ವಿಶಾಲ ಗಾಣಿಗ ಸೆನ್ಸೇಷನಲ್ ಮರ್ಡರ್ ಮಿಸ್ಟರಿ ಭೇದಿಸಿದ ಉಡುಪಿ ಪೊಲೀಸರು | ಪತ್ರಿಕಾಗೋಷ್ಠಿ ಕರೆದು ತನಿಖೆ ವಿವರ ಬಿಚ್ಚಿಟ್ಟ ಕಮಿಷನರ್ !
ಉಡುಪಿ ಜಿಲ್ಲೆಯಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ವಿಶಾಲ ಗಾಣಿಗ ಹತ್ಯಾ ಕೇಸಿನ ಪ್ರಮುಖ ರೂವಾರಿ ಕೊನೆಗೂ ಪತ್ತೆಯಾಗಿದ್ದು, ದುರದೃಷ್ಟವಶಾತ್ ಆಕೆಯನ್ನು ರಕ್ಷಿಸಿ ಪ್ರೊಟೆಕ್ಷನ್ ಮಾಡಬೇಕಿದ್ದ ಆಕೆಯ ಗಂಡನೇ ಆಕೆಯ ಜೀವ ತೆಗೆದಿದ್ದಾನೆ.
ಈ ಬಗ್ಗೆ ಇವತ್ತು ಉಡುಪಿ ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ಅವರು ಪತ್ರಿಕಾ ಗೋಷ್ಠಿ ಕರೆದಿದ್ದು ಒಟ್ಟಾರೆ ಕೊಲೆ ನಡೆದ ಹಿನ್ನೆಲೆ ಮತ್ತು ತನಿಖಾ ವರದಿಯನ್ನು ನೀಡಿದ್ದಾರೆ. ಅಲ್ಲದೆ ಕೊಲೆ ಪ್ರಕರಣವನ್ನು, ಯಾವುದೇ ಪ್ರತ್ಯಕ್ಷ ಸಾಕ್ಷ್ಯ ಗಳು ಇಲ್ಲದೆ ಹೋದರೂ, ಅತ್ಯಂತ ವೇಗವಾಗಿ ಪತ್ತೆ ಮಾಡಿದ ಪೊಲೀಸ್ ತಂಡಗಳಿಗೆ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ಈ ಕೇಸಿನಲ್ಲಿ ಯಾವುದೇ ಸಾಕ್ಷಿಗಳಿಲ್ಲ. ಕೊಲೆ ಮಾಡಿದ್ದನ್ನು ಯಾರೂ ಕಂಡಿರಲಿಲ್ಲ. ಅಪರಾಧಿಗಳ ಕೃತ್ಯವನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಇಪ್ಪತ್ತನಾಲ್ಕು ಗಂಟೆಗಳು ವಾಚ್ ಮಾಡುವ ಸಿಸಿಟಿವಿ ಫುಟೇಜ್ ಇರಲಿಲ್ಲ. ಅವತ್ತು ಪೊಲೀಸರು ತನಿಖೆಗೆಂದು ಹೊರಟಾಗ ಬರಿಗೈಯಲ್ಲಿ ಹೊರಟಿದ್ದರು. ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ಅವರು ಒಟ್ಟು ನಾಲ್ಕು ತಂಡ ಕಟ್ಟಿ ಬೆಸ್ಟ್ ವಿಶಸ್ ಎಂದು ಹೇಳಿ ಆ ತಂಡಗಳನ್ನು ಕಳಿಸಿದ್ದರು.
