ಅವರಿಗೆ ಹೃದಯಾಘಾತ ಆದಾಗ ಆಸ್ಪತ್ರೆ 175 ಕಿ. ಮೀ ದೂರದಲ್ಲಿತ್ತು | ಇನ್ನು ಬದುಕು ಅಸಾಧ್ಯ ಎಂದಾಗ ಬಂದು ಕೈ ಹಿಡಿದದ್ದು ತಾನು ಕಲಿತಿದ್ದ ಪ್ರಾಣಾಯಾಮ !

ಅವರಿಗೆ ಅಚಾನಕ್ ಆಗಿ ಹೃದಯಾಘಾತ ಉಂಟಾಗಿತ್ತು. ತಕ್ಷಣಕ್ಕೆ ಅವರು ಆ ಆಸ್ಪತ್ರೆಗೆ ಧಾವಿಸಿ ಹೋಗಬೇಕಾಗಿತ್ತು. ತಮಗೆ ಎದೆನೋವು ಬಂದ ತಕ್ಷಣಕ್ಕೆ ಅವರು ಸ್ಥಳೀಯ ಆಸ್ಪತ್ರೆಯೊಂದನ್ನು ಭೇಟಿಯಾಗಿದ್ದರು. ಹೃದಯಾಘಾತ ಆಗಿರುವುದನ್ನು ಆಸ್ಪತ್ರೆಯ ವೈದ್ಯರು ದೃಢೀಕರಿಸಿದ್ದರು. ತಕ್ಷಣಕ್ಕೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸೇರಿಸಬೇಕಾಗಿತ್ತು. ಆದರೆ ಅದು 175 ಕಿಲೋಮೀಟರುಗಳ ಕನಿಷ್ಠ ನಾಲ್ಕು ಗಂಟೆ ಪ್ರಯಾಣದ ಹಾದಿ. ಅಷ್ಟರಲ್ಲಿ ಏನು ಬೇಕಾದರೂ ಆಗಿ ಬಿಡಬಹುದಿತ್ತು. ಬದುಕು ಇನ್ನೇನು ಅಸಾಧ್ಯ ಎಂದಾಗ ಅವರ ಕೈ ಹಿಡಿದದ್ದು ಅವರು ಕಲಿತಿದ್ದ ಪ್ರಾಣಾಯಾಮ !

ನಿಜ, ಯೋಗಪಟುವೊಬ್ಬರು ಆಸ್ಪತ್ರೆ ತೆರಳುವ 175 ಕಿ.ಮೀ. ದೂರದ ಪ್ರಯಾಣದ ಅವಧಿಯಲ್ಲಿ ನಿರಂತರ 4 ಗಂಟೆ ಪ್ರಾಣಾಯಾಮಕ್ಕೆ ಮೊರೆ ಹೋಗಿ ಜೀವ ರಕ್ಷಿಸಿಕೊಂಡಿದ್ದಾರೆ. ಇದೀಗ ವೈದ್ಯ ಲೋಕದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕಾರವಾರದ ಗ್ರಾಮಾಂತರ ಜಿಲ್ಲೆಯ ಯೋಗಪಟು ಹೇಮಂತ್‌ ನಾರಾಯಣ ತಲೇಕರ್‌ಗೆ ಹೃದಯಾಘಾತವಾಗಿತ್ತು. ಕೂಡಲೇ ಸಂಬಂಧಿಕರು ಆಸ್ಪತ್ರೆಗೆ ಸೇರಿಸಿ ಪರೀಕ್ಷೆ ಬಳಿಕ ಹೃದಯಾಘಾತ ಆಗಿರುವುದನ್ನು ಖಾತ್ರಿಪಡಿಸಿದರು. ಹೊನ್ನಾವರದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ, ಮಂಗಳೂರಿನ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದರಿಂದ ಹೇಮಂತ್‌ ಕುಟುಂಬ ಮಂಗಳೂರಿನಲ್ಲಿರುವ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕರೆತರಲು ನಿರ್ಧರಿಸಿದರು.

