ದಕ್ಷಿಣ ಕನ್ನಡ | ಧರ್ಮಸ್ಥಳ, ಕುಕ್ಕೆ ಮತ್ತು ಕಟೀಲು ದೇವಾಲಯಗಳಿಗೆ ವಾರಾಂತ್ಯದಲ್ಲಿ ಪ್ರವೇಶ ನಿಷೇಧಿಸಿ ಜಿಲ್ಲಾಡಳಿತ ಆದೇಶ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ದೈನಂದಿನ ಪ್ರಕರಣದಲ್ಲಿ ಮತ್ತೆ ಏರಿಕೆಯಾಗುತ್ತಿರುವ ಕಾರಣ, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಇಂದಿನಿಂದ ಆ.15ರವರೆಗೆ ವಾರಂತ್ಯದಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದೇವಸ್ಥಾನಗಳಿಗೆ ಭಕ್ತಾದಿಗಳ ಪ್ರವೇಶ ಹಾಗೂ ವಸತಿಗೃಹದಲ್ಲಿ ತಂಗುವುದನ್ನು ಸಂಪೂರ್ಣ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.
ದಕ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ. 5.26ಕ್ಕೆ ಏರಿಕೆಯಾಗಿದೆ. ಈ ನಡುವೆ ಲಾಕ್ ಡೌನ್ ಸಡಿಲಿಕೆಯ ಬಳಿಕ ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ, ಕರಾವಳಿಯ ಪ್ರತಿಷ್ಟಿತ ದೇವಸ್ಥಾನಗಳಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ, ಕುಕ್ಕೆ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೆಚ್ಚಿನ ಭಕ್ತಾದಿಗಳು ಆಗಮಿಸುತ್ತಿದ್ದಾರೆ.
ಸಂಭಾವ್ಯ 3ನೇ ಅಲೆ ಮುಂದಿರುವಾಗ ನಿಯಂತ್ರಣ ಕಷ್ಟಸಾಧ್ಯವಾದುದರಿಂದ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಹೊರರಾಜ್ಯ ಹೊರಜಿಲ್ಲೆಗಳಿಂದ ಭಕ್ತಾದಿಗಳು ಆಗಮಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಆದೇಶ ಹೊರಡಿಸಲಾಗಿದೆ.
ಆದೇಶದ ಪ್ರಕಾರ, ಕಟೀಲು, ಕುಕ್ಕೆ, ಧರ್ಮಸ್ಥಳ ದೇವಸ್ಥಾನದಲ್ಲಿ ಆ.15ರವರೆಗೆ ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಶನಿವಾರ ಮತ್ತು ಭಾನುವಾರ ವಾರಂತ್ಯದಲ್ಲಿ ದೇವರ ದರ್ಶನಕ್ಕೆ ಹಾಗೂ ಭಕ್ತಾದಿಗಳ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಇದಲ್ಲದೆ ವಾರಾಂತ್ಯದಲ್ಲಿ ವಸತಿ ಗೃಹಗಳಲ್ಲಿ ತಂಗುವುದಕ್ಕೂ ನಿಷೇಧ ಹೇರಲಾಗಿದೆ.
ಇದರೊಂದಿಗೆ ವಾರಾಂತ್ಯ ದಿನ ಹೊರತುಪಡಿಸಿ ಉಳಿದ ದಿನಗಳಲ್ಲಿ ವಸತಿಗೃಹಗಳಲ್ಲಿ ತಂಗಲು ಬರುವ ಭಕ್ತರು 72 ಗಂಟೆಗಳೊಳಗೆ ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸಿ ನೆಗೆಟಿವ್ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯವಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.