ಸಿಎಂ ಯಡಿಯೂರಪ್ಪನವರ ಮನೆಯ ಮುಂದೆ ಮಠಾಧೀಶರುಗಳ ಪೆರೇಡ್ | ಸಿಎಂ ಬದಲಾಯಿಸಿದರೆ ರಾಜ್ಯದಲ್ಲಿ ಬಿಜೆಪಿ ಸರ್ವನಾಶ ಎಂಬ ಎಚ್ಚರಿಕೆ !!
ಬೆಂಗಳೂರು: ಸಿಎಂ ಯಡಿಯೂರಪ್ಪ ಪದಚ್ಯುತಿಗೆ ಯತ್ನ ವಿಚಾರ ಮುನ್ನಲೆಗೆ ಬರುತ್ತಲೇ ಯಡಿಯೂರಪ್ಪನವರನ್ನು ಸದಾಕಾಲ ಬೆಂಬಲಿಸಿಕೊಂಡು ಬಂದಿದ್ದ ಹಲವು ಮುಖಂಡರುಗಳು ಎಚ್ಚೆತ್ತುಕೊಳ್ಳುತ್ತಿದ್ದಾರೆ. ಇದೀಗ, ವಿವಿಧ ಮಠಾಧೀಶರು ಬಿಎಸ್ವೈ ಪರ ಧ್ವನಿ ಎತ್ತಿದ್ದು, ಇಂದು 35 ಪ್ರಮುಖ ಮಠಾಧೀಶರ ನಿಯೋಗವು ಮುಖ್ಯಮಂತ್ರಿ ಮನೆಯತ್ತ ಪೆರೇಡ್ ನಡೆಸಿದೆ. ನಂತರ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.
ಈ ಮೂಲಕ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಅಕಾಲಿಕವಾಗಿ ಇಳಿಸುತ್ತಿರುವ ಹೈಕಮಾಂಡ್ಗೆ ದೊಡ್ಡ ಪ್ರಮಾಣದಲ್ಲಿ ತಂದುಕೊಡಲು ವೇದಿಕೆ ಸಿದ್ಧವಾಗಿದೆ. ಈ ಮೂಲಕ ಒತ್ತಾಯಪೂರ್ವಕವಾಗಿ ಯಡಿಯೂರಪ್ಪನವರನ್ನು ಹೇಳಿಸುತ್ತಿರುವ ಹೈಕಮಾಂಡ್ ಮತ್ತು ಯಡಿಯೂರಪ್ಪ ನಿಷ್ಠ ಬಣ – ಪಂಗಡಗಳ ನಡುವೆ ಉಜ್ಜಾಟ ತಿಕ್ಕಾಟ ಮೂಡುವ ಸ್ಪಷ್ಟ ಸೂಚನೆ ಸಿಕ್ಕಿದೆೆ.
ಸಿಎಂ ಭೇಟಿ ಬಳಿಕ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ, ಬಿಎಸ್ವೈ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ರೆ ರಾಜ್ಯದಲ್ಲಿ ಬಿಜೆಪಿ ಸರ್ವನಾಶ ಆಗಲಿದೆ. ನಮಗೆ ಯಾವ ಪಾರ್ಟಿಯೂ ಗೊತ್ತಿಲ್ಲ. ಹೈಕಮಾಂಡ್ ಕೂಡ ಗೊತ್ತಿಲ್ಲ. ಆದರೆ ಯಡಿಯೂರಪ್ಪನವರು ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ. ಅವರು ಸಿಎಂ ಆಗಿ ಅವಧಿ ಪೂರ್ಣಗೊಳಿಸಬೇಕು. ನಾವು ಯಡಿಯೂರಪ್ಪ ಪರ ನಿಲ್ಲುತ್ತೇವೆ. ಶೀಘ್ರದಲ್ಲೇ ಬೆಂಗಳೂರಲ್ಲಿ ಬೃಹತ್ ಸಂಖ್ಯೆಯಲ್ಲಿ ಅಂದರೆ 600 ಕ್ಕೂ ಹೆಚ್ಚು ಸ್ವಾಮೀಜಿಗಳು ಸಭೆ ನಡೆಸುತ್ತೇವೆ ಎಂದರು.
