ಮಂಗಳೂರು | ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯನ್ನು ಬಾವಿಗಿಳಿದು ರಕ್ಷಿಸಿದ ಮಹಿಳೆ | ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಬೆಕ್ಕಿನ ಮರಿಗೆ ಜೀವ ಕೊಟ್ಟ ಪ್ರಾಣಿ ಪ್ರೇಮಿ
ಮಂಗಳೂರು: ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯೊಂದನ್ನು ಪ್ರಾಣಿಪ್ರೇಮಿ ರಜಿನಿ ದಾಮೋದರ ಶೆಟ್ಟಿ ಎಂಬುವವರು ಬಾವಿಗಿಳಿದು ರಕ್ಷಿಸಿದ ಘಟನೆ ನಗರದ ಜೆಪ್ಪು ಬಳಿ ನಡೆದಿದೆ.
ಜೆಪ್ಪು ಬಳಿಯ ಸಂದೀಪ್ ಎಂಬುವವರ ನೀರಿದ್ದ ಬಾವಿಗೆ ಬೆಕ್ಕಿನ ಮರಿ ಬಿದ್ದಿತ್ತು. ಅದಕ್ಕೆ ಮೇಲೆ ಬರಲಾಗದೆ ಕಲ್ಲೊಂದನ್ನು ಆಶ್ರಯಿಸಿ ಕುಳಿತಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮಂಗಳೂರಿನ ಪ್ರಾಣಿಪ್ರೇಮಿ ರಜಿನಿ ದಾಮೋದರ ಶೆಟ್ಟಿ, ತನ್ನ ಪತಿಯ ಸಹಾಯದಿಂದ ಹಗ್ಗ ಕಟ್ಟಿಕೊಂಡು ಬಾವಿಗೆ ಇಳಿದು ಬೆಕ್ಕಿನ ಮರಿ ರಕ್ಷಣೆ ಮಾಡಿದ್ದಾರೆ.
ಮಂಗಳೂರಿನ ರಜಿನಿ ದಾಮೋದರ ಶೆಟ್ಟಿ ಅವರು ಈಗಾಗಲೇ ತಮ್ಮ ಪ್ರಾಣಿಪ್ರೇಮದಿಂದ ಸಾರ್ವಜನಿಕ ವಲಯದಲ್ಲಿ ಚಿರಪರಿಚಿತರಾಗಿದ್ದಾರೆ. ಈ ಹಿಂದೆಯೂ ಅವರು ಇಂತಹುದೇ ರೀತಿಯಲ್ಲಿ ಸಾಹಸದ ಮೂಲಕ 80 ಅಡಿ ಪಾಳು ಬಾವಿಗೆ ಬಿದ್ದಿದ್ದ ನಾಯಿಯನ್ನು ರಜಿನಿ ಅವರು ರಕ್ಷಿಸಿ ಪ್ರಾಣಿಪ್ರೇಮ ಮೆರೆದಿದ್ದರು.
ಶ್ವಾನಪ್ರಿಯೆಯಾಗಿರುವ ಇವರ ಮನೆಯಲ್ಲಿ 40ಕ್ಕಿಂತಲೂ ಅಧಿಕ ನಾಯಿಗಳಿವೆ. ಅಲ್ಲದೆ, ದಿನವೂ ಸಾಕಷ್ಟು ಬೀದಿ ನಾಯಿಗಳಿಗೆ ಅನ್ನ ನೀಡುತ್ತಾರೆ ಎನ್ನುವುದು ಇನ್ನೊಂದು ವಿಶೇಷ. ರಜಿನಿ ದಾಮೋದರ ಶೆಟ್ಟಿ ಅವರ ಪ್ರಾಣಿಪ್ರೇಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಪಾರ ಶ್ಲಾಘನೆ ವ್ಯಕ್ತವಾಗಿದೆ.