ಹಾಗೆ ಬೆಲ್ಟು ಬಿಗಿ ಮಾಡಿಕೊಂಡು ಪೊಲೀಸರು ನಾಲ್ಕು ದಿಕ್ಕುಗಳಲ್ಲಿ ಹಂಚಿ ಹೋಗಿದ್ದರು. ಮೊದಲ ಹಂತವಾಗಿ ಕುಂದಾಪುರ ಮತ್ತು ಪಡುಬಿದ್ರಿಯ ಎಲ್ಲಾ ಸಿಸಿಟಿವಿಗಳನ್ನು ಪರೀಕ್ಷಿಸಲಾಯಿತು. ಆದರೆ ಯಾವುದೇ ಕ್ಲೂ ಕೊಡುವಲ್ಲಿ ಅವುಗಳು ವಿಫಲವಾದವು. ಕೊಲೆ ನಡೆದ ಫ್ಲಾಟಿನ ಸುತ್ತಮುತ್ತ ವಾಸಿಸುತ್ತಿರುವ ಜನರನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸಲಾಯಿತು. ತನಿಖೆಗಾಗಿ ಹಾಸನ ಆಂಧ್ರಪ್ರದೇಶ ಹೀಗೆ ಹಲವಾರು ಕಡೆ ಪೊಲೀಸರು ಬಸ್ಸು ಹತ್ತಿದ್ದರು. ಅಷ್ಟರಲ್ಲಿ ಒಂದು ಚಿಕ್ಕ ಲೀಡ್ ಪೊಲೀಸರ ಕೈಗೆ ಸಿಕ್ಕಿತ್ತು. ಅದು ಉತ್ತರಪ್ರದೇಶದ ಬೊಟ್ಟುಮಾಡಿ ತೋರಿಸುತ್ತಿತ್ತು. ಉತ್ತರ ಪ್ರದೇಶದ ಗೋರಕ್ ಪುರ ಎಸ್ಪಿ ಮತ್ತು ಅವರ ತಂಡ ಆತನಿಗಾಗಿ ಹುಡುಕಾಟ ನಡೆಸಿತ್ತು. ಅದೇ ಸಮಯಕ್ಕೆ ಇನ್ನೊಂದು ಲೀಡ್ ಪೊಲೀಸರಿಗೆ ದೊರೆತಿದ್ದು ಅದು ಭಾರತದ ಗಡಿಯತ್ತ ದಿಕ್ಕು ತೋರಿಸುತ್ತಿತ್ತು. ಪೊಲೀಸರಿಗೆ ಅಷ್ಟು ಸಾಕಿತ್ತು. ಕೂಡಲೇ ನೇಪಾಳ ಗಡಿಯಲ್ಲಿ ಸುಪಾರಿ ಕಿಲ್ಲರ್ ಒಬ್ಬನನ್ನು ಅರೆಸ್ಟ್ ಮಾಡುತ್ತಾರೆ. ಆತ ಬಾಯ್ಬಿಟ್ಟಿದ್ದು ರಾಮಕೃಷ್ಣನ ಹೆಸರು.
ವಿಶಾಲ ಗಾಣಿಗಳ ಪತಿ ರಾಮಕೃಷ್ಣ ಗಾಣಿಗ ಸುಮಾರು 7 ತಿಂಗಳ ಹಿಂದೆ ಪತ್ನಿ ಹತ್ಯೆಗೆ ಸಂಚು ನಡೆಸಿದ್ದ. ಆತ ದುಬೈನಲ್ಲಿ ಕೂತುಕೊಂಡೆ ಹತ್ಯೆಯ ಸ್ಕೆಚ್ ಬರೆದಿದ್ದ. ಈ ಸುಪಾರಿ ಹತ್ಯೆಗಾಗಿ ಆತ ಕಿಲ್ಲರ್ ಗಳಿಗೆ 2,00,000 ಅಡ್ವಾನ್ಸ್ ನೀಡಿದ್ದ. ಇದು ಮಾರ್ಚ್ ತಿಂಗಳಿನಲ್ಲಿ ನಡೆದುಹೋಗಿತ್ತು.
ಮೊದಲಿಗೆ ರಾಮಕೃಷ್ಣ ಗಾಣಿಗನಿಗೆ ಆತನ ಅಪರಿಚಿತನೊಬ್ಬ ಸುಪಾರಿ ಕಿಲ್ಲರ್ ಗಳ ಮಾಡಿಕೊಟ್ಟಿದ್ದ. ಆತನ ಮೂಲಕ ಸುಪಾರಿ ಕಿಲ್ಲರ್ ಗಳನ್ನು ಸಂಪರ್ಕಿಸಿದ ರಾಮಕೃಷ್ಣ ಗಾಣಿಗ ಅವನಿಗೆ ಅಡ್ವಾನ್ಸ್ ಮಾಡಿದ್ದ. ತಾನು ದುಬೈನಲ್ಲಿ ಇರುವುದರಿಂದ ಯಾವುದೇ ಕಾರಣಕ್ಕೂ ತನ್ನ ಮೇಲೆ ಅನುಮಾನ ಬರುವುದಿಲ್ಲ, ತಾನು ಸೇಫ್ ಅಂದುಕೊಂಡಿದ್ದ ರಾಮಕೃಷ್ಣ.
