ಸತತ 13 ವರ್ಷಗಳಿಂದ ಮಳೆಗೆ ಮೈ ಒಡ್ದುತ್ತಿರುವ ಕುಕ್ಕೆಯ ಸುಬ್ಬಪ್ಪ..ರಾಜ್ಯದ ಶ್ರೀಮಂತ ದೇವಾಲಯದ ದುರಾವಸ್ಥೆಗೆ ಹತ್ತೂರ ಭಕ್ತರ ಆಕ್ರೋಶ

ದಕ್ಷಿಣ ಭಾರತದ ಹೆಸರಾಂತ ಪವಿತ್ರ ನಾಗ ಕ್ಷೇತ್ರ, ಸರ್ಪ ಸಂಸ್ಕಾರಕ್ಕೆ ಹೆಸರುವಾಸಿಯಾಗಿರುವ, ರಾಜ್ಯದ ಶ್ರೀಮಂತ ದೇವಾಲಯಗಳಲ್ಲೊಂದಾದ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿಯು ಕನಸಾಗಿ ಉಳಿದಿದೆ.ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುವ ಸುಬ್ಬಪ್ಪ ಸತತ 13 ವರ್ಷಗಳಿಂದ ಮಳೆಗಾಲದಲ್ಲಿ, ಮಳೆಗೆ ಮೈ ಒಡುತ್ತಿರುವುದು ಭಕ್ತರ ನೋವಿಗೆ ಕಾರಣವಾಗಿದೆ.


ಹೌದು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹೊರ ಪ್ರಾಂಗಣದ ಸುತ್ತು ಪೌಳಿ ಸತತ ಹದಿಮೂರು ವರ್ಷಗಳಿಂದ ಶಿಥಿಲಗೊಂಡಿದ್ದು, ಭಕ್ತರನ್ನು ಕಾಯುವ ಸ್ವಾಮಿಯೇ ಮಳೆಗೆ ಮೈ ಒಡ್ದುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.ಅಭಿವೃದ್ಧಿಯ ಕನಸು ಕಾಣುವ ಕುಕ್ಕೆ ದೇಗುಲದ ಹೊರ ಪ್ರಾಂಗಣದ ಸುತ್ತು ಪೌಳಿಗೆ ಟಾರ್ಪಲು ಹೊದಿಸುವುದು ಮಾತ್ರ ಇಂದಿಗೂ ತಪ್ಪಲಿಲ್ಲ.


ಈ ಮೊದಲು ಕ್ಷೇತ್ರದಲ್ಲಿ ಆಡಳಿತದಲ್ಲಿದ್ದ ಎಲ್ಲಾ ವ್ಯವಸ್ಥಾಪನಾ ಸಮಿತಿಗಳೂ ಕೂಡಾ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಮುಜುರಾಯಿ ಇಲಾಖೆಗೆ ದುರಸ್ಥಿ ಕ್ರಿಯಾ ಯೋಜನೆ ಮಾಡಿ ಕಳುಹಿಸಿದೆ. ಈ ಮೊದಲು 7 ಕೋಟಿ ರೂಪಾಯಿ ಮೌಲ್ಯದ ಕ್ರಿಯಾ ಯೋಜನೆ ