ಪುತ್ತೂರು: ಮಗಳಿಗೆ ಶಿಕ್ಷಣ ನೀಡಲು ಪರದಾಡುತ್ತಿರುವ ಬಡ ವಿಧವೆ…ಮುರುಕಲು ಮನೆಯಿಂದ ಪ್ರಾಣ ಭೀತಿ,ಸದ್ಯ ತವರು ಮನೆಯೇ ಆಕೆಗಾಸರೆ!
ಮಹಾಮಾರಿ ಕೊರೋನ ಪ್ರಕರಣ ತನ್ನ ಇರುವಿಕೆಯನ್ನು ದೊಡ್ಡ ಮಟ್ಟದಲ್ಲಿ ಪ್ರದರ್ಶಿಸಿ, ರಾಜ್ಯವನ್ನೇ ಲಾಕ್ ಡೌನ್ ಗೆ ತಳ್ಳಿ ಸದ್ಯ ಕೊಂಚ ಸಡಿಲವಾಗಿದೆ. ಈ ನಡುವೆ ಅನ್ ಲಾಕ್ ಆಗಿ ಇನ್ನೇನು ಶಾಲಾ ಕಾಲೇಜುಗಳು ಮರಳಿ ಶುರುವಾಗುವ ದಿನ ಹತ್ತಿರವಾಗುತ್ತಿದೆ.
ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀರ್ನಹಿತ್ಲು ನಿವಾಸಿ ಸುಂದರಿ ಎನ್ನುವ ಮಹಿಳೆಯೊಬ್ಬರು ತನ್ನ ಮಗಳನ್ನು ಶಾಲೆಗೆ ಸೇರಿಸಿ ಪ್ರತಿದಿನ ಆಕೆಯನ್ನು ಶಾಲೆಗೆ ಕರೆದುಕೊಂಡು ಹೋಗುವಲ್ಲಿ ತೊಂದರೆಗೆ ಸಿಲುಕಿದ್ದಾರೆ.ಒಂದು ಕಡೆ ಇನ್ನೇನು ಮುರಿದು ಬೀಳುವ ಸ್ಥಿಯಲ್ಲಿರುವ ಮನೆ,ಅನಾರೋಗ್ಯದಿಂದ ಬಳಳುತ್ತಿರುವ ಮಗಳು,ಮತ್ತೊಂದು ಕಡೆಯಲ್ಲಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಮೈದುನ. ಸದ್ಯ ಆಕೆ ತನ್ನ ತವರು ಮನೆಯಲ್ಲಿದ್ದು ಅಲ್ಲಿಂದ ದಿನಾ ಮಗಳನ್ನು ಶಾಲೆಗೆ ಬಿಡಲು ಆಟೋ ಖರ್ಚು ಸುಮಾರು ಮುನ್ನೂರು ತಗುಲುತ್ತದೆ.ಕೂಲಿ ಮಾಡಿ ಮಗಳನ್ನು ಶಾಲೆಗೆ ಕಳುಹಿಸುವುದರ ಜೊತೆಗೆ ಮನೆಯನ್ನೂ ನಿಭಾಯಿಸಬೇಕಾದ ವಿಧವೆಯ ನೋವಿದು.
ಮಹಿಳೆಯ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದು,ತನ್ನ ಹತ್ತು ವರ್ಷದ ಮಗಳು ಹಾಗೂ ಮೈದುನನೊಂದಿಗೆ ಮುರುಕಲು ಮನೆಯಲ್ಲೇ ವಾಸವಿದ್ದರು. ಆದರೆ ಕಳೆದ ಬಾರಿಯಿಂದ ಮನೆಯ ಗೋಡೆಗಳು ಬಿರುಕು ಬಿಡಲಾರಾಂಭಿಸಿದ್ದುದರಿಂದ ತನ್ನ ಮಗಳೊಂದಿಗೆ ತವರು ಮನೆ ಸೇರಿದ್ದಾರೆ.
ಪಂಚಾಯತ್ ವತಿಯಿಂದ ಆಕೆಯ ಮನೆ ಭೇಟಿ ಕಾರ್ಯ ನಡೆದಿದ್ದು ಮನೆ ಸಂಪೂರ್ಣ ಕುಸಿದು ಬೀಳುವ ಹಂತ ತಲುಪಿದ್ದರಿಂದ ರಿಪೇರಿ ಮಾಡಲು ಯೋಗ್ಯವಲ್ಲವಾಗಿದೆ. ಬಸವ ಕಲ್ಯಾಣ ಯೋಜನೆಯ ಮೂಲಕ ಮನೆ ಒದಗಿಸುವಲ್ಲಿ ಪ್ರಯತ್ನಿಸಿದರೂ, ಕೆಲ ತಾಂತ್ರಿಕ ದೋಷಗಳಿಂದ ಸಾಧ್ಯವಾಗುತ್ತಿಲ್ಲ ಎಂಬುವುದು ತಿಳಿದು ಬಂದಿದ್ದು,ಸರ್ಕಾರ ತಾಂತ್ರಿಕ ದೋಷಗಳನ್ನು ಪರಿಹರಿಸಿದ ಕೂಡಲೇ ಮನೆ ನೀಡುವಲ್ಲಿ ಪ್ರಯತ್ನಿಸಲಿದ್ದೇವೆ ಎನ್ನುತ್ತಿದೆ ಪಂಚಾಯತ್ ಆಡಳಿತ.
ಬಡ ಮಹಿಳೆ ತಾನು ವಿದ್ಯಾಭ್ಯಾಸದಿಂದ ವಂಚಿತಳಾದರೂ ತನ್ನ ಮಗಳು ಎರಡಕ್ಷರ ಕಲಿಯಬೇಕೆಂಬ ಹಂಬಲದಿಂದ ಪ್ರತಿದಿನ ಕಷ್ಟದೊಂದಿಗೆ ಸೆಣಸಾಡುತ್ತಾಲೇ ಬರುತ್ತಿದ್ದಾರೆ. ಆಪಸ್ಮಾರ ಖಾಯಿಲೆಯಿಂದ ಬಳಳುತ್ತಿರುವ ಮಗಳನ್ನು ಪ್ರತಿದಿನ ಮನೆಯಿಂದ ಶಾಲೆಗೆ ಕರೆತರಲು ಅತ್ಯಂತ ಕಷ್ಟಪಡುತ್ತಿದ್ದಾರೆ.ಕೊರೊನ ಕಷ್ಟಕಾಲದಲ್ಲಿ ನೆರವು ನೀಡಿ ಜನರ ಕೈಹಿಡಿದ ಸರ್ಕಾರ ಹಾಗೂ ಸಂಘ ಸಂಸ್ಥೆಗಳ ನೆರವು ಈ ಮಹಿಳೆಗೆ ಸದ್ಯ ಅಗತ್ಯವಾಗಿದೆ.