ಹಿಮಾಚಲ ಪ್ರದೇಶದಲ್ಲಿ ಮೇಘ ಸ್ಫೋಟ; ಧರ್ಮಶಾಲಾದಲ್ಲಿ ಭೀಕರ ಪ್ರವಾಹ, ಕುಸಿದ ಕಟ್ಟಡ, ಕೊಚ್ಚಿ ಹೋದ ಕಾರುಗಳು
ಧರ್ಮಶಾಲಾ: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಪರಿಣಾಮ ಉಂಟಾದ ಭಾರಿ ಮಳೆಯಿಂದಾಗಿ ಧರ್ಮಶಾಲಾದಲ್ಲಿ ಭೀಕರ ಪ್ರವಾಹ ಏರ್ಪಟ್ಟಿದೆ.
ಉತ್ತರ ಭಾರತದಲ್ಲಿ ಮತ್ತೆ ಪ್ರವಾಹ ಉಂಟಾಗಿದ್ದು, ಅನೇಕ ಜಿಲ್ಲೆಗಳು ಸಂಪೂರ್ಣ ನೀರಿನಿಂದ ಆವೃತವಾಗಿವೆ. ಭಾರತದ ಪ್ರಮುಖ ಪ್ರವಾಸಿ ರಾಜ್ಯವಾದ ಹಿಮಾಚಲಪ್ರದೇಶದಲ್ಲಿ ಕಳೆದೊಂದು ವಾರದಿಂದ ಭಾರೀ ಮಳೆಯಾಗುತ್ತಿದೆ. ದೇಶದಲ್ಲಿ ಲಾಕ್ ಡೌನ್ ನಿರ್ಬಂಧ ಸಡಿಲಿಕೆ ಬಳಿಕ ಹಿಮಾಚಲ ಪ್ರದೇಶಕ್ಕೆ ವ್ಯಾಪಕ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಇದೀಗ ಸಂಭವಿಸಿರುವ ಮೇಘಸ್ಫೋಟದಿಂದಾಗಿ ಧರ್ಮಶಾಲಾದಲ್ಲಿ ಭೀಕರ ಪ್ರವಾಹ ಸಂಭವಿಸಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಹಠಾತ್ ಪ್ರವಾಹದಿಂದಾಗಿ ರಸ್ತೆಯಲ್ಲಿದ್ದ ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಕೆಲ ಕಟ್ಟಡಗಳು ಕುಸಿದಿದೆ. ಈ ಕುರಿತ ಭಯಾನಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿವೆ.
ಸೋಮವಾರ ಬೆಳಿಗ್ಗೆ ಹಿಮಾಚಲದ ಧರ್ಮಶಾಲಾದ ಪ್ರವಾಸಿ ಪ್ರದೇಶ ಭಗ್ಸುವಿನಲ್ಲಿ ಹಠಾತ್ ಪ್ರವಾಹ ಸಂಭವಿಸಿದ್ದು, ಇಲ್ಲಿನ ಹೊಟೆಲ್ ಗಳ ಅವರಣದಲ್ಲಿ ನಿಲ್ಲಿಸಲಾಗಿದ್ದ ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಪ್ರಸ್ತುತ ಧರ್ಮಶಾಲಾಗೆ ಸಂಪರ್ಕಿಸುವ ರಸ್ತೆಗಳನ್ನು ಮುಂಜಾಗ್ರತಾ ಕ್ರಮವಾಗಿ ಮುಚ್ಚಲಾಗಿದೆ. ಧರ್ಮಶಾಲಾದಲ್ಲಿ, ಮಂಜಿ ನದಿಯಲ್ಲಿ ಪ್ರವಾಹದಿಂದಾಗಿ ಸುಮಾರು 10 ಅಂಗಡಿಗಳು ನಾಶವಾಗಿವೆ. ಅಲ್ಲಿನ ಬದ್ರಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ 10 ಅಂಗಡಿಗಳು ಮತ್ತು 4-5 ಮನೆಗಳು ನದಿಯಲ್ಲಿ ಕೊಚ್ಚಿ ಹೋಗಿವೆ. ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗಿದೆ.
ಕಳೆದೊಂದು ವಾರದಿಂದ ಹಿಮಾಚಲ ಪ್ರದೇಶಕ್ಕೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಹೆಚ್ಚುತ್ತಿರುವ ಪ್ರವಾಸಿಗರನ್ನು ನಿಯಂತ್ರಿಸಲು ಸ್ಥಳೀಯ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪ್ರವಾಸಿಗರ ಹೆಚ್ಚಳದಿಂದಾಗಿ ಧರ್ಮಶಾಲಾದಲ್ಲಿ ಪಾರ್ಕಿಂಗ್ ಕೂಡ ಒಂದು ಸಮಸ್ಯೆಯಾಗಿದೆ. ಇದರ ನಡುವೆಯೇ ದಿಢೀರ್ ಪ್ರವಾಹ ಪ್ರವಾಸಿಗರಿಗೆ ಬಿಗ್ ಶಾಕ್ ನೀಡಿದೆ.