ಮುಂದುವರೆದು ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ ಅವರು, ಇವತ್ತು ರಾಜ್ಯ ಬಿಜೆಪಿ ಎನ್ನುವುದು ಯಡಿಯೂರಪ್ಪನವರು ಕಟ್ಟಿಬೆಳೆಸಿದ ಮನೆ. ಹೇಗೋ ಕಷ್ಟಪಟ್ಟು ಬಿಜೆಪಿಯನ್ನು ಅಧಿಕಾರಕ್ಕೆ ತಂದು ಅವರು ಮುಖ್ಯಮಂತ್ರಿ ಕುರ್ಚಿಯಮೇಲೆ ಕೂತಿದ್ದಾರೆ. ಅವರನ್ನು ನೆಮ್ಮದಿಯಾಗಿ ಇನ್ನು ಎರಡು ವರ್ಷ ಆಡಳಿತ ನಡೆಸಲು ಬಿಡಿ. ಆಡಳಿತದಲ್ಲಿ ಏನಾದರೂ ತಪ್ಪು ನಡೆದು, ಹೆಚ್ಚುಕಮ್ಮಿ ನಡೆದಿದ್ದರೆ ತಿದ್ದುವ ಕೆಲಸ ಮಾಡಿ. ಅದು ಬಿಟ್ಟು ಇರುವ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವುದು ತರವಲ್ಲ. ಯಡಿಯೂರಪ್ಪನವರು ಕೂಡ ಮೋದಿಯವರಿಗೆ ಸಮಾನವಾದ ನಾಯಕರು. ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸುವ ಕೆಲಸವನ್ನು ಈ ಕೂಡಲೇ ಹೈಕಮಾಂಡ್ ಬಿಡಬೇಕು. ಇದೀಗ ಪಕ್ಷಾತೀತವಾಗಿ ಯಡಿಯೂರಪ್ಪನವರಿಗೆ ಬೆಂಬಲ ವ್ಯಕ್ತವಾಗುತ್ತಿದೆ. ಬಹುಶಹ ಇಷ್ಟು ಮಟ್ಟಿಗಿನ ಬೆಂಬಲ ಮತ್ತು ಒತ್ತಾಸೆ ಯಡಿಯೂರಪ್ಪನವರ ಬಗ್ಗೆ ಇರುತ್ತದೆ ಎಂಬುದು ಹೈಕಮಾಂಡ್ ಕಲ್ಪನೆ ಇದ್ದಿರಲಿಕ್ಕಿಲ್ಲ. ಇನ್ನು ಮೂರು ದಿನ ನಾವೆಲ್ಲರೂ ಬೆಂಗಳೂರಿನಲ್ಲಿದ್ದು ಯಡಿಯೂರಪ್ಪನವರ ಪರವಾಗಿ ಬ್ಯಾಟ್ ಬಿಸಾಕ್ತೀವಿ ಎನ್ನುವ ಕ್ಲಿಯರ್ ಮೆಸೇಜನ್ನು ಸ್ವಾಮೀಜಿಗಳು ಹೈಕಮಾಂಡ್ಗೆ ನೇರಾನೇರವಾಗಿ ಕೊಟ್ಟಿದ್ದಾರೆ. ಹೈಕಮಾಂಡ್ ವರ್ಸಸ್ ಸ್ವಾಮೀಜಿಗಳ ಕಣ ರಂಗೇರುತ್ತಿದೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಒಂದು ವೇಳೆ ಯಡಿಯೂರಪ್ಪ ಅವರನ್ನು ಪೂರ್ಣ ಅಧಿಕಾರ ಮಾಡುವುದಕ್ಕೆ ಬಿಡದಿದ್ದರೆ ರಾಜ್ಯದಲ್ಲಿ ಬಿಜೆಪಿ ಸರ್ವನಾಶ ಆಗಲಿದೆ ಎಂದು ದಿಂಗಾಲೇಶ್ವರ ಶ್ರೀಗಳು ಕೊನೆಯದಾಗಿ ಎಚ್ಚರಿಸಿದರು.
ಯಡಿಯೂರಪ್ಪ ಅವರು ಈ ರಾಜ್ಯಕ್ಕೆ ಬಹಳ ದುಡಿದಿದ್ದಾರೆ. ಯಡಿಯೂರಪ್ಪರ ಬೆನ್ನಿಗೆ ಹೈಕಮಾಂಡ್ ನಿಂತು ಅವರಿಗೆ ಕೆಲಸ ಮಾಡಲು ಬಿಡಬೇಕು. ಈ ಹಿಂದೆ ಲಿಂಗಾಯತ ಸಮುದಾಯದ ನಾಯಕರನ್ನು ಬದಲಾವಣೆ ಮಾಡಿದ ಆ ಪಕ್ಷಕ್ಕೆ ಏನೆಲ್ಲ ಆಯ್ತು? ಎಂದು ನೋಡಿದ್ದೇವೆ. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿದರೆ ಮುಂದೆ ಕೆಟ್ಟ ಪರಿಣಾಮ ಎದುರಿಸುತ್ತಾರೆ. ಲಿಂಗಾಯತ ಎಂದು ಯಡಿಯೂರಪ್ಪರನ್ನು ಸಿಎಂ ಮಾಡಿಲ್ಲ, ಅವರ ನಾಯಕತ್ವ ಹಾಗೂ ಕೆಲಸ ನೋಡಿ ಕೂರಿಸಿದ್ದಾರೆ ಎಂದರು.
ರಾಜ್ಯದ ವಿವಿಧ ಜಿಲ್ಲೆಯಿಂದ ವಿವಿಧ ಸಮಾಜದ ಸ್ವಾಮೀಜಿಗಳು ಸಿಎಂ ಅವರನ್ನು ಭೇಟಿ ಮಾಡಿ, ನಿಮ್ಮೊಂದಿಗೆ ನಾವಿದ್ದೇವೆ ಎಂದರು. ಅದಕ್ಕೆ ಉತ್ತರಸಿದ ಬಿಎಸ್ವೈ, ನಾನು ಸದ್ಯ ಏನನ್ನೂ ಮಾತನಾಡಲು ಸಿದ್ಧವಿಲ್ಲ. ಹೈಕಮಾಂಡ್ ಹೇಳಿದ ಹಾಗೆ ಕೇಳುತ್ತೇನೆ ಎಂದಿದ್ದಾರೆ.