ಕಂಬಳದ ಓಟದ ವೀರ, ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸಗೌಡರಿಗೆ ನಿಂದನೆ, ಕೊಲೆ ಬೆದರಿಕೆ ಹಾಕಿದ್ದ ಎನ್ನಲಾದ ಪ್ರಶಾಂತ್ ಬಂಗೇರ ಅರೆಸ್ಟ್
ಮೂಡಬಿದಿರೆ: ಕಂಬಳದ ದೊರೆ, ಕಂಬಳದ ಉಸೇನ್ ಬೋಲ್ಟ್ ಹೆಸರಿನಿಂದ ಜನಪ್ರಿಯವಾಗಿರುವ ಮತ್ತು ‘ಕರ್ನಾಟಕ ಕ್ರೀಡಾ ರತ್ನ’ ಪ್ರಶಸ್ತಿ ವಿಜೇತ ಅಶ್ವತ್ ಪುರ ಶ್ರೀನಿವಾಸ್ ಗೌಡ ಅವರ ಮೊಬೈಲಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಲ್ಲದೆ, ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ಶ್ರೀರಾಮ ಸೇನೆಯ ಕಾರ್ಯಕರ್ತ ಪ್ರಶಾಂತ್ ಬಂಗೇರ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈಗ ಬಂಧಿಯಾಗಿರುವ ಪ್ರಶಾಂತ್ ಬಂಗೇರ, ಶ್ರೀನಿವಾಸ ಗೌಡರಿಗೆ ಕಾರ್ ಸ್ಟ್ರೀಟ್ ಮಂಗಳೂರಿನಲ್ಲಿರುವ ರಿಯಲ್ ಎಸ್ಟೇಟ್ ಕಚೇರಿಗೆ ಆಹ್ವಾನಿಸಿದ್ದರು. ಅಲ್ಲಿಗೆ ಬಂದು ಕಂಬಳದ ಇತಿಹಾಸವನ್ನು ಹೇಳಲು ಮುಂದಾಗಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಶ್ರೀನಿವಾಸ ಗೌಡ ಅವರು ಮಂಗಳೂರಿಗೆ ಭೇಟಿ ನೀಡಲು ನನಗೆ ಸದ್ಯಕ್ಕೆ ಅಸಾಧ್ಯ ಎಂದು ಸೌಮ್ಯವಾಗಿಯೇ ನುಡಿದಿದ್ದಾರೆ. ಬದಲಿಗೆ ಕರೆ ಮಾಡಿದಾತನಿಗೇ ಮೂಡಬಿದಿರೆಯ ಒಂಟಿಕಟ್ತೆ ಎಂಬಲ್ಲಿಗೆ ಬರಲು ಹೇಳಿದ್ದಾರೆ.
ಆ ವೇಳೆ “ನಾನು ಬರುತ್ತೇನೆ. ಆದರೆ ನೀವು ಅಲ್ಲಿಗೆ ಬಂದಾಗ, ನೀವು ಬೆನ್ನನ್ನು ಅಡಿಕೆ ಹಾಳೆಗಳಿಂದ ರಕ್ಷಿಸಬೇಕಾಗುತ್ತದೆ. ನಿನ್ನ ಬೆಂಬಲಿಗರನ್ನು ಸಹ ಬೇಕಾದರೆ ಕರ್ಕೊಂಡು ಬಾ” ಎಂದು ಪ್ರಶಾಂತ್ ಬೆದರಿಸಿದ್ದಾನೆ ಎನ್ನಲಾಗಿದ್ದು, ಶ್ರೀನಿವಾಸ ಗೌಡ ಮೂಡಬಿದಿರೆ ಪೋಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದರು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.