ಸರ್ಕಾರಿ ನೌಕರರಿಗೆ ಬಂಪರ್ ಬಹುಮಾನ | ಬರೊಬ್ಬರಿ 11 % ತುಟ್ಟಿ ಭತ್ಯೆ ಹೆಚ್ಚಿಸುವ ನಿರ್ಧಾರ ಕೈಗೊಂಡ ಸಿಎಂ ಯಡಿಯೂರಪ್ಪ !
ರಾಜ್ಯದ ಸರ್ಕಾರಿ ನೌಕರರಿಗೆ ಅನಿರೀಕ್ಷಿತವಾಗಿ ಆಷಾಢ ಮಾಸದಲ್ಲಿ ಉಡುಗೊರೆ ಸಿಕ್ಕಿದೆ. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ಹೆಚ್ಚಳ ಮಾಡಿ ಸೂಚನೆ ಹೊರಡಿಸಿದೆ.
ಜುಲೈ 1, 2021 ರಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರಿ ನೌಕರರಿಗೆ ಶೇ 11ರಷ್ಟು ತುಟ್ಟಿಭತ್ಯೆ ನೀಡುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಹಣಕಾಸು ಇಲಾಖೆಗೆ ಸೂಚನೆ ನೀಡಿದ್ದಾರೆ. ಅಧಿಕೃತ ಆದೇಶ ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ ಎಂದು ತಿಳಿದುಬಂದಿದೆ.
ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ದರ ಶೇ.11.25% ಇದ್ದು, ಶೇ.11 ಹೆಚ್ಚಳದಿಂದಾಗಿ ಒಟ್ಟು 22.25ರಷ್ಟು ತುಟ್ಟಿಭತ್ಯೆ ಸಿಗಲಿದೆ. ಇದರಿಂದ 1.50 ಲಕ್ಷ ಪಿಂಚಣಿದಾರರು ಸೇರಿದಂತೆ ಒಟ್ಟಾರೆ 6 ಲಕ್ಷ ನೌಕರರಿಗೆ ಅನುಕೂಲವಾಗಲಿದೆ.
ಸರ್ಕಾರ ಬೀಳಬಹುದಾದ ಈ ಸಂದಿಗ್ಧ ಸ್ಥಿತಿಯಲ್ಲಿ ಯಡಿಯೂರಪ್ಪನವರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡು, ತಮ್ಮ ಅಧಿಕಾರದ ನಂತರದ ಕಾಲದಲ್ಲಿ ಬೇಕಾಗಬಹುದಾದ ಎಲ್ಲ ವರ್ಗದವರನ್ನು ಈಗಾಗಲೇ ಬುಕ್ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ನಿನ್ನೆಯಷ್ಟೇ ತಮ್ಮ ನಿಷ್ಟರ 110 ಕ್ಕೂ ಅಧಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ಹಣ ಬಿಡುಗಡೆ ಮಾಡಿದ್ದರು. ತಮ್ಮ ಆಪ್ತೇಷ್ಟರನ್ನು ನಿಗಮ-ಮಂಡಳಿಗಳಿಗೆ ನೇಮಿಸಿದ್ದರು.