ಎದುರಿನ ವ್ಯಕ್ತಿಗಳನ್ನು ಹಣಿಯಲು ಬಾಡಿಗೆ ಟ್ರೋಲರ್ ಬಳಸಿದ ರೋಹಿಣಿ ?! | ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಆರೋಪ
ಬೆಂಗಳೂರು: ‘ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ವಿರೋಧಿಗಳ ಬಾಯಿ ಮುಚ್ಚಿಸಲು ಬಾಡಿಗೆ ಟ್ರೋಲರ್ಗಳನ್ನು ಬಳಸುತ್ತಾರೆ’ ಎಂದು ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಹೇಳಿಕೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಇಂದಿನ ವೈರಲ್ ವಸ್ತು
ಜುಲೈ 3ರ ರಾತ್ರಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ರೂಪಾ, ವ್ಯಕ್ತಿಯೊಬ್ಬರು ತಮ್ಮೊಂದಿಗೆ ಜೂನ್ 25ರಂದು ವಾಟ್ಸ್ ಆ್ಯಪ್ ಮೂಲಕ ನಡೆಸಿದ ಸಂಭಾಷಣೆಯ ವಿವರಗಳನ್ನು ಹಂಚಿಕೊಂಡಿದ್ದಾರೆ. ಸಾರ್ವಜನಿಕ ಸಂಪರ್ಕ (ಪಿ.ಆರ್) ಏಜೆನ್ಸಿಯೊಂದರ ಮಾಜಿ ಉದ್ಯೋಗಿ ಎಂದು ಪರಿಚಯಿಸಿಕೊಂಡಿರುವ ಆ ವ್ಯಕ್ತಿ, ರೋಹಿಣಿ ಸಿಂಧೂರಿ ಮತ್ತು ಅವರ ಪತಿ ಬಾಡಿಗೆ ಟ್ರೋಲರ್ಗಳ ನೆರವು ಪಡೆದು ವಿರೋಧಿಗಳನ್ನು ಮಣಿಸುತ್ತಾರೆ ಎಂದು ಹೇಳಿರುವ ಸಂದೇಶವನ್ನು ರೂಪಾ ಬಹಿರಂಗಪಡಿಸಿದ್ದಾರೆ.
‘ನಾನು ಒಂದು ಪಿ.ಆರ್ ಏಜೆನ್ಸಿಯಲ್ಲಿ ಹಿಂದೆ ಉದ್ಯೋಗಿಯಾಗಿದ್ದೆ. ಸಿಂಧೂರಿ ಅವರ ಪತಿ ಒಂದು ವರ್ಷದಿಂದ ಆ ಏಜೆನ್ಸಿಯ ಸೇವೆ ಪಡೆಯುತ್ತಿದ್ದಾರೆ. ತಮ್ಮ ವಿರೋಧಿಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಲು ಬಳಸಿಕೊಳ್ಳುತ್ತಿದ್ದಾರೆ.ರೋಹಿಣಿ ಅವರ ವಿರುದ್ಧ ಮಾತನಾಡುವವರ ವಿರುದ್ಧ ಕೆಟ್ಟದಾಗಿ ದಾಳಿ ಮಾಡಿಸುತ್ತಿದ್ದಾರೆ. ನೀವು ಅವರ ತಂಟೆಗೆ ಹೋಗ
ಬೇಡಿ. ಸುಮ್ಮನಿದ್ದುಬಿಡಿ ಮೇಡಂ’ ಎಂದು ಆ ವ್ಯಕ್ತಿ ಸಲಹೆ ನೀಡಿರುವುದನ್ನು ರೂಪಾ ಫೇಸ್ಬುಕ್ನಲ್ಲಿ ಪ್ರಕಟಿಸಿದ್ದಾರೆ.
ತಮ್ಮ ಸಂಬಂಧಿಯೊಬ್ಬರಿಗೆ ಕೋವಿಡ್ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಲು ನೆರವು ಕೋರಿದ್ದು, ರೂಪಾ ಅವರು ಆಸ್ಪತ್ರೆಯ ಹಾಸಿಗೆ ಪಡೆಯಲು ನೆರವಾಗಿದ್ದನ್ನು ಪ್ರಸ್ತಾಪಿಸಿ ಪರಿಚಯಿಸಿಕೊಂಡಿರುವ ವ್ಯಕ್ತಿ, ‘ರೋಹಿಣಿ ಅವರನ್ನು ಟೀಕಿಸುವವರ ವಿರುದ್ಧ ದಾಖಲಾಗುವ ಪ್ರತಿಕ್ರಿಯೆಗಳು ಬಾಡಿಗೆ ಟ್ರೋಲರ್ಗಳಿಂದ ಬರುತ್ತಿವೆ. ನಾನು ಕೂಡ ಆ ಸಂಸ್ಥೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದೇನೆ. ಈಗಲೂ ಆ ರೀತಿ ಬಳಕೆಯಾಗುತ್ತಿರುವುದನ್ನು ಅಲ್ಲಿರುವ ನನ್ನ ಸ್ನೇಹಿತರು ತಿಳಿಸಿದ್ದಾರೆ’ ಎಂದು ಹೇಳಿದ್ದಾರೆ.
