ಧರ್ಮಸ್ಥಳ | ಜಿಲ್ಲಾಡಳಿತದ ಪೂರ್ವಾಪರ ಇಲ್ಲದ ಆದೇಶದಿಂದ ವಸತಿಗೃಹವಿಲ್ಲದೆ ಮಳೆಯ ನಡುವೆ ರಸ್ತೆಯಲ್ಲೇ ಮಲಗಿದ ಭಕ್ತರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದಲ್ಲಿ ಕರ್ಫ್ಯೂ ಜಾರಿ ಗೊಳಿಸಿ, ಬಸ್ ಸಂಚಾರಕ್ಕೆ ಅವಕಾಶ ನೀಡಿ, ಉಳಿದ ವ್ಯವಸ್ಥೆಯನ್ನು ತಡೆಹಿಡಿದ ಜಿಲ್ಲಾಡಳಿತದ ಕ್ರಮದಿಂದ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರು ರಾತ್ರಿ ಮಲಗಲು ವ್ಯವಸ್ಥೆ ಇಲ್ಲದೇ, ರಸ್ತೆಯಲ್ಲಿ ಮಲಗಿ, ಮಳೆಗೆ ನರಕ ಅನುಭವಿಸಿದ ಘಟನೆ ವರದಿಯಾಗಿದೆ.

ಪ್ರಮುಖವಾಗಿ ಜಿಲ್ಲೆಯಲ್ಲಿ ಅತೀ ಹೆಚ್ಚು ಜನ ಸೇರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ವಾರಾಂತ್ಯದ ಎರಡು ದಿನದಲ್ಲಿ ಕಡ್ಡಾಯವಾಗಿ ಮುಚ್ಚಬೇಕೆಂದು ಜಿಲ್ಲಾಡಳಿತ ಆದೇಶ ಮಾಡಿತ್ತು ಹಾಗೂ ಈ ಸಂದರ್ಭದಲ್ಲಿ ಭಕ್ತರು ತಂಗಲು ವಸತಿ ಗೃಹಗಳನ್ನೂ ನೀಡಬಾರದು, ವಾರದ ದಿನಗಳಲ್ಲಿ ವಸತಿಗೃಹ ನೀಡಬೇಕಾದರೆ ಭಕ್ತರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಹೊಂದಿರಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.

ಆದರೆ ಜಿಲ್ಲಾಡಳಿತದ ಪೂರ್ವಾಪರ ಇಲ್ಲದ ಈ ಆದೇಶದಿಂದ ಬಡ ಭಕ್ತರು ಮಾತ್ರ ಪಡಬಾರದ ಕಷ್ಟ ಅನುಭವಿಸಿದ್ದಾರೆ. ಬಸ್ ಸಂಚಾರಕ್ಕೆ ಅವಕಾಶ ನೀಡಿ, ಉಳಿದ ವ್ಯವಸ್ಥೆಯನ್ನು ತಡೆಹಿಡಿದ ಜಿಲ್ಲಾಡಳಿತದ ಕ್ರಮದಿಂದ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರು ರಾತ್ರಿ ಮಲಗಲು ವ್ಯವಸ್ಥೆ ಇಲ್ಲದೇ, ರಸ್ತೆಯಲ್ಲಿ ಮಲಗಿ, ಮಳೆಗೆ ನರಕ ಯಾತನೆಯನ್ನು ಅನುಭವಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಇದ್ದರೂ ಧರ್ಮಸ್ಥಳಕ್ಕೆ ಆಗಮಿಸಿದ ಭಕ್ತರು, ರಾತ್ರಿ ಮಲಗಲು ವ್ಯವಸ್ಥೆ ಇಲ್ಲದೆ ಸಂಕಷ್ಟ ಅನುಭವಿಸಿದ್ದಾರೆ.

ವಸತಿಗೃಹಗಳಲ್ಲಿ ತಂಗಲು ಅವಕಾಶವಿಲ್ಲ ಕಾರಣ ಬೇರೆ ದಾರಿ ತೋಚದೆ ಜನರು ರಸ್ತೆಯಲ್ಲೇ ಮಲಗಿದ್ದಾರೆ. ವಾರಾಂತ್ಯದಲ್ಲಿ ದೇವಸ್ಥಾನ ಬಂದ್ ಆಗಿರುವುದರಿಂದ ಸೋಮವಾರ ಅತೀ ಹೆಚ್ಚು ಜನಸಂದಣಿ ಸೇರುವ ಭಯದಿಂದ ಹೊರ ಜಿಲ್ಲೆಗಳ ಭಕ್ತರು ಆದಿತ್ಯವಾರ ರಾತ್ರಿಯೇ ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ.

