ದುಬಾರಿ ವಿದೇಶಿ ಕಾರು ಕೊಳ್ಳಲು ದುಡ್ಡಿದೆ, ತೆರಿಗೆ ಕಟ್ಟಲು ಹಣವಿಲ್ಲ ಎಂದ ನಟ ವಿಜಯ್ ಗೆ ಬ್ಯಾಂಡ್ ಬಾರಿಸಿದ ಕೋರ್ಟು | ಬೆಳ್ಳಿತೆರೆಯಲ್ಲಿ ಮಾತ್ರವಲ್ಲ, ನಿಜಜೀವನದಲ್ಲೂ ನಾಯಕರಾಗಿ ಎಂದು ಸೆಲೆಬ್ರಿಟಿಗಳಿಗೆ ಟಾಂಗ್ !!
ಕಾರು ಕೊಳ್ಳಲು ಕೋಟಿ ಕೋಟಿ ಸುರಿದು, ತೆರಿಗೆ ಕಟ್ಟಲು ಹಣವಿಲ್ಲ ಎಂದ ತಮಿಳಿನ ಖ್ಯಾತ ನಟ ವಿಜಯ್ ಅವರಿಗೆ ಮದ್ರಾಸ್ ಹೈ ಕೋರ್ಟ್ ಶಾಕ್ ಕೊಟ್ಟಿದೆ.
ಅಲ್ಲದೆ, ಒಂದು ಲಕ್ಷ ರೂಪಾಯಿ ದಂಡ ವಿಧಿಸುವುದರೊಂದಿಗೆ ಆತನಿಗೆ ಮಾತ್ರವಲ್ಲ ತೆರಿಗೆ ವಂಚಿಸಲು ಪ್ರಯತ್ನಿಸುವ ಎಲ್ಲಾ ಸೆಲೆಬ್ರಿಟಿಗಳಿಗೂ ಕಠಿಣ ಪದಗಳ ವಾಗ್ದಂಡನೆ ವಿಧಿಸಿದೆ.
ವಿಜಯ್ ಅವರ ಬಳಿ ದುಬಾರಿ ಬೆಲೆಯ ಹಲವು ಕಾರುಗಳಿವೆ. ಇತ್ತೀಚೆಗೆ ಪ್ರತಿಷ್ಠಿತ ರೋಲ್ಸ್ ರಾಯ್ಸ್ ಕಾರು ಸೇರ್ಪಡೆಯಾಗಿತ್ತು. ಅದೂ ಸಹ 7.95 ಕೋಟಿ ಬೆಲೆಬಾಳುವ ರೋಲ್ಸ್ ರಾಯ್ಸ್ ಘೋಸ್ಟ್ (Rolls Royce Ghost) ಮಾದರಿಯ ಕಾರು. ಆ ಕಾರನ್ನು ಇಂಗ್ಲೆಂಡ್ನಿಂದ ಆಮದು ಮಾಡಿಕೊಂಡಿದ್ದ ವಿಜಯ್ಗೆ ಭಾರತದಲ್ಲಿ ತೆರಿಗೆ ಕಟ್ಟಲು ಮನಸ್ಸಾಗಲಿಲ್ಲ. ಹಾಗಾಗಿ ಮದ್ರಾಸ್ ಹೈಕೋರ್ಟ್ ಗೆ ವಿಜಯ್ ತೆರಿಗೆ ವಿನಾಯಿತಿ ನೀಡುವಂತೆ ಅರ್ಜಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ನಟನಿಗೆ ಛೀಮಾರಿ ಹಾಕಿದೆ.
