ಭದ್ರತಾ ಸಿಬ್ಬಂದಿಗಳ ಕಣ್ಣಿಗೆ ಖಾರದಪುಡಿ ಎರಚಿ ಜೈಲಿಂದ ಏಳು ಮಂದಿ ಖೈದಿಗಳು ಪರಾರಿ

ಜೈಲಿನಲ್ಲಿದ್ದ ಏಳು ಮಂದಿ ವಿಚಾರಣಾಧೀನ ಖೈದಿಗಳು ಭದ್ರತಾ ಸಿಬ್ಬಂದಿಗಳ ಕಣ್ಣಿಗೆ ಖಾರದ ಪುಡಿ ಎರಚಿ ಜೈಲಿನಿಂದ ಎಸ್ಕೇಪ್ ಆದ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದೆ.

 

ಅಭಿಜಿತ್ ಗೊಗೋಯ್, ತಾರೋ ಹಮಾಮ್, ಕಲಾಂ ಅಪಂಗ್, ತಾಲುಮ್ ಪನೀಯಿಂಗ್, ಸುಭಾಷ್ ಮಂಡೇ ರಾಜಾ ತಾಯೆಂಗ್ ಮತ್ತು ದನಿ ಗಝಿನ್ ಜೈಲಿನಿಂದ ಪರಾರಿಯಾಗಿರುವ ಖೈದಿಗಳು.

ಪೂರ್ವ ಸಿಯಾಂಗ್ ಜಿಲ್ಲೆಯ ಪಾಸಿಘಾಟ್ ಜೈಲಿನ ಐವರು ಗಾರ್ಡ್‌ಗಳ ಮೇಲೆ ಖಾರದ ಪುಡಿ ಎರಚಿ ಖೈದಿಗಳು ಪರಾರಿಯಾಗಿದ್ದಾರೆ. ಖೈದಿಗಳಿಗೆ ರಾತ್ರಿಯ ಊಟ ನೀಡಲೆಂದು ಜೈಲಿನ ಲಾಕಪ್ ತೆರೆದ ವೇಳೆ ಈ ಘಟನೆ ಸಂಭವಿಸಿದೆ.

ರಾತ್ರಿ 7.30ರ ವೇಳೆಗೆ ಊಟ ನೀಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ದಾಳಿ ನಡೆದ ವೇಳೆ 10 ಮಂದಿ ಸೆಕ್ಯುರಿಟಿ ಗಾರ್ಡ್ ಗಳು ಕಾರ್ಯ ನಿರ್ವಹಿಸುತ್ತಿದ್ದರು. ಜೈಲಿನಲ್ಲಿ ಒಟ್ಟು 94 ಖೈದಿಗಳಿದ್ದರು. ಖೈದಿಗಳಿಗೆ ಖಾರದಪುಡಿ ಎಲ್ಲಿಂದ ಪೂರೈಕೆಯಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಹಾಗಾಗಿ ಇದಕ್ಕೆ ಯಾರಾದರೂ ಜೈಲಿನ ಸಿಬ್ಬಂದಿಗಳು ಸಹಕಾರ ನೀಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ಏಳು ಖೈದಿಗಳ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದ್ದು, ಅವರ ಪತ್ತೆಗಾಗಿ ಬಲೆ ಬೀಸಲಾಗಿದೆ.

ಪರಾರಿಯಾಗಿರುವ ಖೈದಿಗಳ ಮಾಹಿತಿಯನ್ನು ಎಲ್ಲ ಪೊಲೀಸ್ ಠಾಣೆಗಳಿಗೂ ಕಳುಹಿಸಲಾಗಿದ್ದು, ಪೊಲೀಸರು ಈಗಾಗಲೇ ಅವರನ್ನು ಹುಡುಕಲು ಶುರುಮಾಡಿದ್ದಾರೆ.

Leave A Reply

Your email address will not be published.