ಮೂರನೇ ಅಲೆ ಎದುರಿಸಲು ದ.ಕ ಜಿಲ್ಲೆ ಸರ್ವ ರೀತಿಯಲ್ಲಿಯೂ ಸಜ್ಜು | ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾಹಿತಿ

ಮಂಗಳೂರು: ಕೊರೋನಾ ಮೂರನೇ ಅಲೆ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈಗಾಗಾಲೇ ಕಾರ್ಯಪ್ರವೃತ್ತವಾಗಿದ್ದು, ಜಿಲ್ಲಾಡಳಿತ ಏನೆಲ್ಲಾ ಕ್ರಮ ಕೈಗೊಂಡಿದೆ ಎಂಬುದರ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ಆಯೋಜಿಸಲಾದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಸ್ತುತ ಖಾಸಗಿ ಆಸ್ಪತ್ರೆಗಳ 4-5 ಸಾವಿರ ಬೆಡ್‌ಗಳ ಸಹಿತ 9 ಸಾವಿರದಷ್ಟು ಬೆಡ್ ಸಿದ್ಧಪಡಿಸಿ ಇಡಲಾಗಿದೆ. ಮಕ್ಕಳಿಗಾಗಿಯೇ ಪ್ರತ್ಯೇಕ 75 ಆಕ್ಸಿಜನ್ ಬೆಡ್‌ಗಳ ಸಹಿತ ವೆನ್ಲಾಕ್‌ನಲ್ಲಿ ಆರಂಭಿಸಲಾಗುತ್ತಿರುವ 32 ಬೆಡ್‌ಗಳ ಹೈಟೆಕ್ ಐಸಿಯುನಲ್ಲಿ ಶೇ.50ರಷ್ಟು ಮಕ್ಕಳಿಗೆ ಮೀಸಲಿರಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಜಿಲ್ಲೆಗೆ ಪ್ರಸ್ತುತ ಪೂರೈಕೆಯಾಗುತ್ತಿರುವ ವ್ಯಾಕ್ಸಿನ್ ಜತೆಗೆ ಸುಮಾರು 1 ಲಕ್ಷದಷ್ಟು ಹೆಚ್ಚುವರಿ ವ್ಯಾಕ್ಸಿನ್ ಪೂರೈಕೆ ಮಾಡುವಂತೆ ಗುರುವಾರ ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೇಡಿಕೆ ಸಲ್ಲಿಸಲಾಗುವುದು ಎಂದರು.

ಕಾಸರಗೋಡು ಭಾಗದಲ್ಲಿ ಪಾಸಿಟಿವಿಟಿ ದರ ಹೆಚ್ಚಿದ್ದರೂ, ಜಿಲ್ಲೆಯಲ್ಲಿ ಪಾಸಿಟಿವಿಟಿ ದರ 4.75ರಷ್ಟು ಇದೆ ಎಂದಾದರೆ ಗಡಿಯ ವಿಚಾರದಲ್ಲಿ ಜಿಲ್ಲಾಡಳಿತ ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿಯೇ ಇದೆ. ಗಡಿ ಭಾಗದ ಗ್ರಾಮಗಳಲ್ಲಿ ಹೆಚ್ಚಿನ ವ್ಯಾಕ್ಸಿನೇಶನ್ ಕಾರ್ಯಕ್ರಮ ಮಾಡುವುದು ಸದ್ಯದ ಪ್ರಮುಖ ನಿರ್ಧಾರವಾಗಿದೆ ಎಂದರು.

ನಾಗರಪಂಚಮಿ ಸಹಿತವಾಗಿ ಅಷ್ಟಮಿ, ಚೌತಿ ಮೊದಲಾದ ಹಬ್ಬಗಳ ಸಾರ್ವಜನಿಕ ಆಚರಣೆಗೆ ಜಿಲ್ಲೆಯಲ್ಲಿ ಅವಕಾಶ ನೀಡಲಾವುದಿಲ್ಲ. ಸರ್ಕಾರಿ ಶಾಲೆ, ಪಿಯು ತರಗತಿ ಆರಂಭಕ್ಕೆ ಆರಂಭಿಸಲು ಅನುಮತಿ ನೀಡಿದ್ದರೂ, ಜಿಲ್ಲೆಯಲ್ಲಿ ಸ್ವಲ್ಪ ತಡವಾಗಿ ಆರಂಭಿಸುವ ಚಿಂತನೆಯಿದೆ. ಸ್ವಾಯತ್ತ ಕಾಲೇಜುಗಳು ಮತ್ತು ಡೀಮ್ಡ್ ಟು ಬಿ ವಿಶ್ವವಿದ್ಯಾಲಯಗಳು ತರಗತಿ ಆರಂಭಿಸುವ ಮುನ್ನ ಅಳವಡಿಸಿಕೊಂಡಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಕಾಲೇಜು ಶಿಕ್ಷಣ ಇಲಾಖೆಯಲ್ಲಿ ನೇಮಕ ಮಾಡಲಾಗಿರುವ ನೋಡಲ್ ಅಧಿಕಾರಿಯ ಗಮನಕ್ಕೆ ತಂದು ಮುಂದುವರಿಯುವಂತೆ ಸೂಚನೆ ನೀಡಲಾಗಿದೆ.
ವೀಕೆಂಡ್ ಕರ್ಪ್ಯೂ ವೇಳೆ ಪರೀಕ್ಷೆಗಳು ಇದ್ದಲ್ಲಿ ಹಾಲ್ ಟಿಕೆಟ್ ತೋರಿಸಿದರೆ ಪರೀಕ್ಷಾ ಕೇಂದ್ರಕ್ಕೆ ತೆರಳಲು ಅವಕಾಶವಿದೆ ಎಂದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿ, ಕಾಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ವಿಜಯ್ ಕೋಟ್ಯಾನ್ ಪಡು ಕಾರ್ಯಕ್ರಮ ನಿರೂಪಿಸಿದರು.

Leave A Reply

Your email address will not be published.