‘ಬಾಡಿಗೆ ಟ್ರೋಲರ್ಗಳು ಒಬ್ಬ ಅಧಿಕಾರಿಯ ಪರ ಕೆಲಸ ಮಾಡುತ್ತಾ, ಮತ್ತೊಬ್ಬ ಅಧಿಕಾರಿಯ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದು ಹೊಸ ಸಾಮಾನ್ಯ ಸ್ಥಿತಿ? ಆದರೆ, ಆ ಬಾಡಿಗೆ ಟ್ರೋಲರ್ಗಳಿಗೆ ಗೊತ್ತೊಲ್ಲವೇ ನಾಯಿ ಬೊಗಳಿದರೆ ಅಂಬಾರಿ ಹೋಗೋದು ನಿಲ್ಲಲ್ಲ ಎಂದು. ಈ ವ್ಯಕ್ತಿ ಹೇಳಿದ ವಿಷಯ ಸತ್ಯವೇ, ತನಿಖೆ ಆಗಲಿ’ ಎಂದು ರೂಪಾ ಒತ್ತಾಯಿಸಿದ್ದಾರೆ.
ಜೂನ್ 25ರ ತಡರಾತ್ರಿ 2.42ರಿಂದ 3.27ರವರೆಗೆ ವಾಟ್ಸ್ ಆ್ಯಪ್ನಲ್ಲಿ ಈ ಚರ್ಚೆ ನಡೆದಿದೆ. ಸಂಭಾಷಣೆಯ ಮಧ್ಯದಲ್ಲಿ ರೂಪಾ ಅವರು ‘ಸತ್ಯ ಹೇಳೋಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕು’ ಎಂದು ಹೇಳಿದ್ದಾರೆ. ಆಗ ಆ ಕಡೆ ಇದ್ದ ವ್ಯಕ್ತಿ ಕನ್ನಡ ಭಾಷೆ ತಿಳಿದಿಲ್ಲ ಎಂದು ಹೇಳಿದ್ದಲ್ಲದೇ, ‘ನಾನು ಕೂಡ ಆಂಧ್ರಪ್ರದೇಶದವ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ಬಾಡಿಗೆ ಟ್ರೋಲರ್ಗಳಿಗೆ ನೀಡುತ್ತಿರುವ ಹಣದ ಬಗ್ಗೆ ಮಾಹಿತಿ ನೀಡುವಂತೆ ರೂಪಾ ಕೇಳಿದ್ದಾರೆ. ‘ಆ ವಿಷಯ ಗೊತ್ತಿಲ್ಲ, ರೋಹಿಣಿ ಅವರ ಗಂಡ ಒಂದು ವರ್ಷದಿಂದಲೂ ಪಿ.ಆರ್ ಏಜೆನ್ಸಿಯ ಸೇವೆ ಪಡೆಯುತ್ತಿದ್ದಾರೆ’ ಎಂದು ಆ ವ್ಯಕ್ತಿ ಉತ್ತರಿಸಿದ್ದಾರೆ.
ಇದೀಗ ನಾವು ಇಡೀ ಅಧಿಕಾರಿ ವರ್ಗವನ್ನು ಅನುಮಾನದಿಂದ ನೋಡುವ ಪ್ರಸಂಗ ಬಂದಿದೆ. ಯಾರಿಗೆ ಗೊತ್ತು, ನಾವು ಇಷ್ಟು ದಿನ ಆರಾಧಿಸಿಕೊಂಡು ಬಂದ ಇಂತಹಾ ಎಷ್ಟೋ ಅಧಿಕಾರಿಗಳು ಈ ಥರ ಬಾಡಿಗೆ ವ್ಯಕ್ತಿಗಳಿಂದ ತಮ್ಮನ್ನು ತಾವು ಪ್ರಮೋಟ್ ಮಾಡುತ್ತಾ, ಎದುರಿನವರನ್ನು ಹಣಿಯುತ್ತಾ ಸೋಶಿಯಲ್ ಮೀಡಿಯಾದಲ್ಲಿ ಬೆಳೆದು ಬಂದಿರಬಹುದು !!