ಆಗಸ್ಟ್ 23ರಿಂದ ಪ್ರೌಢ ಸಹಿತ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ತರಗತಿ ಆರಂಭ | ತಜ್ಞರ ಸಲಹೆಯಂತೆ ಶಾಲೆ ತೆರೆಯಲು ಕ್ರಮ ಕೈಗೊಂಡ ಬೊಮ್ಮಾಯಿ
ರಾಜ್ಯದಲ್ಲಿ ಈಗಾಗಲೇ ಕೊರೋನಾ 3ನೇ ಅಲೆಯ ಮುನ್ಸೂಚನೆ ನೀಡಿದ್ದು,ಸದ್ಯ ಗಡಿನಾಡ ಕೆಲ ಜಿಲ್ಲೆಗಳಲ್ಲಿ ವಾರಾಂತ್ಯದ ಲಾಕ್ ಡೌನ್ ಜೊತೆಗೆ ನೈಟ್ ಕರ್ಫ್ಯೂ ಹೇರಲಾಗಿದ್ದು ಈ ಮಧ್ಯೆ ಆಗಸ್ಟ್ 23 ರಿಂದ ಶಾಲಾ-ಕಾಲೇಜುಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇದೇ ಆಗಸ್ಟ್ 23 ರಿಂದ ರಾಜ್ಯಾದ್ಯಂತ 9, 10, 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿ ಆರಂಭಿಸಲು ಕ್ರಮ ಕೈಗೊಂಡಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಶಾಲಾ- ಕಾಲೇಜು ತೆರೆಯುವ ಬಗ್ಗೆ ಈಗಾಗಲೇ ತಜ್ಞರೊಂದಿಗೆ ಚರ್ಚಿಸಲಾಗಿದ್ದು,ಮೊದಲ ಹಂತದಲ್ಲಿ 9, 10, 11 ಹಾಗೂ 12 ನೇ ತರಗತಿಯನ್ನು ಆಗಸ್ಟ್ 23ರಿಂದ ತೆರೆಯಲು ಅವಕಾಶ ನೀಡಲಾಗುತ್ತಿದೆ. ಶಾಲಾ-ಕಾಲೇಜುಗಳನ್ನು ವಾರದಲ್ಲಿ ಎರಡು ಬ್ಯಾಚ್ ನಂತೆ ತರಗತಿ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದ್ದು,ಕೊರೋನಾ ನಿಯಂತ್ರಣ ಕಠಿಣ ಕ್ರಮದೊಂದಿಗೆ ಶಾಲಾ ಕಾಲೇಜು ಆರಂಭಿಸಲು ಅನುಮತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರಾಥಮಿಕ ಹಾಗೂ ಇತರೆ ತರಗತಿ ಆರಂಭ ಕುರಿತಂತೆ ಕೋವಿಡ್ 3ನೇ ಅಲೆ ನೋಡಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.