ಬೆಳ್ತಂಗಡಿ | ವಶೀಕರಣ ತಂತ್ರ ಬಳಸಿ ಮುಖಂಡರೊಬ್ಬರಿಂದ 81000 ರೂಪಾಯಿ ಪೀಕಿದ ಸನ್ಯಾಸಿಗಳು !
ಸಾಧುವಿನ ವೇಷದಲ್ಲಿ ಬಂದ ನಾಲ್ವರು ವಂಚಕರು ಮಂಕುಬೂದಿ ಎರಚಿ ಸುಮಾರು 81,000 ಹಣವನ್ನು ದೋಚಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಪಡಂಗಡಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಸಂತೋಷ್ ಕುಮಾರ್ ಜೈನ್ ರವರೇ ಸಾಧುಗಳ ವಶೀಕರಣಕ್ಕೆ ಮರುಳಾಗಿ ವಂಚಿತರಾದವರು.
ಅವತ್ತು ಸಂತೋಷ್ ಕುಮಾರ್ ಜೈನ್ ರವರು ಮನೆಯಲ್ಲಿಯೆ ಇದ್ದರು. ಆ ಸಂದರ್ಭದಲ್ಲಿ ಬೊಲೆರೊ ವಾಹನದಲ್ಲಿ ಸನ್ಯಾಸಿಯೊಬ್ಬ ಅವರ ಮನೆಯೆದುರು ಬಂದಿಳಿದಿದ್ದಾರೆ. ಆ ಸನ್ಯಾಸಿಯ ಜೊತೆಗೆ ಇನ್ನೂ ಮೂವರು ಇದ್ದರು. ಹಾಗೆ ಬಂದ ನಾಲ್ವರು, ತಾಲೂಕಿನ ಗಣ್ಯ ವ್ಯಕ್ತಿಯೋರ್ವರ ಮನೆಗೆ ಹೋಗಲು ದಾರಿ ತೋರಿಸುವಂತೆ ಮೊದಲಿಗೆ ಮತ್ತು ಶುರುವಿಟ್ಟಿದ್ದರು.
ಹಿಂದಿ ಮಿಶ್ರಿತ ಭಾಷೆಯಲ್ಲಿ ಮಾತನಾಡುತ್ತಿದ್ದ ಅವರಿಗೆ ಸರಿಯಾದ ವಿವರ ನೀಡಿದ ಸಂತೋಷ್ರವರು ಅವರು ಕೇಳಿದ ವ್ಯಕ್ತಿಯ ಅಡ್ರೆಸ್ ಮತ್ತು ದಾರಿಯನ್ನು ಸರಿಯಾಗಿ ವಿವರಿಸಿ ಹೇಳಿದ್ದಾರೆ. ಆಗ ಸನ್ಯಾಸಿಗಳು ಇವರ ಬಗ್ಗೆ, ಇವರ ಮನೆಯ ಬಗ್ಗೆ ವಿಚಾರಿಸಿ, ತಮ್ಮ ಮನೆಗೆ ನಾವು ಬರಬಹುದೇ ಎಂದು ವಿಚಾರಿಸಿದ್ದರು. ಮೊದಲೇ ದೈವ, ದೇವರು, ಧಾರ್ಮಿಕತೆಯ ಬಗ್ಗೆ ಅಪಾರ ನಂಬಿಕೆಯಿರುವ ಸಂತೋಷ್ ಕುಮಾರ್ ಜೈನ್ ಅವರು, ಈ ಸನ್ಯಾಸಿಗಳನ್ನು ತಮ್ಮ ಮನೆಗೆ ಆಹ್ವಾನಿಸಿದ್ದಾರೆ. ಕಾರಣ ಅವರೇನು ಬೀದಿಯಲ್ಲಿ ತಿರುಗುವ ಸಂನ್ಯಾಸಿಯ ಥರ ಇರುವವರಾಗಿರಲಿಲ್ಲ. ಬುಲೆರೋ ಗಾಡಿಯಲ್ಲಿ ಓಡಾಡುತ್ತಿದ್ದ ಅವರನ್ನು ಯಾವುದು ಮಹಾನ್ ವ್ಯಕ್ತಿಗಳಿರಬೇಕೆಂದು ಸಂತೋಷ್ ಕುಮಾರ್ ಅವರು ಅಂದುಕೊಂಡಿದ್ದರು.
ಅವರು ಮನೆಯೊಳಗೆ ಬಂದು ಸಂತೋಷ್ ಕುಮಾರ್ ಅವರ ಕೈ ಉಜ್ಜಿ, ನಂತರ ‘ ಸಂತೋಷ್ ನಿನ್ನ ಕೈ ಮೂಸಿ ನೋಡು ಅಂತ ಹೇಳಿದ್ರು. ಅವರು ಹೇಳಿದಂತೆ ಮಾಡಿದ ಸಂತೋಷ್ ಕುಮಾರ್ ಜೈನ್ರಿಗೆ ಅಗರಬತ್ತಿಯ ವಾಸನೆ ಮೂಗಿಗೆ ಬಡಿದಿದೆ. ಏನೋ ಹಾಯಾದ ಅನುಭವ ಉಂಟಾಗಿದೆ. ಆಗ ಸಂತೋಷ್ ಕುಮಾರ್ಗೆ ಇವರ ಮೇಲೆ ಭಕ್ತಿ ಹೆಚ್ಚಾಗಿ ಆರಂಭದಲ್ಲಿ 5000 ರೂಪಾಯಿ ತಾನಾಗಿಯೇ ನೀಡಿದ್ದಾರೆ.
