ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದ ದಿನದ ಸವಿನೆನಪಿಗಾಗಿ ಇನ್ನು ಮುಂದೆ ಆಗಸ್ಟ್ 7 “ರಾಷ್ಟ್ರೀಯ ಜಾವಲಿನ್ ದಿನ” |ಅಥ್ಲೇಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ದಿಂದ ಘೋಷಣೆ
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಜಾವೆಲಿನ್ ಥ್ರೋ ಕ್ರೀಡೆಯಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ ನೀರಜ್ ಚೋಪ್ರಾ. ಈ ದಾಖಲೆ ಸದಾ ನೆನಪು ಉಳಿಯುವಂತೆ ಮಾಡಲು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಆಗಸ್ಟ್ 7 ನೇ ತಾರೀಖನ್ನು ರಾಷ್ಟ್ರೀಯ ಜಾವೆಲಿನ್ ಡೇ ಹೆಸರಿನಲ್ಲಿ ಆಚರಿಸಲು ನಿರ್ಧರಿಸಿದೆ.
ಶತಕೋಟಿ ಭಾರತೀಯರ ಶತಮಾನದ ಕನಸು, ನೀರಜ್ ಚೋಪ್ರಾರವರ ಒಲಿಂಪಿಕ್ಸ್ ನ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕವನ್ನು ಎತ್ತಿ ಹಿಡಿದು ದೇಶಕ್ಕೆ ಕೀರ್ತಿ ತರುವ ಮೂಲಕ ನನಸಾಗಿಸಿದ್ದಾರೆ.
ಅಥ್ಲೀಟ್ಗಳಿಗೆ ಸನ್ಮಾನ ಮಾಡುವ ಕಾರ್ಯಕ್ರಮದಲ್ಲಿ, ದೇಶದಾದ್ಯಂತ ಜಾವೆಲಿನ್ ಕ್ರೀಡೆಯನ್ನು ಪ್ರೋತ್ಸಾಹಿಸಲು ಆಗಸ್ಟ್ 7 ನೇ ತಾರೀಖನ್ನು ರಾಷ್ಟ್ರೀಯ ಜಾವೆಲಿನ್ ದಿನವಾಗಿ ಆಚರಿಸಲಾಗುವುದು ಎಂದು ಎಎಫ್ಐ ಪ್ಲಾನಿಂಗ್ ಕಮಿಷನ್ ಚೇರ್ಮನ್ ಲಲಿತ್ ಭಾನೋಟ್ ಹೇಳಿದ್ದಾರೆ.
ಇಷ್ಟೇ ಅಲ್ಲದೆ, ಅಂತರ್ ಜಿಲ್ಲಾ ಕಾಂಪಿಟಿಷನ್ಗಳನ್ನು ನಡೆಸಲಾಗುವುದು. ಜೊತೆಗೆ ಅಗತ್ಯವಿದ್ದಲ್ಲಿ ಜಾವೆಲಿನ್ಗಳನ್ನು ಪೂರೈಕೆ ಕೂಡ ಮಾಡಲಾಗುವುದು. ಇಂಥಹ ಸ್ಪರ್ಧೆಗಳನ್ನು ರಾಷ್ಟ್ರ ಮಟ್ಟದ ಕಾರ್ಯಕ್ರಮಗಳನ್ನಾಗಿ ಪರಿವರ್ತಿಸಲು ಚಿಂತಿಸಲಾಗಿದೆ ಎಂದಿದ್ದಾರೆ.
ಇದುವರೆಗೂ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಯಾವುದೇ ಪದಕ ಗೆದ್ದಿರಲಿಲ್ಲ. ಈಗ 23 ವರ್ಷದ ಚೋಪ್ರಾ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ಕೊಡುವ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.