ನರೇಗಾ ಯೋಜನೆಯಡಿ ಸ್ತ್ರೀಯರ ಪಾಲ್ಗೊಳ್ಳುವಿಕೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಉಡುಪಿ, ದಕ್ಷಿಣ ಕನ್ನಡ ದ್ವಿತೀಯ
ರಾಷ್ಟ್ರೀಯ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಮಹಿಳೆಯರ ಪಾಲ್ಗೊಳ್ಳುವಿಕೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಶೇ. 50 ದಾಟಿದ್ದು, ಉಡುಪಿ ಜಿಲ್ಲೆ ರಾಜ್ಯದಲ್ಲೇ ಅತ್ಯಧಿಕ ಶೇ. 62ರಷ್ಟು ದಾಖಲಿಸಿ, ಸಾಧನೆ ಮಾಡಿದೆ.
ಮಹಿಳೆಯರ ಭಾಗವಹಿಸುವಿಕೆ ಕನಿಷ್ಠ ಶೇ. 50 ಇರಬೇಕೆಂಬ ಉದ್ದೇಶದಿಂದ ಆರಂಭಿಸಲಾಗಿದ್ದ ಮಹಿಳಾ ಕಾಯಕೋತ್ಸವದ ಮೊದಲ ಹಂತ ಇದೀಗ ಫಲ ನೀಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ವನಿತೆಯರ ಪಾಲ್ಗೊಳ್ಳುವಿಕೆ ಶೇ. 50-62ಕ್ಕೇರಿದೆ.
ಉಡುಪಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಪ್ರತೀ ತಾಲೂಕಿನ 10 ಗ್ರಾಮ ಪಂಚಾಯತ್ ಗಳನ್ನು ಆಯ್ಕೆ ಮಾಡಿ ಸಮೀಕ್ಷೆ ನಡೆಸಲಾಗಿತ್ತು. ಸಂಯೋಜಕರು ಮತ್ತು ಗ್ರಾ.ಪಂ. ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಮಹಿಳೆಯರನ್ನು ನರೇಗಾದತ್ತ ಬರಲು ಮನವೊಲಿಸಿದ್ದರು.
ದ.ಕ ಜಿಲ್ಲೆಯಲ್ಲಿ 1ನೇ ಹಂತದಲ್ಲಿ ಪ್ರತೀ ತಾಲೂಕಿನ 10 ಗ್ರಾಮ ಪಂಚಾಯತ್ ಮತ್ತು ಪ್ರಸ್ತುತ 2ನೇ ಹಂತದಲ್ಲೂ 10 ಗ್ರಾಮ ಪಂಚಾಯತ್ ಗಳಲ್ಲಿ ಸಮೀಕ್ಷೆ ಈಗಾಗಲೇ ಆಗುತ್ತಿದೆ.
ನರೇಗಾದಲ್ಲಿ ಸಮಾನ ವೇತನ ಇರುವುದರಿಂದ ಮತ್ತು ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಹೆಚ್ಚಿರುವುದರಿಂದ ಸ್ತ್ರೀಯರು ಈ ಯೋಜನೆಯತ್ತ ಆಸಕ್ತಿ ತೋರುತ್ತಿದ್ದಾರೆ. ಆದರೆ ಸಮುದಾಯ ಕೆಲಸಗಳಿಗಿಂತ ವೈಯಕ್ತಿಕ ಕೆಲಸಗಳಿಗೆ ಹೆಚ್ಚು ಒಲವು ಇದೆ ಎನ್ನುತ್ತಾರೆ ಯೋಜನಾ ಅಧಿಕಾರಿಗಳು.