ಕೆರಿಬಿಯನ್ ದ್ವೀಪ ರಾಷ್ಟ್ರ ಹೈಟಿಯಲ್ಲಿ ಭೀಕರ ಭೂಕಂಪ | 7.2 ತೀವ್ರತೆಗೆ 300 ಕ್ಕೂ ಅಧಿಕ ಬಲಿ
ಪೋರ್ಟ್-ಔ-ಪ್ರಿನ್ಸ್: ಕೆರೆಬಿಯನ್ ದ್ವೀಪ ರಾಷ್ಟ್ರ ಹೈಟಿಯಲ್ಲಿ ಭೀಕರ ಭೂಕಂಪ ಸಂಭವಿಸಿದೆ. ದುರ್ಘಟನೆಯಲ್ಲಿ 304ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆಯು 7.2 ರಷ್ಟು ದಾಖಲಾಗಿದ್ದು, ನೋಡನೋಡುತ್ತಿದ್ದಂತೆಯೇ ನೂರಾರು ಕಟ್ಟಡಗಳು ಸಂಪೂರ್ಣ ನೆಲಸಮವಾಗಿವೆ. ಹೈಟಿ ರಾಜಧಾನಿ ಪೋರ್ಟ್-ಔ-ಪ್ರಿನ್ಸ್ ನಿಂದ 160 ಕಿಲೋಮೀಟರ್ ದೂರದಲ್ಲಿ ಈ ಭೂಕಂಪ ಸಂಭವಿಸಿದೆ.
ಭೂಮಿಯು ಕಂಪಿಸುತ್ತಿದ್ದಂತೆ ಎಲ್ಲರೂ ತಮ್ಮ ತಮ್ಮ ಮನೆಗಳನ್ನ ಬಿಟ್ಟು ಹೊರಗೆ ಓಡೋಡಿ ಬಂದಿದ್ದಾರೆ. ಆದರೆ ಮನೆಯಿಂದ ಹೊರ ಬರಲು ತಡವಾದವರು ಮತ್ತು ಮನೆಯಲ್ಲೇ ಇದ್ದವರು ಅವಶೇಷಗಳಡಿ ಸಿಲುಕಿ ಸತ್ತುಹೋಗಿದ್ದಾರೆ. ಇನ್ನೂ ಹಲವರು ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ನೂರಾರು ಮಂದಿ ಭೂಕಂಪಕ್ಕೆ ಸಿಲುಕಿ ಕಣ್ಮರೆಯಾಗಿದ್ದಾರೆ. ಸದ್ಯ ಅವಶೇಷಗಳಡಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಇನ್ನು ಭೂಕಂಪದಿಂದ ಹೈಟಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡಲೇ ಸೂಕ್ತ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.