2012ರಲ್ಲಿ ನಟ ವಿಜಯ್ ಸಲ್ಲಿಸಿದ್ದ ತೆರಿಗೆ ವಿನಾಯಿತಿಯ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನ ನ್ಯಾ.ಎಸ್.ಎಮ್.ಸುಬ್ರಮಣಿಯಮ್ ಅವರಿದ್ದ ಪೀಠವು, ನಿಜವಾದ ಹೀರೋಗಳು ಸರಿಯಾದ ಸಮಯಕ್ಕೆ ತೆರಿಗೆ ಕಟ್ಟುತ್ತಾರೆ. ನೀವು ನಿಜ ಜೀವನದ ಹೀರೋಗಳಾಗಿ, ಬರಿಯ ತೆರೆಯ ಮೇಲಿನ ಹೀರೋಗಳಾಗಿ ಉಳಿಯಬೇಡಿ ಎಂದು ವಿಜಯ್ ಅವರಿಗೆ ಛಾಟಿ ಬೀಸಿದ್ದಾರೆ. ಇದರ ಜೊತೆಗೆ ನ್ಯಾಯಾಲಯವು 1 ಲಕ್ಷ ರೂ.ಗಳ ದಂಡವನ್ನೂ ವಿಜಯ್ಗೆ ವಿಧಿಸಿದ್ದು, ಅದನ್ನು ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ ಪಾವತಿಸುವಂತೆ ತಿಳಿಸಿದೆ.
ಇಂಗ್ಲೆಂಡ್ನಿಂದ ತರಿಸಿದ ರೋಲ್ಸ್ ರಾಯ್ಸ್ ಮಾದರಿಯ ಕಾರಿಗೆ ಭಾರತದಲ್ಲಿ ಆಮದು ಸುಂಕವನ್ನು ಕಟ್ಟದೇ ಅದರ ವಿರುದ್ಧವಾಗಿ ವಿಜಯ್ ಅವರು ಕೋರ್ಟ್ ನ ಮೆಟ್ಟಿಲೇರಿದ್ದರು. ಅದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಾಲಯವು, ವಿಜಯ್ ಅವರ ವರ್ತನೆಯು ಬಹಳ ಜನರನ್ನು ಪ್ರಭಾವಿಸುವ ಸಾಮರ್ಥ್ಯವನ್ನು ಹೊಂದಿದೆ. ತಮಿಳುನಾಡಿನಂತಹ ರಾಜ್ಯದಲ್ಲಿ ಚಿತ್ರ ನಟರು ಬೇರೆಲ್ಲರಿಗಿಂತ ಹೆಚ್ಚು ಜನರನ್ನು ಪ್ರಭಾವಿಸುತ್ತಾರೆ. ನಟರೇ ಹೀಗೆ ಮಾಡಿದರೆ ತಪ್ಪು ಸಂದೇಶ ಹೋದಂತಾಗುತ್ತದೆ. ನಿಜವಾದ ನಾಯಕನಾದವನು ದೇಶಕ್ಕೆ ಕಟ್ಟಬೇಕಾದ ತೆರಿಗೆಯನ್ನು ತಪ್ಪದೇ ಕಟ್ಟುತ್ತಾನೆ ಎಂದಿದೆ.
