ಬೊಮ್ಮಾಯಿ ಸಂಪುಟದಲ್ಲಿ ನಾ ಇರಲ್ಲ-ಜಗದೀಶ್ ಶೆಟ್ಟರ್
ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದಲ್ಲಿ ನಾನು ಯಾವುದೇ ಮಂತ್ರಿಯಾಗಿರಲು ಬಯಸುವುದಿಲ್ಲ ಎಂದು ಮಾಜಿ ಸೀಎಂ ಜಗದೀಶ್ ಶೆಟ್ಟರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಯಡಿಯೂರಪ್ಪ ನಮ್ಮ ಹಿರಿಯರು ಹೀಗಾಗಿ ಅವರ ಸಂಪುಟದಲ್ಲಿ ಸಚಿವನಾಗಿ ಕಾರ್ಯ ನಿರ್ವಹಿಸಿದ್ದೇನೆ. ಇದೀಗ ಸಚಿವನಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂದರು.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಜತೆ ಚರ್ಚಿಸಿದ್ದೇನೆ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ. ಸಚಿವ ಸಂಪುಟ ಸೇರ್ಪಡೆಯಾಗದಿರುವುದು ನೈತಿಕತೆಯ ನಿರ್ಧಾರವಾಗಿದೆ ಎಂದು ಶೆಟ್ಟರ್ ಹೇಳಿದರು.
ಜಗದೀಶ್ ಶೆಟ್ಟರ್, ಮುಖ್ಯಮಂತ್ರಿ ಹುದ್ದೆಯಿಂದ ಇಳಿದು ವಯಸ್ಸಿನಲ್ಲಿ ತನಗಿಂತ ಹಿರಿಯರಾದ ಬಿಎಸ್ವೈ ಸಂಪುಟ ಸೇರಿ ಬರೀ ಮಂತ್ರಿ ಆಗಿದ್ದರು. ಈಗ ತಮ್ಮೂರಿನವರೇ ಆದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದಾಗ, ಹಿರಿಯ ಶೆಟ್ಟರ್ ಸಚಿವ ಸಂಪುಟವನ್ನು ಸೇರಲ್ಲ ಎಂದಿದ್ದಾರೆ. ಇದಕ್ಕೆ ನಿಜವಾದ ಕಾರಣ ಏನು ಎಂಬುದು ತೀವ್ರ ಕುತೂಹಲ ಮೂಡಿಸಿದೆ.