ಇದಾದ ನಂತರ 25 ಸಾವಿರ ಕೊಡು ಎಂದು ಆ ಸನ್ಯಾಸಿಗಳು ಇಂಡೆಂಟ್ ಹಾಕಿದ್ದರು. ಅಷ್ಟು ಹೇಳಿದ್ದೇ ತಡ ಸಂತೋಷ್ ಕುಮಾರ್ ಜೈನ್ ಮರು ಮಾತನಾಡದೇ 25,000 ನೀಡಿ ಕೃತಾರ್ಥ ಭಾವದಿಂದ ಕೈಕಟ್ಟಿ ನಿಂತಿದ್ದಾರೆ. ನಂತರ ಆ ಸನ್ಯಾಸಿಗಳು ಮತ್ತೆ 51,000 ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದಾರೆ. ಅದನ್ನು ಕೂಡ ಅವರು ಮರು ಪ್ರಶ್ನಿಸದೆ, ಎರಡು ಮಾತಾಡದೆ ನೀಡಿದ್ದಾರೆ.
ಈ ವೇಳೆ ಸನ್ಯಾಸಿಗಳು ತೃಪ್ತರಾಗಿ ಮತ್ತು ಮಂದಸ್ಮಿತರಾಗಿ, ” ಭಕ್ತಾ, ನಮಗೆ ಹಣ ಕೊಟ್ಟಿರುವುದಕ್ಕೆ ನಿನಗೆ ಬೇಸರವಾಗಿದೆಯಾ ಎಂದು ಕೇಳಿದ್ದಾರೆ. ಆಗ 81,000 ರೂಪಾಯಿ ಕೊಟ್ಟು, ಇನ್ನೂ ವಿಧೇಯನಾಗಿ ಕಟ್ಟಿಗೆ ನಿಂತಿದ್ದ ಸಂತೋಷ್ ಕುಮಾರ್ ಜೈನ್ ಅವರು ” ನನಗೆ ಯಾವುದೇ ಬೇಸರವಿಲ್ಲ, ಗುರುಗಳೇ ” ಎಂದು ಹೇಳಿದ್ದಾರೆ. ಸನ್ಯಾಸಿಗಳಲ್ಲಿ ಇಬ್ಬರು ಮನೆಯ ಹೊರಗೆ ನಿಂತು ಇವರ ಮನೆಗೆ ಬರುವ ಹುಡುಗರನ್ನು ಮಾತನಾಡಿಸಿಕೊಂಡು, ಅವರು ಮನೆಯೊಳಗೆ ಬಾರದಂತೆ ತಡೆಯುತ್ತಿದ್ದರು ಎಂಬುದು ಆನಂತರ ಗೊತ್ತಾಗಿದೆ.
ಹೀಗೆ ಸನ್ಯಾಸಿಗಳು 81,000 ರೂಪಾಯಿ ಪಡೆದು ಹೋದ ಸುಮಾರು ಮುಕ್ಕಾಲು ಗಂಟೆಗಳ ನಂತರ ಸಂತೋಷ್ ಕುಮಾರ್ ಜೈನ್ ಗೆ ಏಕಾಏಕಿ ಚಿಂತೆಯಾಗಿದೆ. ನಾನ್ಯಾಕೆ ಅವರಿಗೆ ಹಣ ಕೊಟ್ಟೆ, ನನಗೇನಾಗಿದೆ ಅನ್ನುವ ಭಾವನೆ ಅವರನ್ನು ಕಾಡಿದೆ. ನಂತರ ಆ ಸನ್ಯಾಸಿಗಳಿಗೆ ಕರೆ ಮಾಡಿ ಮಾತನಾಡಿದ್ದಾರೆ. ಆದರೆ ಸನ್ಯಾಸಿಗಳು ಇವರಿಗೆ ಒಳ್ಳೆಯದಾಗುತ್ತೆ ಅಂತ ಭರವಸೆಯ ಪಾಸಿಟಿವ್ ಮಾತು ಹೇಳುತ್ತಲೇ ಇದ್ದಾರೆ.
ಇದೀಗ ಸನ್ಯಾಸಿಗಳ ರೂಪದಲ್ಲಿ ಬಂದ ವ್ಯಕ್ತಿಗಳು ಯಾರು ? ಅದು ಯಾವ ಮಾಯಾ ವಿದ್ಯೆ ವಶೀಕರಣ ಮಾಡಿ ಇನ್ನೊಬ್ಬರ ಮನಸ್ಸನ್ನು ನಿಯಂತ್ರಣಕ್ಕೆ ತಂದುಕೊಂಡರು ಮುಂತಾದ ಬಗ್ಗೆ ತನಿಖೆ ನಡೆಯಬೇಕಿದೆ.
ಸಮಾಜ ಸೇವಕ, ಧಾರ್ಮಿಕ ಮುಂದಾಳು, ಜನಪ್ರತಿನಿಧಿಯೂ ಆಗಿರುವ ಸಂತೋಷ್ ಕುಮಾರ್ ಜೈನ್ ಅವರಿಗೆ ಇಂತಹ ಕಪಟ ಸನ್ಯಾಸಿಗಳು ಮೋಸ ಮಾಡಿದ್ದಾರೆ. ಮುಂದೆ ಯಾರಿಗೂ ಇಂತಹ ಕಪಟ ಆಗದಿರಲಿ. ಇಂತಹ ಕಪಟಿಗಳು ನಿಮ್ಮ ಮುಂದೆಯೂ ಬಂದು ನಿಂತು ಕೈ ಮೂಸಲು ಹೇಳಿ ಕಾಸು ಪೀಕಬಹುದು. ಎಚ್ಚರ ಓದುಗ, ಎಚ್ಚರ.