ಬೆಳ್ತಂಗಡಿ | ಎರಡನೇ ಪ್ರೀತಿಯನ್ನು ಇನ್ನೊಬ್ಬ ಮದುವೆ ಆಗಿ ಬಿಡುತ್ತಾನೆ ಎಂದು ನಿಶ್ಚಿತಾರ್ಥ ಮಾಡಿಕೊಂಡ ಯುವಕನ ಕೊಲೆ, ಆರೋಪ ಸಾಬೀತು !
ಬೆಳ್ತಂಗಡಿ: ಬೆಳ್ತಂಗಡಿ ದಿಡುಪೆ ನಿವಾಸಿಯಾಗಿದ್ದ, ನಿಶ್ಚಿತಾರ್ಥ ಮಾಡಿಕೊಂಡಿದ್ದ ಮದುವೆ ಗಂಡು, ಸುರೇಶ್ ನಾಯ್ಕ (30) ಎಂಬವರನ್ನು ಅಪಹರಿಸಿ ಕೊಲೆಗೈದ ಪ್ರಕರಣ 1ನೇ ಜಿಲ್ಲಾ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಶಿಕ್ಷೆ ಪ್ರಮಾಣ ಜು.28ಕ್ಕೆ ಪ್ರಕಟವಾಗಲಿದೆ.
ಬೆಳ್ತಂಗಡಿ ನಾವೂರಿನ ನಿವಾಸಿ ಆನಂದ ನಾಯ್ಕ (39), ಬೆಳ್ತಂಗಡಿ ಕಸಬಾ ನಿವಾಸಿ ಪ್ರವೀಣ್ ನಾಯ್ಕ (39), ಚಾರ್ಮಾಡಿ ನಿವಾಸಿ ವಿನಯ ಕುಮಾರ್ (34), ಮೂಡುಕೋಡಿ ನಿವಾಸಿ ಪ್ರಕಾಶ್ (35), ಬಂಟ್ವಾಳ ಪುದು ನಿವಾಸಿ ಲೋಕೇಶ್ (38), ಮೇಲಂತಬೆಟ್ಟು ನಿವಾಸಿ ನಾಗರಾಜ (43) ಪ್ರಕರಣದ ಅಪರಾಧಿಗಳು.
ಎರಡನೇ ಮದುವೆಯ ಉನ್ಮಾದದಲ್ಲಿ ನಡೆಯಿತು ಒಂದು ಕೊಲೆ !
ನಾವೂರಿನ ಮೂಲದ ಆನಂದ ನಾಯ್ಕ ಎಂಬಾತನಿಗೆ ಮದುವೆಯಾಗಿ 3 ಮಕ್ಕಳಿದ್ದು ತನ್ನ ಸಂಸಾರದೊಂದಿಗೆ ಸಂಸಾರ ಮಾಡುತ್ತಿದ್ದ. ಹಾಗಿದ್ದರೂ ಆತನಿಗೆ ಓರ್ವ ಪರಿಚಯದ ಯುವತಿಯ ಜತೆ ಪ್ರೀತಿ ಇತ್ತು. ಅತ್ತ ಆಕೆಗೂ ಆನಂದ ನಾಯ್ಕ ಇಷ್ಟ ಆಗಿದ್ದ. ಹೇಗಾದರೂ ಮಾಡಿ ಮತ್ತೊಂದು ಸಂಸಾರ ನಿರ್ಮಿಸಿಕೊಳ್ಳಲು ಆತ ತುದಿಗಾಲಿನಲ್ಲಿ ನಿಂತಿದ್ದ. ಆ ಯುವತಿಯನ್ನು ಮದುವೆಯಾಗುವ ಆಸೆಯಿಂದ ಧೈರ್ಯ ಮಾಡಿ ಆ ಯುವತಿಯ ತಂದೆಯಲ್ಲಿ ವಿಷಯ ಪ್ರಸ್ತಾಪಿಸಿದ್ದ. ಆದರೆ ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು.
ಹೀಗೆ ಸ್ವಲ್ಪ ಸಮಯ ಕಳೆದ ನಂತರ ದಿಡುಪೆ ನಿವಾಸಿ ಸುರೇಶ್ ನಾಯ್ಕ ಜತೆ ಯುವತಿಯ ಮದುವೆ ಸಂಬಂಧ ಕೂಡಿಸಿದ್ದರು ಆಕೆಯ ಪೋಷಕರು. ನಿಶ್ಚಿತಾರ್ಥಕ್ಕೆ ದಿನ ಕೂಡಾ ನಿಗದಿ ಮಾಡಲಾಗಿತ್ತು. ಈ ವಿಷಯ ಆನಂದ ನಾಯ್ಕ ಗಮನಕ್ಕೆ ಬಂದಿದೆ. ಆತ ತಮ್ಮ ಗೆಳೆಯನೊಬ್ಬನ ಸಹಾಯದಿಂದ ಯುವತಿಯ ಮನೆಯವರಲ್ಲಿ ಸುರೇಶ್ ನಾಯ್ಕನ ಮೊಬೈಲ್ ನಂಬರ್ ಸಂಗ್ರಹಿಸಿದ್ದಾನೆ. ನಂತರ, ‘ನೀನು ಮದುವೆಯಾಗುವ ಯುವತಿಯನ್ನು ನಾನು ಪ್ರೀತಿಸುತ್ತಿದ್ದು ಈ ಸಂಬಂಧವನ್ನು ಬಿಟ್ಟುಬಿಡು’ ಎಂದು ಒತ್ತಾಯಿಸಿದ್ದಾನೆ. ಆದರೆ ಆತ ಇದಕ್ಕೆಲ್ಲ ಒಪ್ಪಿಲ್ಲ. ನಂತರ ಆತ ಸುರೇಶ್ ನಾಯ್ಕಾಗೆ ಜೀವ ಬೆದರಿಕೆಯನ್ನೂ ಹಾಕಿದ್ದಾನೆ. ಸುರೇಶ ನಾಯ್ಕ ಯಾವುದಕ್ಕೂ ಕ್ಯಾರೇ ಅಂದಿಲ್ಲ.
ಆಗ ಕಿಡ್ನಾಪ್ ಸ್ಕೆಚ್ ರೂಪಿಸಿದ್ದಾರೆ ಆನಂದ ನಾಯ್ಕ. ಅದು 2017 ಜುಲೈ 29. ಆನಂದ ನಾಯಕನ ದೂರದ ಸಂಬಂಧಿ, ಎರಡನೇ ಆರೋಪಿ ಪ್ರವೀಣ್ ನಾಯ್ಕಾ ಎಂಬಾತನು ಸುರೇಶ್ ನಾಯ್ಕಾಗೆ ಕರೆ ಮಾಡಿ ಆತ್ಮೀಯವಾಗಿ ಮಾತನಾಡಿ ‘ಗಂಗಾ ಕಲ್ಯಾಣ ಯೋಜನೆಯಡಿ ಹಣ ಸಿಗುವ ಬಗ್ಗೆ ಮಾಹಿತಿ ನೀಡಿದ್ದಾನೆ. ನೀವು ಉಜಿರೆಗೆ ಬನ್ನಿ, ನಾನು ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡುತ್ತೇನೆ ಎಂದಿದ್ದಾನೆ.
