ಮಂಗಳೂರು | ಬದುಕಿನಲ್ಲಿ ನೊಂದ ಜೀವ ಲಿಂಡಾಳ ಸಾವಿನಲ್ಲಿ ಕೂಡಾ ಸಾರ್ಥಕತೆ | 6 ಜನರಿಗೆ ಅಂಗಾಂಗ ದಾನ ಮಾಡಿದ ಮನೆಯವರು

ರಕ್ತದೊತ್ತಡ ಕಾಯಿಲೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ಕಿನ್ನಿಗೋಳಿಯ ಅವಿವಾಹಿತೆ ಲಿಂಡಾ ಶಾರೆನ್ ಡಿಸೋಜ ತನ್ನ 41 ವಯಸ್ಸಿನಲ್ಲಿ ಮೆದುಳು ನಿಷ್ಕ್ರಿಯಗೊಂಡ ಕಾರಣ, ತನ್ನ ಅಂಗಾಂಗಗಳನ್ನು ಆಕೆಯ ಸೋದರರು ದಾನ ಮಾಡಲು ನಿರ್ಧರಿಸಿ, ಆರು ಮಂದಿ ರೋಗಿಗಳಿಗೆ ದಾನ ಮಾಡುವಲ್ಲಿ ಯಶಸ್ವಿಯಾಗುವ ಮೂಲಕ ಸಾವಿನೆಡೆಯ ಪಯಣದಲ್ಲಿಯೂ ಸಾರ್ಥಕತೆ ಮೆರೆದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಲಿಂಡಾ ಅವರು ಬದುಕುಳಿಯುವುದು ಅಸಾಧ್ಯ ಎಂದು ಆಕೆಯ ಅಣ್ಣಂದಿರಾದ ಲ್ಯಾನ್ಸಿ ಪ್ರಕಾಶ್ ಡಿಸೋಜ ಮತ್ತು ಸಂತೋಷ್ ಡಿಸೋಜ ಅವರ ಗಮನಕ್ಕೆ ತಂದ ವೈದ್ಯರು, ಆಕೆಯ ಅಂಗಾಂಗ ದಾನ ಮಾಡಬಹುದೇ ಎಂಬ ಕೋರಿಕೆಯನ್ನು ಮುಂದಿಟ್ಟಾಗ ಅದಕ್ಕವರು ಒಪ್ಪಿದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಅಂಗಾಂಗ ದಾನ ನಿಯಂತ್ರಣ ಸಂಸ್ಥೆಯನ್ನು ಸಂಪರ್ಕಿಸಿ ಅಂಗಾಂಗ ದಾನಕ್ಕೆ ವ್ಯವಸ್ಥೆ ಮಾಡಲಾಯಿತು.

ಇದೀಗ ಲಿಂಡಾ ಅವರ ಹೃದಯ ಮತ್ತು ಶ್ವಾಸಕೋಶ ಚೆನ್ನೈನ ಎಂಜಿಎಂ ಆಸ್ಪತ್ರೆಗೆ, ಲಿವರ್(ಯಕೃತ್ತು) ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ, ಎರಡು ಕಿಡ್ನಿಗಳಲ್ಲಿ ಒಂದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಹಾಗೂ ಇನ್ನೊಂದು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಹಾಗೂ ಭಾಗಶಃ ಚರ್ಮ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗಾಗಿ ಕಸಿ ಕಟ್ಟಲು ದಾನ ಮಾಡಲಾಗಿದೆ.

Ad Widget / / Ad Widget

ಮಂಗಳೂರು ಪೊಲೀಸರು ಆ್ಯಂಬುಲೆನ್ಸ್ ಗೆ ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ಸಾಗಲು ‘ಗ್ರೀನ್ ಕಾರಿಡಾರ್’ ವ್ಯವಸ್ಥೆ ಕಲ್ಪಿಸಿದ್ದರು. ಹೃದಯ, ಶ್ವಾಸಕೋಶ ಹಾಗೂ ಲಿವರ್‌ನ್ನು ರವಿವಾರ ಸಂಜೆ ಆ್ಯಂಬುಲೆನ್ಸ್ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊಂಡೊಯ್ದು, ಅಲ್ಲಿಂದ ವಿಮಾನ ಮೂಲಕ ಚೆನ್ನೈ ಮತ್ತು ಬೆಂಗಳೂರಿಗೆ ಸಾಗಿಸಲಾಯಿತು.

ಲಿಂಡಾ ಶಾರೆನ್ ಬೆಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದು, ರಕ್ತದೊತ್ತಡ ಕಾಯಿಲೆಯಿಂದ 4 ವರ್ಷಗಳ ಹಿಂದೆ ಕೆಲಸ ಬಿಟ್ಟು ಊರಿಗೆ ಬಂದು ತನ್ನ ತಾಯಿಯೊಂದಿಗೆ ಕಿನ್ನಿಗೋಳಿಯಲ್ಲಿ ವಾಸವಿದ್ದರು. ರಕ್ತದೊತ್ತಡ ಮತ್ತು ತಲೆನೋವು ತೀವ್ರವಾದ ಹಿನ್ನೆಲೆಯಲ್ಲಿ ಜು.11ರಂದು ಫಾದರ್ ಮುಲ್ಲರ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು.

4 ವರ್ಷಗಳಿಂದ ಆರೋಗ್ಯ ಸಲಹೆ ನೀಡುತ್ತಿದ್ದ ಡಾ.ವೆಂಕಟೇಶ್ ಎಂ. ಅವರಲ್ಲದೆ, ಡಾ.ರಾಘವೇಂದ್ರ, ಡಾ.ಜೋವರ್ ಲೋಬೊ, ಡಾ.ಮಂಜುನಾಥ್ ಜೆ. ಅವರು ಚಿಕಿತ್ಸೆ ನೀಡುತ್ತಿದ್ದರು. ಸಿ.ಟಿ.ಸ್ಕ್ಯಾನ್ ಮಾಡಿದಾಗ ಲಿಂಡಾ ಅವರ ಮೆದುಳಿನಲ್ಲಿ ರಕ್ತ ಹೆಪ್ಪು ಗಟ್ಟಿರುವುದು ಕಂಡು ಬಂದಿತ್ತು. ಈ ಕಾರಣದಿಂದಾಗಿ ಪ್ರಜ್ಞಾ ಹೀನರಾದ ಅವರನ್ನು ತೀವ್ರ ನಿಗಾ ಘಟಕದ ವೆಂಟಿಲೇಟರ್‌ನಲ್ಲಿ ದಾಖಲಿಸಲಾಗಿತ್ತು. ಶನಿವಾರ ಅವರ ಮಿದುಳು ನಿಷ್ಕ್ರಿಯವಾಯಿತು ಎಂದು ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಉದಯ ಕುಮಾರ್ ತಿಳಿಸಿದರು.

ಇದೀಗ ಮಂಗಳೂರು ನಗರದ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಈ ಕಾರ್ಯದಿಂದ 6 ಮಂದಿಗೆ ಜೀವದಾನ ಮಾಡಿದಂತಾಗಿದೆ.

Leave a Reply

error: Content is protected !!
Scroll to Top
%d bloggers like this: