ಮಂಗಳೂರು | ತುಳುವಿನಲ್ಲಿ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ ಸಚಿವ ಅಂಗಾರ
ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ 75 ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮವು ನಗರದ ಕೇಂದ್ರ ಮೈದಾನದಲ್ಲಿ ನಡೆಯಿತು. ಮೀನುಗಾರಿಕೆ, ಬಂದರು ಹಾಗೂ ಜಲಸಾರಿಗೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರ ಅವರು ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದ ಬಳಿಕ ತುಳುವಿನಲ್ಲಿಯೇ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿರುವುದು ವಿಶೇಷ.
ದೇಶದ ಸ್ವಾತಂತ್ರ್ಯ ಕ್ಕಾಗಿ ಹೋರಾಡಿ ಮಡಿದ ಮಹಾತ್ಮರನ್ನು ಮರೆಯದೆ ನಮ್ಮ ರಾಷ್ಟ್ರದ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು ಎಂದು ತಿಳಿಸಿದರು.
ಸಚಿವರು 1837 ರ ಅಮರ ಸುಳ್ಯ ಸಂಗ್ರಾಮದ ನೆನಪಿಗಾಗಿ ಸುಳ್ಯ ತಾಲೂಕಿನ ಬೆಳ್ಳಾರೆಯ ಬಂಗ್ಲಗುಡ್ಡೆಯಲ್ಲಿ ಸ್ಮಾರಕ ಮಾಡಲು ತೀರ್ಮಾನಿಸಲಾಗಿದೆ. ದೇಶವನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಕಟ್ಟುವ ಸುವರ್ಣ ಸಂದರ್ಭ ನಮಗೆ ಇಂದು ಒದಗಿ ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆ ಪಡಬೇಕಾದ ವಿಚಾರ ಎಂದು ಹೇಳಿದರು.
ಅನೇಕ ಗಂಭೀರ ಸವಾಲಿನ ಮಧ್ಯೆಯೂ ರಾಷ್ಟ್ರ ಜೀವನದ ಭಿನ್ನತಾ ಮೌಲ್ಯಗಳ ಅಡಿಗಳಲ್ಲಿ ಕರೋನ ಇನ್ನಿತರ ಸವಾಲುಗಳಿಗೆ ಉತ್ತರ ಕೊಡಬೇಕಾಗಿದೆ. ಕಳೆದ 74 ವರ್ಷಗಳ ಪರಿಶ್ರಮದ ನಂತರವೂ ದೇಶವಾಸಿಗಳ ಪೈಕಿ ಕಟ್ಟ ಕಡೆಯ ಬಡವನವರೆಗೆ ಕೋಟಿ ಕೋಟಿ ಭಾರತೀಯರ ಹೃದಯಕ್ಕೆ ನಮ್ಮ ಸ್ವಾತಂತ್ರ್ಯದ ಸ್ಪರ್ಶ ಅನುಭವಕ್ಕೆ ಬರುತ್ತಿದೆಯಾ ಎಂಬುದನ್ನು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ ಎಂದು ಸಚಿವರು ಹೇಳಿದರು.
ಕೆಲ ಹೊತ್ತು ತುಳುವಿನಲ್ಲಿ ಮಾತನಾಡಿದ ಸಚಿವರು ಬಳಿಕ ಕನ್ನಡದಲ್ಲಿ ಭಾಷಣ ಮುಂದುವರೆಸಿ,
ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಂಡಿದೆ ಹಾಗೂ ಆರ್ಥಿಕ ಸಾಮಾಜಿಕ ಚಟುವಟಿಕೆಗೆ ಚೈತನ್ಯ ತುಂಬುವಲ್ಲಿ ಯಶಸ್ವಿಯಾಗಿದೆ. ಕೊರೋನಾ ಸಂಕಷ್ಟಗಳ ಮಧ್ಯೆಯೂ ಅಭಿವೃದ್ಧಿ ಕಾರ್ಯಗಳಿಗೆ ತಡೆ ಬಿದ್ದಿಲ್ಲ. ವಿಶ್ವವನ್ನೇ ತಲ್ಲಣಗೊಳಿಸಿದ ಕೋವಿಡ್ ನಿಯಂತ್ರಣಕ್ಕೆ ಈಗಾಗಲೇ 12,56,821 ಮಂದಿಗೆ ಉಚಿತ ಲಸಿಕೆ ನೀಡಲಾಗಿದೆ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿಯೊಂದಿಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉನ್ನತೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಾರ್ಯ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.