ಕರಾವಳಿಯ ಊಟದ ತಟ್ಟೆಗಳಲ್ಲಿ ಮತ್ಸ್ಯಕ್ಷಾಮ | ಅಗ್ಗದ ಬೆಲೆಯ ಬೂತಾಯಿ, ಬಂಗುಡೆಗೆ ಕಾಯುತ್ತಿದೆ ಜನಸಮೂಹ
ಕರಾವಳಿಯಲ್ಲಿ ಬಹುತೇಕ ಜನರಿಗೆ ಊಟಕ್ಕೆ ಮೀನು ಸಾರು ಇಲ್ಲದೆ ಹೋದರೆ ಊಟ ಸೇರದು. ಕೊನೆಗೆ ಒಂದು ತುಂಡು ಒಣ ಮೀನನ್ನಾದರೂ ಬಾಳೆ ಎಲೆಯ ಮೂಲೆಯಲ್ಲಿ ತೋರಿಸದೆ ಹೋದರೆ ಅದ್ಯಾಕೋ ಬಾಯಿಗೆ ಹಾಕಿಕೊಂಡ ತುತ್ತು ಗಂಟಲಲ್ಲಿ ಕೆಳಕ್ಕಿಳಿಯಲು ಹಟ ಮಾಡುತ್ತದೆ. ಅಂತಹಾ ಮೀನು ಪ್ರಿಯರು ಇದೀಗ ಸರಿಯಾಗಿ ಊಟ ಸೇರಲೊಳ್ಳದೆ ಕೃಷರಾಗುತ್ತಿದ್ದಾರೆ. ಕಾರಣ ಆಕಾಶಕ್ಕೆ ಏರಿ ಕೂತ ಮೀನಿನ ಬೆಲೆ !
ಈಗ ಮೀನುಗಾರಿಕೆಗೆ ನಿಷೇಧ ಹೇರಿರುವುದರಿಂದ ಮೀನಿನ ದರ ಹೆಚ್ಚಳವಾಗಿದೆ. ಸಿಕ್ಕಿದ ಮೀನೂ ತನ್ನ ತಾಜಾತನವನ್ನು ಕಳೆದುಕೊಂಡಿದೆ. ಈಗ ನಾಡ ದೋಣಿ ಮೀನುಗಾರಿಕೆಗೆ ಹವಾಮಾನ ಸಮಸ್ಯೆಯ ಪರಿಣಾಮ, ಸರಕಾರದ ಗ್ರೀನ್ ಸಿಗ್ನಲ್ ಇಲ್ಲದ ಕಾರಣ ಯಾವುದೇ ದೋಣಿಗಳು ಸಮುದ್ರಕ್ಕಿಳಿಯುತ್ತಿಲ್ಲ. ಆ ಕಾರಣದಿಂದ ಮೀನಿನ ಬೆಲೆ ಏರಿರುವುದು.
ಕರಾವಳಿಯಲ್ಲಿ ದಿನಂಪ್ರತಿ ಮೀನುಗಾರಿಕೆ ನಡೆಯುತ್ತಿರುವಾಗ, ಕರಾವಳಿ ಅವರ ಅತ್ಯಂತ ಫೇವರಿಟ್ ಮೀನುಗಳಾದ ಬೂತಾಯಿಗೆ ಕೆಜಿಗೆ 100-120 ರೂ., ಬಂಗುಡೆಗೆ 150-170 ರೂ., ಅಂಜಲ್ ಗೆ 400-500 ರೂ. ಮತ್ತು ಸಿಗಡಿಗೆ 200 ರೂ. ದರದಲ್ಲಿ ಮಾರಾಟವಾಗುತ್ತಿತ್ತು. ಆದರೆ ಈಗ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೂತಾಯಿ ಕೆ.ಜಿ.ಗೆ 200 ರೂ., ಬಂಗುಡೆ 300 ರೂ., ಅಂಜಲ್ 900 ರೂ., ಸಿಗಡಿಗೆ 300 ರೂಪಾಯಿಗಳ ಬೆಲೆ ಏರಿ ಮೀನನ್ನು ಮುಟ್ಟಲೂ ಹಿಂದೆ ಮುಂದೆ ನೋಡಬೇಕಾದ ಪ್ರಸಂಗ ಬಂದಿದೆ.