ರಿಟ್ ಅರ್ಜಿಯಲ್ಲಿ ವಿಜಯ್ ತಮ್ಮ ಉದ್ಯೋಗವನ್ನು ನಮೂದಿಸದೇ ಇದ್ದದ್ದನ್ನು ಗಮನಿಸಿದ ನ್ಯಾಯಾಲಯವು, ಇಷ್ಟು ದೊಡ್ಡ ಹಿಂಬಾಲಕ ಗಣವನ್ನೇ ಹೊಂದಿದ್ದರೂ, ನಿಮ್ಮ ಉದ್ಯೋಗದ ಕಾಲಂ ಅನ್ನು ಖಾಲಿ ಬಿಟ್ಟಿದ್ದೇಕೆ ಎಂದು ಪ್ರಶ್ನಿಸಿದೆ. ಅಲ್ಲದೇ ರಿಟ್ ಅರ್ಜಿ ಸಲ್ಲಿಸಿ ಒಂಬತ್ತು ವರ್ಷಗಳ ಕಾಲ ನ್ಯಾಯಾಲಯದ ಸಮಯವನ್ನೂ ವ್ಯರ್ಥ ಮಾಡಿದ್ದೀರಿ. ಆಮದು ಸುಂಕ ಕಟ್ಟಿದ್ದೀರೋ, ಇಲ್ಲವೋ ಎಂಬುದನ್ನೂ ಸ್ಪಷ್ಟಪಡಿಸಿಲ್ಲ ಎಂದು ವಿಜಯ್ ಮೇಲೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ನಟರು ತೆರೆಯ ಮೇಲೆ ಭ್ರಷ್ಟಾಚಾರ ವಿರೋಧಿಗಳಾಗಿ, ನ್ಯಾಯ ಪರಿಪಾಲಕರಾಗಿ ದುಷ್ಟರನ್ನು ಸದೆಬಡಿಯುತ್ತಾರೆ. ಬೆಳ್ಳಿತೆರೆಯಲ್ಲಿ ಸಮಾಜಕ್ಕೆ ನ್ಯಾಯ ಒದಗಿಸುವವರೇ ಇವರು ಎಂಬಂತೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಆದರೆ ನಿಜ ಜೀವನಕ್ಕೆ ಬಂದಾಗ ತೆರಿಗೆಯನ್ನು ವಂಚಿಸುವುದು ಅವರ ವ್ಯಕ್ತಿತ್ವಕ್ಕೆ ತಕ್ಕುದಾದ ನಡವಳಿಕೆಯಲ್ಲ. ಸಂವಿಧಾನದಲ್ಲಿ ಸೂಚಿಸಲಾಗಿರುವ ಅಸಮಾನತೆಯನ್ನು ತಗ್ಗಿಸುವ ಕಾರ್ಯದಲ್ಲಿ ಸರಿಯಾದ ಸಮಯಕ್ಕೆ ತೆರಿಗೆಯನ್ನು ಕಟ್ಟುವುದೂ ಕೂಡಾ ಸೇರಿದೆ ಎಂದು ನ್ಯಾಯಾಲಯವು ಕಿವಿಮಾತು ಹೇಳಿದೆ.
ನ್ಯಾ.ಸುಬ್ರಮಣಿಯಮ್ ಈ ಕುರಿತು ತೀರ್ಪಿನಲ್ಲಿ ಸ್ಪಷ್ಟವಾದ ನಿಲುವನ್ನು ದಾಖಲಿಸಿ, ತಾತ್ವಿಕವಾಗಿ ನೋಡುವುದಿದ್ದರೂ ಭಾರತದಂತಹ ಸಾಂಸ್ಕೃತಿಕ ಹಾಗೂ ಮೌಲ್ಯಗಳನ್ನೇ ಪ್ರಧಾನವಾಗಿ ಹೊಂದಿರುವ ದೇಶದಲ್ಲಿ ವಿಶ್ವದ ಶ್ರೇಷ್ಠ ಕಾರು ಉತ್ತಮವಾದ ಜೀವನಕ್ಕೆ ಸಹಕಾರಿಯಾಗಬಲ್ಲದು ಎಂಬುದನ್ನು ಒಪ್ಪಲಾಗದು. ದೇಶದ ಬಡ ಜನರ ರಕ್ತ ಹಾಗೂ ಕಠಿಣ ಶ್ರಮದ ಫಲದಿಂದಾಗಿ ಶ್ರೀಮಂತ ವ್ಯಕ್ತಿಗಳಲ್ಲಿ ಹಣವು ಶೇಖರಣೆಯಾಗಿದೆಯೇ ವಿನಃ, ಆಕಾಶದಿಂದ ಹಣ ಉದುರಿದ ಕಾರಣದಿಂದಲ್ಲ ಎಂದು ಕಠಿಣವಾಗಿ ಟೀಕಿಸಿದೆ.