ಮೂವರು ವಲಸಿಗರಿಗೆ ಮಾತ್ರ ಸಚಿವ ಸ್ಥಾನ ಆರ್‌ಎಸ್‌ಎಸ್ ಸೂಚನೆ?

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರ್ಕಾರಕ್ಕೆ ಕೊಳ್ಳಿಯಿಟ್ಟು ಬಿಜೆಪಿ ಸೇರಿದ್ದ ಬಾಂಬೆ ಬ್ರದರ್ಸ್‌ ಇದೀಗ ಆರ್‌ಎಸ್‌ಎಸ್‌ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಿಜೆಪಿ ಸೇರಿದ್ದ ಮೂವರನ್ನು ಹೊರತು ಪಡಿಸಿ, ಉಳಿದವರಿಗೆ ಮಂತ್ರಿ ಸ್ಥಾನ ನೀಡಬಾರದು ಎಂದು ಆರ್‌ಎಸ್‌ಎಸ್‌ ಬೈಠಕ್‌ನಲ್ಲಿ ನಿರ್ಧಾರ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಚಾಮರಾಜಪೇಟೆಯಲ್ಲಿರುವ ಕೇಶವ ಕೃಪಾದಲ್ಲಿ ನಡೆದ ಆರ್‌ಎಸ್‌ಎಸ್‌ ಬೈಠಕ್‌ನಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದ ಶಾಸಕರ ಕಾರ್ಯವೈಖರಿ ಆರ್‌ಎಸ್‌ಎಸ್‌ ನಾಯಕರಿಗೆ ಸಮಾಧಾನ ತಂದಿಲ್ಲ. ಅದ್ರಲ್ಲೂ ಬಾಂಬೆ ಬ್ರದರ್ಸ್‌ ಪಕ್ಷ ಸೇರುವ ಮೊದಲು ಹೇಳಿದ ಮಾತನ್ನು ತಪ್ಪಿದ್ದಾರೆ.

ಅಧಿಕಾರವನ್ನು ಪಡೆದು ಎರಡು ವರ್ಷಗಳೇ ಕಳೆಯುತ್ತಾ ಬಂದರೂ ಕೂಡ ಡಾ.ಸುಧಾಕರ್‌, ಎಸ್.ಟಿ.ಸೋಮಶೇಖರ್‌, ಬೈರತಿ ಬಸವರಾಜ್‌ ಅವರನ್ನು ಹೊರತು ಪಡಿಸಿ ಉಳಿದ ಯಾವುದೇ ವಲಸೆ ಶಾಸಕರು ಕೂಡ ಆರ್‌ಎಸ್‌ಎಸ್‌ ನಾಯಕರನ್ನು ಭೇಟಿಯಾಗಿಲ್ಲ. ಅಲ್ಲದೇ ಅವರ ಕಾರ್ಯವೈಖರಿಯಿಂದ ಪಕ್ಷಕ್ಕೆ ಲಾಭವಾಗಿಲ್ಲ. ಹೀಗಾಗಿ ಈ ಮೂವರನ್ನು ಹೊರತು ಪಡಿಸಿ ಉಳಿದ ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನವನ್ನು ನೀಡದೆ, ನಿಗಮ ಮಂಡಳಿ ಸ್ಥಾನವನ್ನು ನೀಡಬೇಕು ಎಂದು ನಿರ್ಧಾರ ಕೈಗೊಳ್ಳಲಾಗಿದೆ.

ಅಲ್ಲದೆ, ಸಚಿವ ಸಂಪುಟದಲ್ಲಿ ಬಿಜೆಪಿಯ ಹಿರಿಯ ಶಾಸಕರಾದ ಆರ್.ಅಶೋಕ್‌, ಕಾರಜೋಳ, ಅಶ್ವಥ್‌ ನಾರಾಯಣ, ಅರವಿಂದ ಬೆಲ್ಲದ್‌ ಅವರಿಗೆ ಸಚಿವ ಸ್ಥಾನವನ್ನು ನೀಡಬೇಕು. ಉಳಿದವರನ್ನು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಬೇಕೆಂಬ ನಿರ್ಧಾರ ಕೈಗೊಳ್ಳಲಾಗಿದೆ. ಇದೀಗ ಆರ್‌ಎಸ್‌ಎಸ್‌ ಮುನಿಸಿನಿಂದ ಹಲವು ಹಾಲಿ ಸಚಿವರಿಗೆ ಮುಂದಿನ ಸಂಪುಟದಲ್ಲಿ ಸ್ಥಾನ ಕೈ ತಪ್ಪಬಹುದು.

Leave A Reply

Your email address will not be published.