ಕೊಲೆ ನಡೆಯುವುದಕ್ಕಿಂತ ಒಂದು ವಾರದ ಮುಂಚಿತವಾಗಿ ವಿಶಾಲ ಗಾಣಿಗಳಿಗೆ ಗಿಫ್ಟ್ ಪಾರ್ಸೆಲ್ ಒಂದು ಬಂದಿತ್ತು. ಆ ಪಾರ್ಸೆಲ್ ಕೊರಿಯರ್ ಶಾಪಿಗೆ ಬಂದಿದ್ದು ಅದನ್ನು ರಾಮಕೃಷ್ಣ ಗಾಣಿಗನೆ ಕಳಿಸಿದ್ದ. ಸಾಮಾನ್ಯವಾಗಿ ವಿಶಾಲ ಗಾಣಿಗ ಒಬ್ಬಳೇ ಹೊರಗಡೆ ಬರುತ್ತಿರಲಿಲ್ಲ. ಆಕೆಯನ್ನು ಕೊಲೆ ಮಾಡಬೇಕಾದರೆ ಆಕೆ ಒಬ್ಬಂಟಿಯಾಗಿ ಸಿಗಬೇಕು. ಈ ಕಾರಣಕ್ಕಾದರೂ ಆಕೆ ಹೊರಕ್ಕೆ ಬರುತ್ತಾಳೆ ಎಂದು ಟೆಸ್ಟ್ ಮಾಡಲು ಆಕೆಗೆ ಕೊರಿಯರ್ ಕಳಿಸಲಾಗಿತ್ತು. ಅಂದು ಆಕೆ ಮನೆಯಿಂದ ಒಬ್ಬಳೇ ಬಂದು ಕೊರಿಯರ್ ಪಡೆದು ಮನೆಗೆ ವಾಪಸಾಗಿದ್ದರು.
ವಿದೇಶದಲ್ಲಿದ್ದ ವಿಶಾಲ ಗಾಣಿಗ ಜು.2ರಂದು ತನ್ನ ಪುತ್ರನೊಂದಿಗೆ ಊರಿಗೆ ಬಂದಿದ್ದು, ಉಪ್ಪಿನ ಕೋಟೆಯ ಫ್ಲ್ಯಾಟ್ನಲ್ಲಿ ವಾಸವಾಗಿದ್ದರು. ಜುಲೈ 7 ರಂದು ರಾಮಕೃಷ್ಣರ ಆಸ್ತಿಗೆ ಸಂಬಂಧಿಸಿದ ಪಾಲುಪಟ್ಟಿ ನಡೆದಿದ್ದು, ಜುಲೈ 12ರಂದು ವಿಶಾಲ ಗಾಣಿಗ ತನ್ನ ತಂದೆ, ತಾಯಿ ಹಾಗೂ ಪುತ್ರನೊಂದಿಗೆ ಆಟೋ ರಿಕ್ಷಾದಲ್ಲಿ ತಾಯಿ ಮನೆ ಗುಜ್ಜಾಡಿಗೆ ಹೋಗಿದ್ದರು.
