ಬಟ್ಟೆ ಒಗೆಯುವಾಗ ಕೆಸರಿನಲ್ಲಿ ಬಿದ್ದ ಹುಡುಗಿ, ರಕ್ಷಿಸಲು ಧಾವಿಸಿದ ಇಬ್ಬರು ಹೆಣ್ಣುಮಕ್ಕಳ ಸಹಿತ ಎರಡೂ ತಾಯಂದಿರ ಧಾರುಣ ಮರಣ | ನೀರವ ಮೌನದಲ್ಲಿ ಇಡೀ ಗ್ರಾಮ !!
ಅವರೆಲ್ಲರೂ ಒಂದೇ ಗ್ರಾಮಕ್ಕೆ ಸೇರಿದವರು. ಅದರಲ್ಲೂ ಅಕ್ಕಪಕ್ಕದ ಮನೆಯವರು. ಹಾಗಾಗಿ ಎಲ್ಲರೂ ಒಟ್ಟಿಗೆ ತಮ್ಮ ಗ್ರಾಮದ ದೇವಸ್ಥಾನದ ಬಳಿಯಿರುವ ಕೆರೆಗೆ ಮಕ್ಕಳ ಜೊತೆಯಲ್ಲಿ ತೆರಳಿದ್ದರು. ಮಕ್ಕಳೆಂದ ಮೇಲೆ ಅಲ್ಲಿ ತುಂಟಾಟ, ಕಿತ್ತಾಟ ಇದ್ದೇ ಇರುತ್ತದೆ.
ಮಹಿಳೆಯರು ನದಿಯಲ್ಲಿ ಬಟ್ಟೆ ಒಗೆಯುತ್ತಿರಬೇಕಾದರೆ, ಮಕ್ಕಳು ನೀರಿನಲ್ಲಿ ಆಟವಾಡುತ್ತಿದ್ದರು. ಹೀಗಿರುವಾಗ ಬಾಲಕಿಯೊಬ್ಬಳು ನೀರಿನ ಆಳದಲ್ಲಿ ಸಿಲುಕಿಕೊಂಡಾಗ, ಆಕೆಯ ರಕ್ಷಣೆಗೆ ಹೋದ ಐವರು ನೀರುಪಾಲಾಗಿರುವ ದುರಂತ ಘಟನೆ ತಮಿಳುನಾಡಿನ ತಿರುವಳ್ಳೂರಿನಲ್ಲಿ ಬುಧವಾರ ನಡೆದಿದೆ.
ಮೃತರನ್ನು ರಾಜು ಎಂಬವರ ಪತ್ನಿ ಸುಮತಿ (35), ಮಗಳು ಅಶ್ವಿತಾ (15) ದೇವೇಂದ್ರನ್ ಎಂಬವರ ಮಗಳು ಜೀವಿತಾ (14) ಗುಣಶೇಖರನ್ ಎಂಬವರ ಮಗಳು ನರ್ಮದಾ (12) ಮತ್ತು ಮುನಿಸ್ವಾಮಿ ಪತ್ನಿ ಜ್ಯೋತಿಲಕ್ಷ್ಮಿ (30) ಎಂದು ಗುರುತಿಸಲಾಗಿದೆ.
ಇವರೆಲ್ಲರು ತಿರುವಳ್ಳೂರಿನ ಕರುಂಪುಕುಪ್ಪಮ್ ಗ್ರಾಮದ ನಿವಾಸಿಗಳು. ಗ್ರಾಮದ ಅಂಕಾಳಪರಮೇಶ್ವರಿ ದೇವಸ್ಥಾನ ಸಮೀಪದ ಕೆರೆಯಲ್ಲಿ ಬೆಳಿಗ್ಗೆ ಬಟ್ಟೆ ಒಗೆಯಲು ತೆರಳಿದ್ದರು.
ಜ್ಯೋತಿಲಕ್ಷ್ಮೀ ಮತ್ತು ಸುಮತಿ ಪುಷ್ಕರಣಿ ಕೆರೆಯ ದಡದಲ್ಲಿ ಬಟ್ಟೆ ಒಗೆಯುವಾಗ ನರ್ಮದಾ, ಅಶ್ವಿತಾ ಮತ್ತು ಜೀವಿತಾ ನೀರಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ ನರ್ಮದಾ ಕೆರೆಯ ಆಳಕ್ಕೆ ಹೋಗಿ ಮಣ್ಣಿನಲ್ಲಿ ಸಿಲುಕಿದ್ದಾಳೆ. ಇದಾದ ನಂತರದಲ್ಲಿ ಆಕೆಯನ್ನು ಕಾಪಾಡಲು ಒಬ್ಬರ ಹಿಂದೆ ಒಬ್ಬರಂತೆ ಹೋಗಿ ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.
ಸಂಜೆಯಾದರೂ ಯಾರೊಬ್ಬರು ಮನೆಗೆ ಮರಳದಿದ್ದನ್ನು ಕಂಡು ಅನುಮಾನಗೊಂಡ ಗ್ರಾಮಸ್ಥರು, ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಸುಮಾರು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಐದು ಮಂದಿಯ ಮೃತದೇಹವನ್ನು ಹೊರತೆಗೆದಿದ್ದಾರೆ. ಬಳಿಕ ಮೃತದೇಹವನ್ನು ಪೊನ್ನೇರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಿದ್ದಾರೆ.
ಮೂವರು ಹುಡುಗಿಯರು ಸೇರಿ ಒಟ್ಟು ಐದು ಮಂದಿ ಮೃತಪಟ್ಟಿದ್ದು, ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಮೃತರ ಕುಟುಂಬದಲ್ಲಿ ಶೋಕ ಸಾಗರ ಆವರಿಸಿಕೊಂಡಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.