ರಾಜಧಾನಿ ಬೆಂಗಳೂರಿನಲ್ಲಿ 2 ಸಾವಿರ ಮನೆಗಳ ಮೇಲೆ ಪೊಲೀಸ್ ಧಿಡೀರ್ ದಾಳಿ | 1500 ರೌಡಿಗಳನ್ನು ವಶಕ್ಕೆ ಪಡೆದ ಖಾಕಿ ಪಡೆ
ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರು ಬೆಳ್ಳಂಬೆಳಗ್ಗೆ 2 ಸಾವಿರ ಮನೆಗಳ ಮೇಲೆ ದಾಳಿ ನಡೆಸಿದ್ದು, 1500 ರೌಡಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾನೂನು ಸುವ್ಯವಸ್ಥೆ ನಿಟ್ಟಿನಲ್ಲಿ ವಿಶೇಷ ಅಭಿಯಾನ ಅಂಗವಾಗಿ ಬೆಂಗಳೂರಿನ ಪೊಲೀಸರು ಈ ದಾಳಿ ಕೈಗೊಂಡಿದ್ದಾರೆ.
ರಾಜಧಾನಿಯ ಎಲ್ಲ ಡಿಸಿಪಿಗಳ ನೇತೃತ್ವದಲ್ಲಿ ಮಹಾನಗರದಾದ್ಯಂತ ಬೆಳಗಿನ ಜಾವವೇ ಈ ದಾಳಿ ನಡೆಸಿದ್ದು, ರೌಡಿ ಶೀಟರ್‌ಗಳಿಗೆ ಸಂಬಂಧಿಸಿದ 2000 ಮನೆಗಳ ಮೇಲೆ ಏಕಾಏಕಿ ದಾಳಿ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ 1,500 ರೌಡಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.
ಈ ವೇಳೆ ಕಂಡುಬಂದಿರುವ ಮಾರಕಾಸ್ತ್ರಗಳು, ಕಾನೂನುಬಾಹಿರವಾಗಿ ಇಟ್ಟುಕೊಂಡಿರುವ ಆಯುಧಗಳು, ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾತ್ರವಲ್ಲದೆ ಒಂದಷ್ಟು ಭೂಮಿಗೆ ಸಂಬಂಧಿಸಿದ ದಾಖಲೆಪತ್ರಗಳು, ಮೊಬೈಲ್‌ಫೋನ್, ಸಿಮ್ ಕಾರ್ಡ್ ಮಾತ್ರವಲ್ಲದೆ ಕೆಲವು ವಾಹನಗಳನ್ನೂ ಪರಿಶೀಲನೆಗಾಗಿ ವಶಕ್ಕೆ ಪಡೆಯಲಾಗಿದೆ.
ಇವೆಲ್ಲದರ ಸಂಬಂಧ ವಿಸ್ತೃತ ವಿಚಾರಣೆ ನಡೆಯಲಿದ್ದು, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು ಕಂಡುಬಂದಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ತಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ. ಮಾತ್ರವಲ್ಲದೆ, ಬೆಂಗಳೂರು ಪೊಲೀಸರ ವ್ಯವಸ್ಥಿತವಾದ ಈ ಮಹಾ ಕಾರ್ಯಾಚರಣೆಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.