ಅವತ್ತು, ಕೊಲೆ ನಡೆದ ದಿನ ಪತಿ ರಾಮಕೃಷ್ಣ ಪತ್ನಿಯನ್ನು ಒಬ್ಬಂಟಿಯಾಗಿ ಅಪಾರ್ಟ್ಮೆಂಟ್ಗೆ ಹೋಗಲು ಹೇಳಿದ್ದಾನೆ. ಆಕೆ ಒಬ್ಬಳೇ ಯಾಕೆ ಅಪಾರ್ಟ್ಮೆಂಟ್ನ ಒಳಗೆ ಹೋಗಿದ್ದಳು ಎಂಬ ಬಗ್ಗೆ ಇನ್ನೂ ಖಚಿತ ಕಾರಣ ಸಿಕ್ಕಿಲ್ಲ. ಗಂಡನ ಸೂಚನೆಯಂತೆ ಆಕೆಯ ಒಬ್ಬಂಟಿಯಾಗಿ ಅಪಾರ್ಟ್ಮೆಂಟ್ ಗೆ ತೆರಳಿದ 5ರಿಂದ 10 ನಿಮಿಷದ ಒಳಗೆ ಅಡಿಯಿಟ್ಟಿದ್ದರು ಹಂತಕದ್ವಯರು. ಇನ್ನೈದು ನಿಮಿಷಗಳಲ್ಲಿ ಕೆಲಸ ಮುಗಿದಿತ್ತು. ವಿಶಾಲ ಗಾಣಿಗ ಕೊನೆಯ ಉಸಿರು ಕೂಡಾ. ಗಟ್ಟಿಯಾಗಿ ಎಳೆದು ಕೊಳ್ಳಲಾಗದಂತೆ ಉಸಿರುಗಟ್ಟಿ ಸತ್ತು ಹೋಗಿದ್ದರು. ಇದು ಸುಪಾರಿ ಕಿಲ್ಲಿಂಗ್ ಎಂಬ ಬಗ್ಗೆ ಸಾಕ್ಷ್ಯ ಸಿಗಬಾರದೆಂದು ಅಪರಾಧ ನಡೆದ ನಂತರ ಕಿಲ್ಲರ್ ಗಳು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಕೊಲೆಗೆ ವೈಮನಸ್ಸು ಕಾರಣ?
ವಿಶಾಲ ಗಾಣಿಗ ಅವರ ಕೊಲೆಗೆ ಪತಿ, ಪತ್ನಿಯ ನಡುವಿನ ವೈಮನಸ್ಸು ಕಾರಣ ಎನ್ನುವ ಅಂಶ ಪ್ರಾಥಮಿಕ ತನಿಖೆ ವೇಳೆ ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ ಯಾವ ವಿಚಾರದಲ್ಲಿ ವೈಮನಸ್ಸು ಇತ್ತು? ಫ್ಲ್ಯಾಟ್ಗೆ ಒಬ್ಬಂಟಿಯಾಗಿ ಹೋಗಿದ್ದು ಯಾಕೆ? ನಿರ್ದಿಷ್ಟವಾಗಿ ಯಾವ ವಿಚಾರದಲ್ಲಿ ಕೊಲೆಯಾಗಿದೆ ಎನ್ನುವುದು ಇನ್ನೂ ಕಗ್ಗಂಟಾಗಿಯೇ ಇದೆ. ಇದೀಗ ಒಬ್ಬ ಹಂತಕರನ್ನು ಬಂಧಿಸಿದ್ದು ಇನ್ನೋರ್ವನಿಗೆ ಶೋಧ ನಡೆದಿದೆ.
ಅದಲ್ಲದೆ, ಆಕೆಯ ಕೊಲೆ ನಡೆದ ನಂತರ ಪತಿ ಏನೂ ಗೊತ್ತಿಲ್ಲದವನಂತೆ ದುಬೈನಿಂದ ಊರಿಗೆ ಬಂದು ಗೋಳಾಡಿದ್ದ. ಆಕೆಯ ಮರಣೋತ್ತರ ಕ್ರಿಯೆಗಳಲ್ಲಿ ಪ್ರತಿಯೊಂದರಲ್ಲೂ ಭಾಗವಹಿಸಿದ್ದ.
ಬಂಧಿತ ರಾಮಕೃಷ್ಣ ಅಸ್ಪಷ್ಟವಾಗಿ ಪ್ರತಿಕ್ರಿಯಿಸುತ್ತಿದ್ದಾನೆ. ಪೊಲೀಸರಿಗೆ ಕೊಲೆಗೆ ಬೇರೆ ಕಾರಣವೂ ಇರಬಹುದೆಂಬ ಸಂಶಯ ಬಲವಾದ ಅನುಮಾನ ಮೂಡಿರುವ ಮೇರೆಗೆ ಪೊಲೀಸರು ರಾಮಕೃಷ್ಣನನ್ನು ಜುಲೈ 23 ರ ವರೆಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತನಿಖೆ ಮುಂದುವರಿಸುತ್ತಿದ್ದಾರೆ.