ಎರಡು ವರ್ಷಗಳಲ್ಲಿ 14 ರಿಂದ 18 ವಯಸ್ಸಿನ ಸುಮಾರು 24,568 ಮಕ್ಕಳು ಆತ್ಮಹತ್ಯೆ | ಸ್ಫೋಟಕ ಮಾಹಿತಿ ನೀಡಿದ ಕೇಂದ್ರ ಸರ್ಕಾರ

ಎರಡು ವರ್ಷಗಳ ಅವಧಿಯಲ್ಲಿ 14 ರಿಂದ 18 ವಯಸ್ಸಿನ ಸುಮಾರು 24,568 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೇಂದ್ರ ಸರ್ಕಾರ ಸ್ಫೋಟಕ ಮಾಹಿತಿ ನೀಡಿದೆ.

ಈ ಕುರಿತ ಮಾಹಿತಿಯನ್ನು ಅಪರಾಧ ದಾಖಲೆಗಳ ಘಟಕ (ಎನ್‌ಸಿಆರ್‌ಬಿ) ಸಂಸತ್ತಿಗೆ ತಿಳಿಸಿದೆ. 2017 ರಿಂದ 2019ರ ಅವಧಿಯಲ್ಲಿ ಈ ಘಟನೆ ನಡೆದಿದೆ.

2017ರಲ್ಲಿ 14–18ರೊಳಗಿನ 8,029 ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದರೆ, 2018ಕ್ಕೆ ಈ ಸಂಖ್ಯೆಯು 8,162 ಮತ್ತು 2019ಕ್ಕೆ 8,377ಕ್ಕೆ ಏರಿಕೆಯಾಗಿದೆ. ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಮಕ್ಕಳ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಕ್ರಮವಾಗಿ 3,115, 2,802, 2,527 ಮತ್ತು 2,035 ಮಕ್ಕಳ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.

24,568 ಮಕ್ಕಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣ ಪರೀಕ್ಷೆಯಲ್ಲಿ ಅನುತ್ತೀರ್ಣ ಆಗಿರುವುದು. 4,046 ಮಕ್ಕಳು ಈ ಕಾರಣಕ್ಕೆ ಸಾವಿನ ಹಾದಿ ಹಿಡಿದಿದ್ದಾರೆ ಎಂದು ಅದು ವಿವರಣೆ ನೀಡಿದೆ.

ಪರೀಕ್ಷೆಯಲ್ಲಿ ಫೇಲ್ ಆಗಿರುವುದು ಹೊರತಾಗಿ ಇನ್ನಿತರ
ಕಾರಣಗಳನ್ನು ನೀಡಿರುವ ಎನ್‌ಸಿಆರ್‌ಬಿ, ಮದುವೆಗೆ ಸಂಬಂಧಿಸಿದ ಸಮಸ್ಯೆಗಳಿಂದ 639 ಮಕ್ಕಳು ಸಾವಿಗೆ ಶರಣಾಗಿದ್ದಾರೆ. ಇದರಲ್ಲಿ 411 ಬಾಲಕಿಯರಾಗಿದ್ದಾರೆ. 3,315 ಮಕ್ಕಳು ಪ್ರೇಮ ವೈಫಲ್ಯದಿಂದ, 2,567 ಮಕ್ಕಳು ಅನಾರೋಗ್ಯದ ಕಾರಣ, 81 ಮಕ್ಕಳು ದೈಹಿಕ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವುಗಳನ್ನು ಹೊರತುಪಡಿಸಿದರೆ ಪ್ರೀತಿಪಾತ್ರರ ಸಾವು, ಮಾದಕ ದ್ರವ್ಯ ಮತ್ತು ಮದ್ಯ ವ್ಯಸನ, ಬೇಡದ ಗರ್ಭಧಾರಣೆ, ಸಾಮಾಜಿಕ ಪ್ರತಿಷ್ಠೆಗೆ ಹಾನಿ, ನಿರುದ್ಯೋಗ, ಬಡತನ ಕಾರಣಗಳಿಂದಾಗಿ ಮಕ್ಕಳು ಇಂಥಹ ಕೆಟ್ಟ ನಿರ್ಧಾರ ತೆಗೆದುಕೊಂಡಿರುವುದಾಗಿ ವಿವರಿಸಿದೆ.

ಚಿಕ್ಕಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲು ದುಃಖ, ಗೊಂದಲ, ಕೋಪ, ಒತ್ತಡ ಹೆಚ್ಚಿನದಾಗಿ ಕಾರಣವಾಗುತ್ತದೆ. ಹದಿಹರೆಯದವರಲ್ಲಿ ಒತ್ತಡ, ಆರ್ಥಿಕ ಅನಿಶ್ಚಿತತೆ, ನಿರಾಶೆ, ಖಿನ್ನತೆ, ಜೀವನದಲ್ಲಿ ಯಶಸ್ಸು ಕಾಣಲಿಲ್ಲವೆಂಬ ಹತಾಶೆ, ಪ್ರೇಮ ವೈಫಲ್ಯಗಳು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿರುತ್ತವೆ ಎಂದು ಚೈಲ್ಡ್ ರೈಟ್ಸ್ ಅಧ್ಯಕ್ಷೆ ಪೂಜಾ ಮರ್ವಾಹ ವಿವರಿಸಿದ್ದಾರೆ.

ಕೋವಿಡ್‌ ಸಾಂಕ್ರಾಮಿಕದಿಂದಾಗಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಹಾಗಾಗಿ ಶಾಲೆಗಳ ಪಠ್ಯಕ್ರಮದಲ್ಲಿ ಜೀವನ ಕೌಶಲ, ಮಾನಸಿಕ ಆರೋಗ್ಯ ವೃದ್ಧಿ, ಸ್ವಾಸ್ಥ್ಯದಂತಹ ವಿಷಯಗಳನ್ನು ಸೇರಿಸಬೇಕು ಎಂದು ಮಕ್ಕಳ ಹಕ್ಕುಗಳ ಹೋರಾಟಗಾರರು ಸಲಹೆ ನೀಡಿದ್ದಾರೆ.

Leave A Reply

Your email address will not be published.