ಪುಟ್ಟ ಮಗಳ ಕುತ್ತಿಗೆಗೆ ಬಾಯಿ ಹಾಕಿದ ಚಿರತೆ | ಅಮ್ಮನ ಬರಿಗೈನ ಹೋರಾಟಕ್ಕೆ ಸೋತು ಹೋದ ಚಿರತೆ, ಮಗಳು ಬಚಾವ್ !
ಎದುರಿಗಿರುವುದು ಯಾವುದೇ ದೊಡ್ಡ ಹಿಂಸಾ ಪ್ರಾಣಿಯಾದರೇನು, ತನ್ನ ಮಗುವಿಗೆ ಸಮಸ್ಯೆ ಎದುರಾದಾಗ ಹೆತ್ತವರು ಪ್ರಾಣವೆಂಬುದನ್ನು ಕಸದ ತರ ನಿರ್ಲಕ್ಷಿಸಿ ಮಕ್ಕಳನ್ನು ರಕ್ಷಿಸುತ್ತಾರೆ ಎಂಬುದಕ್ಕೆ ಇದೊಂದು ಫ್ರೆಶ್ ಉದಾಹರಣೆ.
ತಾಯಿ ಮಗಳಿಬ್ಬರು ಕಾಡಿಗೆ ತೆರಳಿದ್ದ ವೇಳೆ ಚಿರತೆಯೊಂದು ಬಾಲಕಿಯ ಮೇಲೆ ಎರಗಿದೆ. ಬಾಲಕಿಯ ತಾಯಿ ಏಕಾಂಗಿಯಾಗಿ ಬರಿಕೈಯಲ್ಲಿ ಚಿರತೆಯೊಂದಿಗೆ ಹೋರಾಡಿ ಮಗಳನ್ನು ರಕ್ಷಿಸಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಚಂದ್ರಪುರ ನಗರದ ಬಳಿ ಇರುವ ಜುನೋನಾ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ತಾಯಿ ಅರ್ಚನಾ ತಮ್ಮ 5 ವರ್ಷದ ಮಗಳು ಪ್ರಜಕ್ತಾಳೊಂದಿಗೆ ಕಾಡಿಗೆ ತೆರಳಿದ್ದಳು. ಅಡುಗೆ ಮಾಡಲು ಏನಾದರೂ ಗೆಡ್ಡೆ ಗೆಣಸು ಹುಡುಕಿಕೊಂಡು ತರಲು ಅವರಿಬ್ಬರು ಕಾಡಿಗೆ ಹೋಗಿದ್ದರು. ಈ ವೇಳೆ ಏಕಾಏಕಿ ಚಿರತೆಯೊಂದು ಪ್ರಜಕ್ತಾಳ ಮೇಲೆ ಎರಗಿದೆ. ಚಿರತೆ ತನ್ನ ಬಾಯಿಯನ್ನು ನೇರವಾಗಿ ಬಾಲಕಿಯ ತಲೆಗೆ ಹಾಕಿದೆ.
ತಕ್ಷಣ ಎಚ್ಚೆತ್ತುಕೊಂಡ ತಾಯಿ ಅರ್ಚನಾ ಚಿರತೆಯನ್ನು ಓಡಿಸಲು ಪ್ರಯತ್ನಿಸಿದ್ದಾಳೆ. ಆಗ ಬಾಲಕಿಯನ್ನು ಬಿಟ್ಟ ಚಿರತೆ ಅರ್ಚನಾಳ ಮೇಲೆ ದಾಳಿ ನಡೆಸಲು ಮುಂದಾಗಿದೆ. ಅದರೊಂದಿಗೆ ಆಕೆ ಕಷ್ಟಪಟ್ಟು ಹೋರಾಡಿದ್ದಾಳೆ. ಮತ್ತೆ ಆಕೆಯನ್ನು ಬಿಟ್ಟು, ಬಾಲಕಿಯ ತಲೆಗೆ ಬಾಯಿ ಹಾಕಿದೆ. ಆಗ ಅಲ್ಲಿ ಬಿದ್ದಿದ್ದ ಕೋಲನ್ನು ತೆಗೆದುಕೊಂಡ ಅರ್ಚನಾ ಚಿರತೆಗೆ ಬಲವಾಗಿ ಹೊಡೆಯಲಾರಂಭಿಸಿದ್ದಾಳೆ. ಕೆಲ ಕ್ಷಣಗಳ ನಂತರ ಸ್ವಲ್ಪ ನೋವುಗೊಂಡ ಚಿರತೆ, ಬಾಲಕಿಯನ್ನು ಅಲ್ಲೇ ಬಿಟ್ಟು ವಾಪಸ್ಸು ಹೋಗಿದೆ. ಕೊನೆಗೂ ತಾಯಿಯ ಪ್ರೀತಿಯ ಮುಂದೆ ಚಿರತೆ ಸೋತು ಹೋಗಿದೆ.
ಚಿರತೆ ಬಾಯಿಗೆ ಸಿಕ್ಕಿದ್ದ ಬಾಲಕಿ ಮಾತ್ರ ಗಂಭೀರ ಗಾಯಾಳುವಾಗಿದ್ದಾಳೆ. ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಆಕೆಯ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.