ಸರಕಾರದ ಸವಲತ್ತು ಸಿಗುವ ನಿರೀಕ್ಷೆಯಂತೆ ಸುರೇಶ್ ನಾಯ್ಕಾ ಉಜಿರೆಗೆ ಬಂದಾಗ ಆರೋಪಿಗಳಾದ ಪ್ರವೀಣ್ ನಾಯ್ಕಾ, ವಿನಯ್, ಪ್ರಕಾಶ್, ಲೋಕೇಶ್, ನಾಗರಾಜ್ ಹೀಗೆ 6 ಜನರ ಗುಂಪು ಮಾರುತಿ ಓಮ್ಮಿಯಲ್ಲಿ ಸುರೇಶ್ ನಾಯ್ಕನನ್ನು ಹತ್ತಿದಿಕೊಂಡಿದೆ. ನಂತರ ಓಮ್ನಿ ಕಾರು ಪಟ್ರಮೆ-ಧರ್ಮಸ್ಥಳ ನಿರ್ಜನ ರಸ್ತೆಯ ಕಡೆ ತಿರುಗಿತ್ತು. ಈ ಸಂದರ್ಭ ಯುವಕನಲ್ಲಿ ಮದುವೆ ಮುರಿದುಕೊಳ್ಳಲು ಆ ತಂಡ ಒತ್ತಡ ಹಾಕಿದ್ದರು. ಅಂತಹ ಸಂದರ್ಭದಲ್ಲಿ ಕೂಡಾ ಸುರೇಶ್ ನಾಯ್ಕ ಒಪ್ಪಿಲ್ಲ. ನಯವಾಗಿ ಆ ಸಂದರ್ಭದಲ್ಲಿ ಒಪ್ಪಿಕೊಂಡು ಜಾರಿಕೊಳ್ಳುವುದನ್ನು ಬಿಟ್ಟು, ಆತ ಪ್ರತಿಭಟಿಸಿದ್ದಾರೆ. ಇಲ್ಲದಿದ್ದರೆ, ಆತ ಎಸ್ಕೇಪ್ ಆಗಿ ಜೀವ ಉಳಿಸಿ ಕೊಳ್ಳುತ್ತಿದ್ದ.
ಪ್ರತಿಭಟಿಸಿದ ಸುರೇಶ್ ನಾಯ್ಕನ ಕುತ್ತಿಗೆಗೆ ಹಗ್ಗ ಬಿಗಿದು ಅವರು ಕೊಲೆ ಮಾಡಿದ್ದರು.
ನಂತರ ಆನಂದ್ ನಾಯ್ಕಾ ಮತ್ತು ತಂಡ ಮೃತದೇಹವನ್ನು ಧರ್ಮಸ್ಥಳದ ಅಳೆಕ್ಕಿ ಎಂಬಲ್ಲಿ ಮೃತದೇಹಕ್ಕೆ ಗೋಣಿ ಚೀಲವನ್ನು ಸುತ್ತಿ ಪೆಟ್ರೋಲ್ ಹಾಕಿ ಮೃತದೇಹದ ಗುರುತು ಕೂಡಾ ಸಿಗದಂತೆ ಸುಟ್ಟು ಹಾಕಿದ್ದಾರೆ. ಮೃತಪಟ್ಟ ವ್ಯಕ್ತಿಯ ಸೊತ್ತುಗಳನ್ನು ಕೊಯ್ಯರು ಕಟ್ಟ ಎಂಬಲ್ಲಿ ಮೋರಿಯ ಕೆಳಗೆ ಅರೆ ಬರೆ ಸುಟ್ಟು ಹಾಕಿದ್ದರು.
ನಂತರ ಮಿಸ್ಸಿಂಗ್ ಪ್ರಕರಣ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಕೊನೆಗೆ ಆರು ಆರೋಪಿಗಳನ್ನು ಮೇ 4ರಂದು ಬಂಧಿಸಲಾಗಿತ್ತು.ಅಪರಾಧಿಗಳ ವಿರುದ್ಧ ಐಪಿಸಿ 302 (ಕೊಲೆ), 201 (ಸಾಕ್ಷ್ಯನಾಶ), 120ಬಿ (ಸಂಚು), 149 (ಸಮಾನ ಉದ್ದೇಶಿತ ಕೃತ್ಯ) ಪ್ರಕರಣ ಇದೀಗ ನಾಲ್ಕು ವರ್ಷಗಳ ವಿಚಾರಣೆಯ ನಂತರ ಸಾಬೀತುಗೊಂಡಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯ ಹಿಂದಿನ ಇನ್ಸ್ಪೆಕ್ಟರ್ ಟಿ.ಪಿ. ರಾಮಲಿಂಗೇಗೌಡ ಪ್ರಕರಣದ ಸಮಗ್ರ ವಿಚಾರಣೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 33 ಮಂದಿ ಸಾಕ್ಷಿ ವಿಚಾರಣೆ ನಡೆಸಲಾಗಿದ್ದು, ಇನ್ನೇನು ಆರೋಪಿಗಳಿಗೆ ಶಿಕ್ಷೆಯ ಪ್ರಮಾಣ ಜುಲೈ ತಿಂಗಳ 28 ಕ್ಕೆ ಪ್ರಕಟವಾಗಲಿದೆ.