ಮಂಜುನಾಥಸ್ವಾಮಿ ದೇವಸ್ಥಾನ ಬಂದ್ ಆಗಿದ್ದರೂ, ಧರ್ಮಸ್ಥಳಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕೆಎಸ್ಆರ್‌ಟಿಸಿ ಬಸ್ ಸಂಚಾರವಿದ್ದು, ಅದೇ ಬಸ್‌ನಲ್ಲಿ ಭಕ್ತರು ಕ್ಷೇತ್ರದತ್ತ ಬಂದಿದ್ದಾರೆ. ಕೆಲವರು ಖಾಸಗಿ ವಾಹನದಲ್ಲೂ ಶ್ರೀಕ್ಷೇತ್ರ ಧರ್ಮಸ್ಥಳದತ್ತ ಬಂದಿದ್ದಾರೆ.

ಕ್ಷೇತ್ರವನ್ನು ಬಂದ್ ಮಾಡಲು ಆದೇಶಿಸಿದ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಧರ್ಮಸ್ಥಳ ಗಡಿಗಳಲ್ಲೂ ತಪಾಸಣೆ ಇಲ್ಲದೇ ಮುಕ್ತ ಪ್ರವೇಶ ನೀಡಿದೆ. ವೀಕೆಂಡ್ ಕರ್ಫ್ಯೂ ಇದ್ದರೂ ತಪಾಸಣೆ ಮಾಡದೇ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ಹೀಗಾಗಿ ರಾತ್ರಿ ಕ್ಷೇತ್ರಕ್ಕೆ ಬಂದ ಭಕ್ತರು ಸೋಮವಾರ ಬೆಳಗ್ಗಿನವರೆಗೆ ರಸ್ತೆ, ವಸತಿಗೃಹಗಳ ಆಸುಪಾಸಿನಲ್ಲಿ ಮಲಗಿದ್ದಾರೆ.

‘ವಾರಾಂತ್ಯದಲ್ಲಿ ದೇವಸ್ಥಾನಗಳನ್ನು ಬಂದ್ ಮಾಡಿದ ದಕ್ಷಿಣ ಕನ್ನಡ ಜಿಲ್ಲಾಡಳಿತ ಆದಿತ್ಯವಾರ ರಾತ್ರಿ ಬರುವ ಭಕ್ತರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಸೋಮವಾರ ಒಂದು ದಿನ ರಜೆಯಲ್ಲಿ ಧರ್ಮಸ್ಥಳ ದೇವಸ್ಥಾನಕ್ಕೆ ಬರಬೇಕಾದರೆ ಆದಿತ್ಯವಾರ ಇಲ್ಲಿಗೆ ಬರಲೇಬೇಕು. ರಾತ್ರಿ ಇಲ್ಲಿಗೆ ಬಂದು ಭಾರೀ ಕಷ್ಟ ಅನುಭವಿಸಿದ್ದೇವೆ. ಜಿಲ್ಲಾಡಳಿತ ಆದೇಶದ ಪ್ರಕಾರವಾಗಿ ದೇವಸ್ಥಾನದವರು ರೂಂ ನೀಡುತ್ತಿಲ್ಲ. ಹಾಗಾಗಿ ಮಹಿಳೆಯರು, ಮಕ್ಕಳ ಜೊತೆ ರಾತ್ರಿ ರಸ್ತೆಯಲ್ಲೇ ಮಲಗಿದ್ದೇವೆ. ಮಳೆ ಬರುತ್ತಿದ್ದರಿಂದ ಯಾರೂ ರಾತ್ರಿ ನಿದ್ದೆ ಮಾಡಿಲ್ಲ’ ಎಂದು ಭಕ್ತರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸುಮಾರು ಇನ್ನೂರಕ್ಕೂ ಹೆಚ್ಚು ಭಕ್ತರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ರಾತ್ರಿ ಇಡೀ ರಸ್ತೆಯಲ್ಲೇ ನಿದ್ರೆಯಿಲ್ಲದೇ ಜಾಗರಣೆ ಮಾಡಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ವಾರಾಂತ್ಯದ ಕರ್ಫ್ಯೂ ಹೆಸರಿನಲ್ಲಿ ಭಕ್ತರ ಮೇಲೆ ಪ್ರಹಾರ ಮಾಡುತ್ತಿದೆ. ಜಿಲ್ಲಾಡಳಿತ ಮಧ್ಯಾಹ್ನ 2 ಗಂಟೆಯ ತನಕ ಜನರ ಓಡಾಟಕ್ಕೆ ಅವಕಾಶ ನೀಡಿದೆ. ಆದರೆ ದೂರದ ಊರಿನಿಂದ ಬಂದ ಭಕ್ತರು ಮಾತ್ರ ರಾತ್ರಿ ತಂಗಲು ರೂಂ ನೀಡಿದರೆ ಕೊರೊನಾ ಹರಡುವ ಭಯ ಜಿಲ್ಲಾಡಳಿತಕ್ಕೆ ಕಾಡುತ್ತಿದೆ ಎಂದು ಧರ್ಮಸ್ಥಳದ ಸ್ಥಳೀಯರು ಜಿಲ್ಲಾಡಳಿತದ ನಡೆಯನ್ನು ದೂರಿದ್ದಾರೆ.

Leave A Reply

Your email address will not be published.