ಲಿ ತುಂಬಾ ವ್ಯರ್ಥವಾಗುತ್ತಿದೆ. ಇದನ್ನು ಶೇಖರಿಸಿ ಇಡಬೇಕು ಅಥವಾ ರಫ್ತು ಮಾಡಬೇಕು. ರಾಸಾಯನಿಕ ರಹಿತ ಬೆಲ್ಲಕ್ಕೆ ಅಪಾರ ಬೇಡಿಕೆಯಿದೆ. ಅಂತಹ ಪದಾರ್ಥಗಳನ್ನು ಉತ್ಪಾದಿಸಿ ರಫ್ತು ಮಾಡಬೇಕು.
2023ರನ್ನು “ವಿಶ್ವ ಸಿರಿಧಾನ್ಯಗಳ ವರ್ಷ’ ಎಂದು ಘೋಷಣೆ ಮಾಡಲು ನಮ್ಮ ಪ್ರಸ್ತಾವನೆಯನ್ನು ಯುನೈಟೈಡ್ ನೇಶನ್ ಒಪ್ಪಿ ಘೋಷಿಸಿದೆ. ರಾಗಿ ಬೆಳೆಗೂ ಅಪಾರ ಬೇಡಿಕೆಯಿದೆ. ರಾಜ್ಯದಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕು. ವಿದೇಶಿ ಕಂಪೆನಿಗಳು ಸಾವಯವ ಉತ್ಪನ್ನಗಳನ್ನು ತೆಗೆದುಕೊಳ್ಳುತ್ತಿವೆ. ಕೃಷಿ ಇಲಾಖೆಯನ್ನು ಜನಸಾಮಾನ್ಯರಿಗೆ ತಲುಪಿಸಲು 21 ಕೋಟಿ ರೈತರಿಗೆ 1.57 ಲ.ಕೋ.ರೂ.ಗಳನ್ನು ರೈತರ ಖಾತೆಗೆ ವರ್ಗಾಯಿಸಲಾಗಿದೆ. ಬೆಳೆ ವಿಮೆಯನ್ನು ಸರಳೀಕರಣಗೊಳಿಸಲಾಗಿದೆ. ಕೃಷಿಕನೇ ಬೆಳೆಯ ಫೋಟೋ ತೆಗೆದು ಅಪ್ಲೋಡ್ ಮಾಡಿದರೆ ಬೆಳೆ ವಿಮೆ ನಿಗದಿಯಾಗಲಿದೆ. ಸಿಗದಿದ್ದರೆ ದೂರು ನೀಡುವ ಅವಕಾಶವೂ ಇದೆ. ಅಡಿಕೆ ಬೆಳೆಗಾರರ ಸಮಸ್ಯೆಯನ್ನು ನಿವಾರಿಸಲೂ ಯತ್ನಿಸಲಾಗುವುದು ಎಂದರು.
ಟ್ರ್ಯಾಕ್ಟರ್, ಟಿಲ್ಲರ್ ದರದಲ್ಲಿ ಜನರನ್ನು ವಂಚಿಸುತ್ತಿರುವ ಘಟನೆಗಳು ನಡೆಯುತ್ತಿರುವುದರಿಂದ ಕೇಂದ್ರ ಸರಕಾರ ಎಲ್ಲ ಉಪಕರಣಗಳ ಗರಿಷ್ಠ ಮಾರಾಟ ದರವನ್ನು ಪ್ರದರ್ಶಿಸುವಂತೆ ಸೂಚಿಸಿದೆ ಎಂದರು.
ನಮ್ಮ ದೇಶದಲ್ಲಿ ಬೇಳೆ ಕಾಳು ಹಾಗೂ ಖಾದ್ಯ ತೈಲ ಬಳಕೆ ಹೆಚ್ಚು. ಆದರೆ ಶೇ. 70ರಷ್ಟು ಖಾದ್ಯತೈಲ ಹೊರದೇಶದಿಂದ ಬರುತ್ತಿದೆ. ಶೇ. 95 ಮಂದಿ ಹೊರದೇಶದಿಂದ ಬಂದ ಪಾಮ್ ಆಯಿಲ್ಗೆ ಮಿಶ್ರ ಮಾಡಿ ಕಲಬೆರಕೆಯುಕ್ತ ಎಣ್ಣೆಯನ್ನು ಬಳಸುತ್ತಾರೆ. ಆದರೆ ಕರಾವಳಿಗರಾದ ನಾವು ಅದೃಷ್ಟವಂತರು. ನಾವೇ ಬೆಳೆದಿರುವ ತೋಟದ ತೆಂಗಿನ ಕಾಯಿಯ ಎಣ್ಣೆಯನ್ನು ತಯಾರಿಸಿ ಉಪಯೋಗಿಸುತ್ತೇವೆ ಎಂದು ಶೋಭಾ ತಿಳಿಸಿದರು.
ಕೃಷಿಯಲ್ಲಿ ತೊಡಗಿರುವವರ ಪೈಕಿ ಶೇ. 80ರಷ್ಟು ಮಂದಿ ಸಣ್ಣ ಹಾಗೂ ಮಧ್ಯಮ ವರ್ಗದವರು. ಅವರು ಲಾಭದಾಯಕವಲ್ಲವೆಂದು ಕೃಷಿಯಿಂದ ವಿಮುಖರಾಗಿ ನಗರಕ್ಕೆ ವಲಸೆ ಹೋಗುತ್ತಿದ್ದಾರೆ. ಸಣ್ಣ ಕೃಷಿಕರಿಂದಲೂ ಕೃಷಿ ಮಾಡಿ ಸುವುದು ಹೇಗೆ? ಅವರಿಗೆ ಯಾವ ರೀತಿ ಸಹಾಯ ಮಾಡಬಹುದು ಎಂದು ಪ್ರಧಾನಿ ಚಿಂತಿಸುತ್ತಿದ್ದಾರೆ ಎಂದರು.