ಈಗ ಮಾರುಕಟ್ಟೆಯಲ್ಲಿ ತಾಜಾ ಮೀನು ಸಿಗುತ್ತಿಲ್ಲವಾದ ಕಾರಣ ತಮಿಳುನಾಡು, ಆಂಧ್ರಪ್ರದೇಶ, ಕೇರಳದಿಂದ ಮೀನುಗಳು ಇಲ್ಲಿಗೆ ಬರುವುದರಿಂದ ಒಂದೆರಡು ದಿನಗಳ, ಬರ್ಫ್ ಹಾಕಿಟ್ಟ ಹಳೇ ಮೀನುಗಳು ಮಾತ್ರ ಲಭ್ಯ ಆಗುತ್ತಿರುವುದು. ಇದೀಗ ಹೋಟೆಲ್ಗಳಲ್ಲೂ ದರ ಗಗನಕ್ಕೇರಿದೆ. ಒಂದು ಬಂಗುಡೆ ಫ್ರೈಗೆ 150 ರೂ., ಅಂಜಲ್ ತುಂಡಿಗೆ 400 ರೂ. ಬೂತಾಯಿಗೆ 50 ರೂ.ಇದೆ.
ನಮ್ಮ ಕಡಲ ವೀರರು ಸಮುದ್ರಕ್ಕೆ ತಮ್ಮ ನಾಡ ದೋಣಿ ದೂಡಿ, ಹತ್ತಿ ಕುಳಿತರೆಂದರೆ ಮರುದಿನ ಕರಾವಳಿಯಲ್ಲಿ ಅಗ್ಗದ ಮೀನ ಹಬ್ಬ. ಬರಿಕೈಯಲ್ಲಿ ವಾಪಸ್ಸು ಬಾರದ ಭುಜಬಲ, ಮತ್ತು ಎಲ್ಲಿ ಯಾವ ಮೀನು ಸಿಗುತ್ತೆ ಎಂಬ ಅನುಭವ ಇರುವ ಕಾರಣ, ಮೀನು ತುಂಬದೆ ದಡದತ್ತ ಅವರು ದೋಣಿ ತಿರುಗಿಸುವುದಿಲ್ಲ. ಆದರೆ ಕೆಲ ದಿನಗಳಿಂದ ಕರಾವಳಿಯಲ್ಲಿ ಸಮುದ್ರ ಅಡ್ಡಾದಿಡ್ಡಿ ಕುಲುಕಿ ಸಮುದ್ರ ಪ್ರಕ್ಷುಬ್ಧವಾಗಿದೆ. ಕಡಲಿಗೆ ಇಳಿಯದಂತೆ ಜಿಲ್ಲಾಡಳಿತದಿಂದ ಸೂಚನೆ ಇರುವುದರಿಂದ ಆರ್ಥಿಕ ಹೊಡೆತ ಬಿದ್ದಿದೆ.
ಸದ್ಯದ ಆದೇಶದ ಪ್ರಕಾರ ಆಗಸ್ಟ್ 1ರಿಂದ ಆಳ ಸಮುದ್ರ ಮೀನುಗಾರಿಕೆ ನಡೆಸಬಹುದು. ಆದರೆ ಬಹುತೇಕ ಮೀನುಗಾರರು ಸಮುದ್ರ ಪೂಜೆ ಬಳಿಕ ಅಂದರೆ, ಆ.15ರ ಬಳಿಕವೇ ಸಮುದ್ರಕ್ಕಿಳಿಯುತ್ತಾರೆ. ಅಷ್ಟರಲ್ಲಿ ದೋಣಿಗಳ ದುರಸ್ತಿ, ಬಲೆ ತಯಾರಿ ಇತ್ಯಾದಿ ಕಾರ್ಯಗಳಲ್ಲಿ ಕಡಲ ವೀರರು ತೊಡಗಿಕೊಂಡಿದ್ದಾರೆ. ಅಗ್ಗದ ಮೀನು ಕೊಂಡು ತಮ್ಮ ಇಷ್ಟದ ಥರಾವರಿ ಫಿಶ್ ಫ್ರೈ ಕರಿದು ಸವಿಯಲು ಕರಾವಳಿಗರು ಕಾಯುತ್ತಿದ್ದಾರೆ.