ವಿಶ್ವದ ಅತಿ ದೊಡ್ಡ ಬಂದರಿನಲ್ಲಿ ಭಾರೀ ಪ್ರಮಾಣದ ಸ್ಫೋಟ
ದುಬೈ: ವಿಶ್ವದ ಅತಿ ದೊಡ್ಡ ಬಂದರು ಎನಿಸಿಕೊಂಡಿರುವ ದುಬೈನ ಜೆಬೆಲ್ ಅಲಿ ಬಂದರಿನಲ್ಲಿರುವ ಹಡಗಿನಲ್ಲಿ ಭಾರೀ ಸ್ಫೋಟ ಸಂಭವಿಸಿದ ಘಟನೆ ವರದಿಯಾಗಿದೆ.
ಅರೇಬಿಯನ್ ಪೆನಿನ್ಸುಲಾದ ಪೂರ್ವ ಭಾಗದಲ್ಲಿ ಮಧ್ಯಪ್ರಾಚ್ಯದಲ್ಲಿ ಈ ಘಟನೆ ಸಂಭವಿಸಿದ್ದು, ದುಬೈನ ಉತ್ತರ ತುದಿಯಲ್ಲಿರುವ ಜೆಬೆಲ್ ಅಲಿ ಬಂದರು ವಿಶ್ವದ ಅತಿದೊಡ್ಡ ಮಾನವ ನಿರ್ಮಿತ ಆಳ ನೀರಿನಲ್ಲಿನ ಬಂದರು ಎನಿಸಿಕೊಂಡಿದೆ.
ಜೆಬೆಲ್ ಅಲಿ ಬಂದರಿನಲ್ಲಿರುವ ಹಡಗಿನಲ್ಲಿ ಭಾರಿ ಸ್ಫೋಟ ನಡೆದಿದ್ದು, ಇದರಿಂದಾಗಿ ಸಮೀಪದ ಮನೆಗಳ ಬಾಗಿಲು ಹಾಗೂ ಕಿಟಕಿಗಳು ಒಡೆದಿರುವುದಾಗಿ ವರದಿಯಾಗಿದೆ. ಸ್ಫೋಟದಿಂದ ಬೆಂಕಿಯು ಆಗಸದತ್ತ ತನ್ನ ಕೆನ್ನಾಲಿಗೆಯನ್ನು ಚಾಚಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಬೆಂಕಿ ನಂದಿಸುವ ಕಾರ್ಯ ಭರದಿಂದ ಸಾಗಿದ್ದು, ಇದೀಗ ನಿಯಂತ್ರಣಕ್ಕೆ ತರಲಾಗಿದೆ. ಸದ್ಯ ಯಾವುದೇ ಜೀವ ಹಾನಿಯಾಗಿಲ್ಲ ಎಂದು ವರದಿಯಾಗಿದೆ. ಈ ಅನಾಹುತದಿಂದ ಬಂದರು ಮತ್ತು ಸುತ್ತಮುತ್ತಲಿನ ಸರಕುಗಳಿಗೆ ಎಷ್ಟು ಹಾನಿಯಾಗಿದೆ ಎಂದು ಇದುವರೆಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ.
ಈ ಬಂದರಿನಲ್ಲಿ ಭಾರತೀಯ ಉಪಖಂಡ, ಆಫ್ರಿಕಾ ಮತ್ತು ಏಷ್ಯಾದಿಂದ ಸರಕುಗಳು ಬರುತ್ತವೆ. ಈ ಅನಾಹುತದಿಂದ ಬಹಳ ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ.