ಬಂಟ್ವಾಳ : ಡೀಸೆಲ್ ಸಾಗಾಟ ಮಾಡುವ ಪೈಪ್ ಲೈನ್‌ನಿಂದ ಡೀಸೆಲ್ ಕಳ್ಳತನ ಬೆಳಕಿಗೆ
ಮಂಗಳೂರಿನಿಂದ ಹಾಸನ ಭಾಗಕ್ಕೆ ಡೀಸೆಲ್ ಸಾಗಾಟ ಮಾಡುವ ಪೈಪ್ ಲೈನ್ ನಿಂದ ಡೀಸೆಲ್ ಕಳವು ಮಾಡುತ್ತಿರುವ ಜಾಲವೊಂದು ಬಂಟ್ವಾಳ ತಾಲೂಕಿನ ಸೊರ್ನಾಡು ಬಳಿಯ ಅರ್ಬಿಯಲ್ಲಿ ಶುಕ್ರವಾರ ಬೆಳಕಿಗೆ ಬಂದಿದ್ದು, ಸುಮಾರು 1 ಸಾವಿರ ಲೀಟರ್ ಡೀಸೆಲ್ ಕಳವಾಗಿರುತ್ತದೆ ಎಂದು ಅಂದಾಜಿಸಲಾಗಿದೆ.
ಕೇಂದ್ರ ಸರಕಾರ ಸ್ವಾಮ್ಯದ ಕಂಪೆನಿಯೊಂದರ ಡೀಸೆಲ್ ಸಾಗಾಟ ಪೈಪ್ ಸೊರ್ನಾಡು ಖಾಸಗಿ ಜಮೀನಿನ ಮೂಲಕ ಹಾದು ಹೋಗಿದ್ದು, ಅದಕ್ಕೆ ಸ್ಥಳೀಯ ವ್ಯಕ್ತಿಯೋರ್ವ ಪೈಪ್ ಜೋಡಿಸಿ ಡೀಸೆಲ್ ಕಳವು ಮಾಡುತ್ತಿದ್ದ ಎನ್ನಲಾಗಿದೆ. ಡೀಸೆಲ್ ಸಾಗಾಟ ಕಂಪೆನಿಯ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಕಂಪೆನಿಗೆ ಡೀಸೆಲ್ ಪ್ರಮಾಣದಲ್ಲಿ ಸುಮಾರು 500 ಲೀ. ವ್ಯತ್ಯಾಸ ಕಂಡುಬಂದಿದ್ದು, ಬಳಿಕ ಮತ್ತೆ 500 ಲೀ. ಕಡಿಮೆಯಾಗಿತ್ತು. ಹೀಗಾಗಿ ಕಂಪೆನಿಯ ತಾಂತ್ರಿಕ ತಂಡ ಮೆಟಾಲಿಕ್ ತಂತ್ರಜ್ಞಾನದ ಮೂಲಕ ಪರಿಶೀಲಿಸಿದಾಗ ಸೊರ್ನಾಡು ಬಳಿ ಡೀಸೆಲ್ ಕಳವಾಗುತ್ತಿರುವುದು ಪತ್ತೆಯಾಗಿದೆ.
ಸ್ಥಳೀಯ ನಿವಾಸಿಯೋರ್ವನ ಜಮೀನಿನಲ್ಲಿ ಜೇಸಿಬಿ ಮೂಲಕ ಅಗೆದಾಗ ಡೀಸೆಲ್ ಕಳವು ಮಾಡುತ್ತಿರುವುದು ತಿಳಿದುಬಂದಿದೆ. ಆರೋಪಿಯು ಸುಮಾರು 20 ಅಡಿ ಆಳದಲ್ಲಿ ಹಾದು ಹೋಗಿರುವ ಪೈಪನ್ನು ಕೊರೆದು ಬಳಿಕ ಅದಕ್ಕೆ ಇನ್ನೊಂದು ಪೈಪ್ ಸಿಕ್ಕಿಸಿ, ಸುಮಾರು ಅರ್ಧ ಕಿ.ಮೀ.ದೂರದಲ್ಲಿ ಗೇಟ್ ವಾಲ್ ಬಳಸಿ ಡೀಸೆಲ್ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.