ಕಾರ್ಕಳ : ಸೈನಿಕರಿಗೆ ಅವಮಾನಿಸಿ ಫೇಸ್ ಬುಕ್ ಪೋಸ್ಟ್ ಆರೋಪಿ ಕಾಂಗ್ರೆಸ್ ಕಾರ್ಯಕರ್ತನ ಬಂಧನ
ಕಾರ್ಕಳ : ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಫೇಸ್ ಬುಕ್ ಖಾತೆಯಲ್ಲಿ ಭಾರತೀಯ ಸೈನಿಕರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಕಾರ್ಕಳ ಹಿರ್ಗಾನ ಗ್ರಾಮದ ರಾಧಾಕೃಷ್ಣ ನಾಯಕ್ ಎಂಬವನ ಮೇಲೆ ಹಿಂದೂ ಸಂಘಟನೆ ಕಾರ್ಯಕರ್ತರು ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ಸಲುವಾಗಿ ರಾಧಾಕೃಷ್ಣ ನಾಯಕ್ ಎಂಬವನನ್ನು ಪೊಲೀಸರು ಠಾಣೆಗೆ ಹಾಜರಾಗುವಂತೆ ತಿಳಿಸಿದ್ದು, ಅದರಂತೆ ಜು. 8ರಂದು ಕಾರ್ಕಳ ನಗರ ಪೊಲೀಸ್ ಠಾಣೆಗೆ ಹಾಜರಾಗಿ, ವಿಚಾರಣೆ ನಡೆದಿತ್ತು.
ಅನಂತರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಮುಖರನ್ನು ಸಂಪರ್ಕಿಸಿ ಮಣಿಪಾಲ ಆಸ್ಪತೆಗೆ ರಾಧಾಕೃಷ್ಣ ದಾಖಲಾಗಿರುತ್ತಾನೆ. ಈ ಸಮಯ ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿರುತ್ತಾನೆ. ನಂತರದ ಬೆಳವಣಿಗೆಯಲ್ಲಿ ಅಮಾಯಕ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಕಾಂಗ್ರೆಸ್ ಮುಖಂಡರೋರ್ವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಯಿತು. ಬಳಿಕ ಹಿಂದೂ ಸಂಘಟನೆಯವರು, ಬಿಜೆಪಿ ಕಾರ್ಯಕರ್ತರೂ ಸಾಕಷ್ಟು ಪ್ರತಿಕ್ರಿಯಿಸಿರುತ್ತಾರೆ.
ಕಾಂಗ್ರೆಸ್ ಪತ್ರಿಕಾಗೋಷ್ಠಿ-ಪ್ರತಿಭಟನೆ
ಸ್ಥಳೀಯ ಬಿಜೆಪಿ ನಾಯಕರ ಕುಮ್ಮಕ್ಕಿನಿಂದ ಪೊಲೀಸರು ಅಮಾಯಕನ ಮೇಲೆ ಹಲ್ಲೆ ನಡೆಸಿರುತ್ತಾರೆ ಎಂದು ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯೋಗಿಶ್ ಇನ್ನಾ ಅವರು ಜು. 9ರಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿರುತ್ತಾರೆ. ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಅವರು ಪೊಲೀಸರು ಬಿಜೆಪಿಯ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಶಾಸಕರು ಸೇರಿದಂತೆ ಬಿಜೆಪಿ ಪ್ರಮುಖರು ಪತ್ರಿಕಾ ಹೇಳಿಕೆ ಮೂಲಕ ಕಾಂಗ್ರೆಸ್ ಪಕ್ಷದ ನಡವಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುತ್ತಾರೆ. ಜು. 10ರಂದು ಕಾಂಗ್ರೆಸ್ ವತಿಯಿಂದ ಪೊಲೀಸರ ವಿರುದ್ಧ ಬಂಡಿಮಠದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ತಿಳಿದುಬಂದಿದೆ.
ಟ್ವೀಟ್ ಸಮರ
ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡನೀಯ. ಇವರ ಅನಾರೋಗ್ಯವನ್ನೂ ಲೆಕ್ಕಿಸದೇ ಹಳೆ ಸುಳ್ಳು ಕೇಸ್ ಆಧರಿಸಿ, ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಈ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸಿ ನೊಂದ ಯುವಕನಿಗೆ ನ್ಯಾಯ ಒದಗಿಸಬೇಕು ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತ ಜಾಲತಾಣದಲ್ಲಿ ಈ ಹಿಂದೆ ಯಾವ ಪೋಸ್ಟ್ ಹಾಕಿದ್ದಾನೆ ಎಂಬ ಅರಿವಿಲ್ಲದೇ ಸಿದ್ದರಾಮಯ್ಯ ಸಮರ್ಥಿಸಿರುವುದು ಅವರ ಬದ್ಧತೆಯನ್ನು ಪ್ರಶ್ನಿಸುತ್ತದೆ. ಅದು ದೇಶದ್ರೋಹದ ಕೆಲಸ. ಅದನ್ನು ಸಮರ್ಥಿಸುವ ಭರದಲ್ಲಿ ಸೈನಿಕರನ್ನು ಸಿದ್ದರಾಮಯ್ಯ ಅವಮಾನಿಸುತ್ತಿದ್ದಾರೆ. ದೇಶದ್ರೋಹಿ ವ್ಯಕ್ತಿಯನ್ನು ಬೆಂಬಲಿಸುವುದು ನಾಚಿಕೆಗೇಡಿನ ಸಂಗತಿ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಟ್ವೀಟ್ ಮಾಡಿ, ಸಿದ್ದರಾಮಯ್ಯ ಅವರಿಗೂ ಟ್ಯಾಗ್ ಮಾಡಿರುತ್ತಾರೆ. ವ್ಯಕ್ತಿಯೊಬ್ಬ ತನ್ನ ತೆವಲಿನಿಂದ ವಿನಾಕಾರಣ ಸೈನಿಕರನ್ನು ದೂಷಿಸುವ ಕೆಲಸವನ್ನು ಪಕ್ಷಗಳು ವಹಿಸಿಕೊಂಡು ಮಾತನಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ. ವ್ಯಕ್ತಿಗಳ ವೈಯಕ್ತಿಕ ಅಭಿಪ್ರಾಯಗಳಿಂದ ಎಲ್ಲಾ ಪಕ್ಷಗಳು ದೂರನಿಂತು ಸಮಾನ ಅಂತರ ಯಾಕೆ ಕಾಯ್ದು ಕೊಳ್ಳಬಾರದು ? ಇಲ್ಲದೆ ಹೋದರೆ ಆಯಾ ಪಕ್ಷಕ್ಕೆ ಇನ್ನಷ್ಟು ಹೊಡೆತ ಗ್ಯಾರಂಟಿ.