ತನಗೆ ಬಂದ ಆಪತ್ತಿನ ಬಗ್ಗೆ ಧೃತಿಗೆಡದ ಹೇಮಂತ್‌, ಉಸಿರನ್ನು ನಿಯಂತ್ರಣದಲ್ಲಿಡುವ ಸಲುವಾಗಿ ಪ್ರಾಣಾಯಾಮಕ್ಕೆ ಮೊರೆ ಹೋದರು. ಸುಮಾರು 4 ಗಂಟೆಗಳ ಪ್ರಯಾಣದಲ್ಲಿ ಪ್ರಾಣಾಯಾಮ ಮಾಡುವ ಮೂಲಕ ಉಸಿರನ್ನು ನಿಯಂತ್ರಣದಲ್ಲಿಟ್ಟು ಮಂಗಳೂರಿನ ಕೆಎಂಸಿ ಆಸ್ಪತ್ರೆ ಸೇರಿದರು. ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್‌ ಕೂಡಲೇ ಚಿಕಿತ್ಸೆ ಆರಂಭಿಸಿ ಆಂಜಿಯೋಗ್ರಾಂ ಮಾಡಿದಾಗ ಎರಡು ಕಡೆ ಬ್ಲಾಕ್‌ ಇರುವುದು ಕಂಡುಬಂದಿದ್ದು, ಚಿಕಿತ್ಸೆ ಮೂಲಕ ಸರಿಪಡಿಸಲಾಯಿತು.

ಹೇಮಂತ್‌ ಸ್ನೇಹಿತ ಮಹೇಶ್‌ ಈ ಬಗ್ಗೆ ಮಾತನಾಡಿ, ಯೋಗಪಟುವಾಗಿದ್ದ ಹೇಮಂತ್‌ ಜೊತೆಗೆ ಕುಟುಂಬವಿಡೀ ಯೋಗಕ್ಕೆ ಮೊರೆ ಹೋಗಿದೆ. ಹೇಮಂತ್‌ ಹೃದಯಾಘಾತಕ್ಕೊಳಗಾದ ವಿಷಯ ಗೊತ್ತಾದ ಬಳಿಕವೂ ಏನೂ ಆತಂಕಪಡದೆ ಪ್ರಾಣಾಯಾಮಕ್ಕೆ ಮೊರೆ ಹೋಗಿದ್ದಾರೆ ಎನ್ನುತ್ತಾರೆ.

ಚಿಕಿತ್ಸೆ ಪಡೆದ ಬಳಿಕ ಹೇಮಂತ್‌ ನಾರಾಯಣ್‌ ಮಾತನಾಡಿ, ನನಗೆ ಕಾರಿನಲ್ಲಿ ಬರುವಾಗ ಎದೆನೋವು ಕಾಣಿಸಿಕೊಂಡ ಬಳಿಕ ಸಾಧ್ಯವಾದಷ್ಟು ಪ್ರಾಣಾಯಾಮಕ್ಕೆ ಮೊರೆ ಹೋಗಿ ಉಸಿರಾಟದ ನಿಯಂತ್ರಣ ಮಾಡುತ್ತಿದ್ದೆ. ದೇವರ ಅನುಗ್ರಹ ಮತ್ತು ಯೋಗದಿಂದ ಪುನರ್ಜನ್ಮ ಸಿಕ್ಕಿದೆ ಎಂದರು.
ಈ ಬಗ್ಗೆ ಹಲವು ತಜ್ಞರು ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದು ಪತ್ರಿಕೆಗಳಲ್ಲಿ ವರದಿಯಾಗಿದೆ. ಅದರ ಸಾರಾಂಶ ಇಂತಿದೆ.

ಅಮೆರಿಕನ್‌ ಶ್ವಾಸಕೋಶ ಸಂಸ್ಥೆಯೊಂದರ ಅಧ್ಯಯನ ಪ್ರಕಾರ ‘ಉಸಿರಾಟ ಪ್ರಕ್ರಿಯೆಯನ್ನು ನಿಯಮಿತವಾಗಿ ಪ್ರತಿನಿತ್ಯ ಅಭ್ಯಾಸ ಮಾಡಿದರೆ, ದೇಹದಲ್ಲಿ ಆಮ್ಲಜನಕದ ಮಟ್ಟ ಹೆಚ್ಚಿಸಿ ರಕ್ತಪರಿಚಲನೆಗೆ ಸಹಾಯ ಮಾಡುತ್ತದೆ. ಈ ಮಾಹಿತಿ ಪ್ರಕಾರ ಹೃದ್ರೋಗಿಗೆ ಪ್ರಾಣಾಯಾಮ ಸಹಕಾರ ಮಾಡಿದೆ ಎನ್ನುವುದು ಒಪ್ಪುವ ಸತ್ಯ. ನಾನು ಹೇಮಂತ್‌ ಅವರಿಗೆ ಚಿಕಿತ್ಸೆ ನೀಡಿದ ಬಳಿಕ ಅವರಲ್ಲಿ ಮಾತನಾಡುವಾಗ ಪ್ರಾಣಾಯಾಮ ಉಸಿರಾಟಕ್ಕೆ ರಕ್ಷಣೆ ನೀಡಿದ ಬಗ್ಗೆ ಹೇಳಿದ್ದಾರೆ. ಆಸ್ಪತ್ರೆಗೆ ಬಂದ ಬಳಿಕ ರೋಗಿಯ ರಕ್ಷಣೆಗೆ ಆಂಜಿಯೋಗ್ರಾಂ ಮಾಡಿ ಎರಡು ಬ್ಲಾಕ್‌ ತೆಗೆಯಲಾಗಿದೆ. ರೋಗಿ ಆರೋಗ್ಯವಾಗಿದ್ದಾರೆ ಎನ್ನುತ್ತಾರೆ ಕೆಎಂಸಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್‌.