ಎಣ್ಣೆಕಾಳು ಬೆಳೆ ಸಂಶೋಧನೆಗೆ ಕೇಂದ್ರ ಸರಕಾರ ಆದ್ಯತೆ ನೀಡಿದೆ. ನಮ್ಮ ದೇಶ 1 ವರ್ಷದಲ್ಲಿ 305 ಮಿಲಿಯ ಮೆಟ್ರಿಕ್ ಟನ್ ಬೇಳೆಕಾಳು ಮತ್ತು ದವಸಧಾನ್ಯ ಹಾಗೂ 326 ಮೆಟ್ರಿಕ್ ಟನ್ ಹಣ್ಣುಹಂಪಲು, ತರಕಾರಿ ಬೆಳೆಯುವ ಮೂಲಕ ವಿಶ್ವದಾಖಲೆ ಮಾಡಿದೆ. ಆಹಾರ ರಫ್ತು ಮಾಡುವ ದೇಶಗಳಲ್ಲಿ ಭಾರತ 9ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
2013-14ರಲ್ಲಿ ಯುಪಿಎ ಸರಕಾರದ ಬಜೆಟ್ ಕೃಷಿಗೆ ಕೇವಲ 21 ಸಾವಿರ ಕೋ.ರೂ. ಮೀಸಲಿಟ್ಟಿದ್ದರೆ, 2021-22ರ ಬಿಜೆಪಿ ಸರಕಾರದ ಬಜೆಟ್ 1 ಲಕ್ಷದ 31 ಸಾವಿರ ಕೋ.ರೂ. ಮೀಸಲಿಟ್ಟಿದೆ. ಕೃಷಿ ಮೂಲಸೌಕರ್ಯ ಅಭಿವೃದ್ಧಿ ನಿಧಿಗೆ 1 ಲ.ಕೋ.ರೂ. ಪ್ರತ್ಯೇಕವಾಗಿ ನಿಗದಿಪಡಿಸಲಾಗಿದೆ. ದೇಶದಲ್ಲಿ 10 ಸಾವಿರ ಕೃಷಿ ಉತ್ಪಾದಕರ ಸಂಘ ರಚನೆಯಾಗಬೇಕು ಎಂಬುದು ಪ್ರಧಾನಿಯವರ ಸಂಕಲ್ಪ. ಕೇಂದ್ರ ಸರಕಾರ ಇದಕ್ಕೆ ಸಹಾಯಧನ, ಸಾಲಸೌಲಭ್ಯ ನೀಡುತ್ತಿದೆ ಎಂದು ಶೋಭಾ ಹೇಳಿದರು.
ಆ. 16ರಿಂದ ಎಲ್ಲ ನೂತನ ಸಚಿವರು ದೇಶಾದ್ಯಂತ ಪ್ರವಾಸ ಮಾಡುತ್ತಿದ್ದೇವೆ. ಪ್ರಮಾಣವಚನದ ಬಳಿಕ ಆ. 19ಕ್ಕೆ ಮೊದಲ ಅಧಿವೇಶನ ನಡೆದಿತ್ತು. ಪ್ರಧಾನಿಯವರು ಸಚಿವ ಸಂಪುಟದ ಹೊಸ ಸದಸ್ಯರನ್ನು ರಾಜ್ಯ ಸಭೆ ಮತ್ತು ಲೋಕಸಭೆಯಲ್ಲಿ ಪರಿಚಯ ಮಾಡುವ ಸಂಪ್ರದಾಯ ನೆಹರೂ ಕಾಲದಿಂದಲೂ ಇದೆ. ಆದರೆ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಬಾರಿ ಪರಿಚಯ ಮಾಡಲು ವಿಪಕ್ಷಗಳು ಬಿಡಲಿಲ್ಲ. ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಹ ಘಟನೆ ವಿಪಕ್ಷದಿಂದ ನಡೆದಿದೆ. ಇದಕ್ಕಾಗಿ ನಮ್ಮ ಪಕ್ಷದ ಹಿರಿಯರು ಲೋಕಸಭೆಯಲ್ಲಿ ಹೊಸಮಂತ್ರಿಗಳನ್ನು ಪರಿಚಯಿಸಲು ಸಾಧ್ಯವಾಗದ್ದಕ್ಕೆ ಜನರ ಎದುರು ಅವರನ್ನು ಕರೆದುಕೊಂಡು ಹೋಗಿ ಜನಾಶೀರ್ವಾದ ಮಾಡಿಸುವ ತೀರ್ಮಾನ ತೆಗೆದುಕೊಂಡರು. ಇದಕ್ಕಾಗಿ ಆ. 16ರಿಂದ ನೂತನ 43 ಸಚಿವರು ಪ್ರವಾಸ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜ ಗೌಡ, ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ರಾಷ್ಟ್ರೀಯ ಹಿಂದುಳಿದ ವರ್ಗಗಳಮೋರ್ಚಾದ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.