ಬೆಳ್ತಂಗಡಿ |  ಬಾರ್ & ರೆಸ್ಟೋರೆಂಟ್ ಬೇಡ ಎಂದ ಸಂಘಟನೆಗಳು ; ಬೇಕೇ ಬೇಕು ಎಂದು ಹೋರಾಟ ಶುರುವಿಟ್ಟ ಮದ್ಯಪ್ರಿಯರು | ಬೇಕು ಬೇಡಗಳ ನಡುವೆ ವಾಸ್ತವ ಸ್ಥಿತಿ ಏನು ?!

Share the Article

ಪದ್ಮುಂಜ: ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ ಇತ್ತೀಚೆಗೆ ಪ್ರಾರಂಭವಾದ ಬಾರ್ & ರೆಸ್ಟೋರೆಂಟ್ ಮುಚ್ಚಬಾರದು ಸ್ಥಳೀಯ ಮದ್ಯಪ್ರಿಯರು ಹೋರಾಟ ನಡೆಸಿದ್ದಾರೆ.

ಪದ್ಮುಂಜದ ಕೆನರಾ ಬ್ಯಾಂಕ್ ಕೆಳಗಡೆ ಕೊಲ್ಲಾಜೆ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಇತ್ತೀಚೆಗೆ ಶುರುವಾದ ಬಾರ್ ಮುಚ್ಚುವಂತೆ ಜನ ಜಾಗೃತಿ ವೇದಿಕೆ ಮಹಿಳಾ ಸಂಘಟನೆ, ಶಾಲಾಭಿವೃದ್ಧಿ ಸಮಿತಿಯವರು ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಿದ್ದರು. ಅದಕ್ಕೆ ಪ್ರತಿಯಾಗಿ ಮದ್ಯಪ್ರಿಯರ ತಂಡ ಪದ್ಮುಂಜದಲ್ಲಿ ಬಾರ್ ಮತ್ತು ಮದ್ಯದಂಗಡಿ ಬೇಕೇ ಬೇಕು ಎಂದು ಆಗ್ರಹಿಸಿ ಜು.20 ರಂದು ಕಣಿಯೂರು ಗ್ರಾಮ ಪಂಚಾಯತಕ್ಕೆ ಮನವಿ ನೀಡಿದರು.

ಇಲ್ಲಿನ ಕಷ್ಟಪಟ್ಟು ದುಡಿದು ಬದುಕುವ ಕೂಲಿಕಾರ್ಮಿಕರಿಗೆ ಸಂಜೆಯ ಹೊತ್ತಿಗೆ ಒಂದಷ್ಟು ಪಿಡ್ಕ್ ಬೇಕಾಗುತ್ತದೆ. ಕೂಲಿ ಕಾರ್ಮಿಕರಿಗೆ ದೂರದ ಊರುಗಳಿಗೆ ಹೋಗಿ ಮದ್ಯ ಖರೀದಿಸಲು ಬಹಳ ತೊಂದರೆಯಾಗುತ್ತಿದೆ. ಅಕ್ರಮ ಮದ್ಯ ಮಾರಾಟಗಾರರು ದುಬಾರಿ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಬಡ ಕಾರ್ಮಿಕರಿಗೆ ನಷ್ಟವಾಗುತ್ತಿದೆ. ಆದುದರಿಂದ ಪದ್ಮುಂಜದಲ್ಲಿಯೇ ಮದ್ಯದಂಗಡಿಯಿದ್ದರೆ ಕೂಲಿ ಕಾರ್ಮಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದು ಒತ್ತಾಯಿಸಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಪಿಡಿಒ ಪೂರ್ಣಿಮಾರವರು ಮನವಿಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಿಕೊಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಗಾಯತ್ರಿ, ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.

ತಮ್ಮ ಊರಿನಲ್ಲಿ ಸರಕಾರಿ ನೊಂದಾಯಿತ ಮದ್ಯದಂಗಡಿ ಬೇಕೆಂದು ಕೇಳುತ್ತಿರುವ ಪಡ್ಮುಂಜ ಮದ್ಯಪ್ರಿಯರು ಬೇಡಿಕೆ ಒಂದರ್ಥದಲ್ಲಿ ಸರಿ ಇದೆ. ಕುಡಿಯುವುದು ಒಳ್ಳೆಯದು, ಕೆಟ್ಟದ್ದು ಬೇರೆಯ ವಿಷಯ. ಇವತ್ತು ಬೆಳ್ತಂಗಡಿಯ ಪ್ರತಿ ಗ್ರಾಮದಲ್ಲೂ, ಗ್ರಾಮಕ್ಕೆ ಕನಿಷ್ಠ ಮೂರ್ನಾಲ್ಕು ಕಡೆ ಸೆಕೆಂಡ್ಸ್ ಮದ್ಯ ಮಾರಾಟ ಮಾಡಲಾಗುತ್ತಿದೆ. ಕೂಲಿ ಕೆಲಸ ಮಾಡಿ ಬರುವ ಜನರಿಗೆ ಪ್ರತಿ ಪಾಕೆಟ್ ಗೆ ಐದರಿಂದ ಹತ್ತು ರೂಪಾಯಿ ಹೆಚ್ಚುವರಿಯಾಗಿ ಪಡೆದು ‘ ಎಂಎಲ್ ‘ ಬ್ರಾಂಡಿನ ಸ್ಯಾಚೆಟ್ ಮದ್ಯ ಮಾರಲಾಗುತ್ತಿದೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಇದು ಪೊಲೀಸರಿಗೂ ತಿಳಿದಿದೆ, ಬೆಳ್ತಂಗಡಿಯ ಸೆಕೆಂಡ್ಸ್ ದಂದೆಗೆ ಕನಿಷ್ಠಪಕ್ಷ ಸಿಲ್ವರ್ ಜುಬಿಲಿ ಇತಿಹಾಸವಿದೆ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಅದನ್ನು ನಿಲ್ಲಿಸಲು ಆಗಿಲ್ಲ. ಇಂತಹ ಅನಧಿಕೃತ ಲಿಕ್ಕರ್ ಮಾರಾಟದಿಂದಾಗಿ ಒಂದು ಕಡೆ ಸರಕಾರದ ಬೊಕ್ಕಸಕ್ಕೆ ನಷ್ಟ. ಮತ್ತೊಂದೆಡೆ ಕೂಲಿಕಾರ್ಮಿಕರ ಮೊದಲೇ ಹರಿದು ತೂತಾದ ಜೇಬಿಗೆ ದೊಡ್ಡ ಕತ್ತರಿ ಹಾಕುವ ಕೆಲಸ. ಸ್ಥಳೀಯವಾಗಿ ವೈನ್ ಶಾಪ್ ನ ರೇಟಿನಲ್ಲಿ ಮಧ್ಯ ದೊರೆತರೆ ಕೂಲಿಕಾರ್ಮಿಕರು ಹೆಚ್ಚುವರಿಯಾಗಿ ತೆರಬೇಕಿಲ್ಲ ಎನ್ನುವುದು ಅಲ್ಲಿನ ಮದ್ಯಾಸಕ್ತರ ಅಭಿಪ್ರಾಯ.

Leave A Reply

Your email address will not be published.