‘ಯೋಗ ಮತ್ತು ಆಧುನಿಕ ವಿಜ್ಞಾನ ಪದ್ಧತಿಯನ್ನು ಆಳವಾಗಿ ಅಧ್ಯಯನವಾಗದೆ ವೈಯಕ್ತಿಕ ಅಭಿಪ್ರಾಯ ಮಂಡಿಸುವುದು ಸರಿಯಲ್ಲ. ಯೋಗ, ಕ್ರೀಡೆ, ವ್ಯಾಯಾಮದಿಂದ ದೇಹದಲ್ಲಿ ಚೈತನ್ಯ ಸಿಗುವುದನ್ನು ಒಪ್ಪೋಣ’ ಎಂದು ಮಂಗಳೂರಿನ ಕೆಎಂಸಿ ಮೆಡಿಕಲ್‌ ಕಾಲೇಜಿನ ಪ್ರೊಫೆಸರ್‌ ಡಾ. ಜಿ. ಜಿ. ಲಕ್ಷ್ಮಣ್‌ ಪ್ರಭು ಅಭಿಪ್ರಾಯಪಟ್ಟಿದ್ದಾರೆ.

ಪ್ರಾಣಾಯಾಮದಲ್ಲಿ ಪೂರಕ-ಕುಂಭಕ-ರೇಚಕ ಎಂಬ ಮೂರು ಹಂತವಿದ್ದು, ಇದು ಹೃದಯದಲ್ಲಿ ಆಮ್ಲಜನಕ ಪರಿಚಲನೆಗೆ ವೇಗವಾಗಿ ಸಂತುಲನ ಕಾಪಾಡಿಕೊಳ್ಳಲು ಸಹಕಾರಿಯಾಗಬಲ್ಲುದು. ಇದರಿಂದ ಹೃದಯದಲ್ಲಿ ಜೀವಕೋಶಗಳ ನಾಶ ತಡೆಯಲು ಸಾಧ್ಯವಿದೆ’ ಎನ್ನುತ್ತಾರೆ ಉಡುಪಿಯ ಎಸ್‌ಡಿಎಂ ಆಯುರ್ವೇದ ಕಾಲೇಜು ಡೀನ್‌ ಡಾ. ನಿರಂಜನ್‌ ರಾವ್‌.

ಪ್ರಾಣಾಯಾಮ ಉಸಿರಾಟದ ಪ್ರಕ್ರಿಯೆಯಾಗಿದ್ದು, ಇದರಿಂದ ದೇಹದ ಜೀವಕೋಶಗಳಿಗೆ ಆಮ್ಲಜನಕ ಸಿಗುತ್ತದೆ. ಹೃದಯಕ್ಕೆ ಆಕ್ಸಿಜನ್‌ ಮತ್ತು ರಕ್ತದ ಪರಿಚಲನೆ ಕಡಿಮೆಯಾದಾಗ ಹೃದಯಾಘಾತವಾಗುತ್ತದೆ. ಯೋಗ ಸಾವಿರ ವರ್ಷ ಹಿಂದಿನಿಂದಲೇ ಬಂದಿದ್ದು, ಲಘು ಪ್ರಮಾಣದ ಹೃದಯಾಘಾತವಾದಾಗ ಪ್ರಾಣಾಯಾಮ ಅನುಕೂಲವಾಗಬಹುದು’ ಎಂದು ಕಾರ್ಕಳದ ಅಶ್ವಿನಿ ಕ್ಲಿನಿಕ್‌ನ ಡಾ. ಜಗದೀಶ್‌ ಹೇಳಿದ್ದಾರೆ.

Leave A Reply

Your email address will not be published.