ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಜಯರಾಜ್ ಜೈನ್ ಅವಿರೋಧ ಆಯ್ಕೆ
ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು, ಶಾಖೆ ಬೆಳ್ತಂಗಡಿ ಇದರ ಮುಂದಿನ ಅವಧಿಗೆ ನೂತನ ಅಧ್ಯಕ್ಷರಾಗಿ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮಾಲಾಡಿ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ಜಯರಾಜ್ ಜೈನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜುಲೈ 24 ರಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಘಟಕದ ಏಕತಾ ಸೌಧದಲ್ಲಿ ನಡೆದ ಚುನಾವಣೆ ಪ್ರಕ್ರೀಯೆಯಲ್ಲಿ ಅವರು ಆಯ್ಕೆಯಾದರು.
ಸಂಘದಲ್ಲಿ ಈ ಹಿಂದೆ 22 ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ಡಾ. ಜಯಕೀರ್ತಿ ಜೈನ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನದಲ್ಲಿ ಕಳೆದ 11 ತಿಂಗಳಿನಿಂದ ಜಯರಾಜ್ ಜೈನ್ ಪ್ರಭಾರ ನೆಲೆಯಲ್ಲಿ ಅಧ್ಯಕ್ಷರಾಗಿದ್ದರು.
ಶನಿವಾರ ನಡೆದ ಚುನಾವಣೆಯ ವೀಕ್ಷಕರಾಗಿ ರಾಜ್ಯ ಸಂಘದ ಕೋಶಾಧಿಕಾರಿ ಆರ್ ಶ್ರೀನಿವಾಸ್ ಮತ್ತು ಕಚೇರಿ ವ್ಯವಸ್ಥಾಪಕ ಸುರೇಶ್ ಅವರ ಸಮ್ಮುಖದಲ್ಲಿ, ಚುನಾವಣಾಧಿಕಾರಿಯಾಗಿ ಸಂಘದ ಜಿಲ್ಲಾಧ್ಯಕ್ಷ ಪಿ.ಕೆ ಕೃಷ್ಣ ಇವರು ಪ್ರಕ್ರೀಯೆ ನಡೆಸಿಕೊಟ್ಟರು. ಈ ವೇಳೆ ಜಿಲ್ಲಾ ಕಾರ್ಯದರ್ಶಿ ನವೀನ್, ನಿಕಟಪೂರ್ವ ಅಧ್ಯಕ್ಷ ಡಾ. ಜಯಕೀರ್ತಿ ಜೈನ್ ಹಾಗೂ ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಯರಾಜ್ ಜೈನ್ ಅವರು ಸಂಘದಲ್ಲಿ ಕಳೆದ 22 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿದ ಅನುಭವ ಹೊಂದಿದ್ದಾರೆ. ಈಗಾಗಲೇ ಸರಕಾರಿ ನೌಕರರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿ, ಬೈಪಾಡಿ ಶ್ರೀ ಶಾಂತಿನಾಥ ಸ್ವಾಮಿ ಅಭಿವೃದ್ಧಿ ಮಂಡಳಿ ಸಲಹೆಗಾರರಾಗಿ, ಲಾಯಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷರಾಗಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಸಲಹೆಗಾರರಾಗಿ ತೊಡಗಿಸಿಕೊಂಡವರಾಗಿದ್ದಾರೆ.
ರಾಷ್ಟ್ರೀಯ ಕಬಡ್ಡಿ ತೀರ್ಪುಗಾರರು ಮತ್ತು ಅಥ್ಲೆಟಿಕ್ ರಾಜ್ಯ ತೀರ್ಪುಗಾರರಾಗಿರುವ ಅವರು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ನ ಆಜೀವ ಸದಸ್ಯರಾಗಿ, ತಾ. ಕಬಡ್ಡಿ ತೀರ್ಪುಗಾರರ ಮಂಡಳಿಯ ಅಧ್ಯಕ್ಷರಾಗಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿ, ಪ್ರಸ್ತುತ ಗ್ರೇಡ್ 2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.
ಮಾಲಾಡಿ ಶಾಲೆಯಲ್ಲಿ ಮೂರು ವರ್ಷಗಳ ಕಾಲ ಪ್ರಭಾರ ಮುಖ್ಯೋಪಾಧ್ಯಾಯರಾಗಿಯೂ ಸೇವೆ ಸಲ್ಲಿಸಿದ್ದು, 2010 ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ಇನ್ನೂ ಅನೇಕ ಕಡೆಗಳಲ್ಲಿ ಪ್ರಶಸ್ತಿ, ಸನ್ಮಾನಗಳಿಗೆ ಪಾತ್ರರಾಗಿದ್ದಾರೆ.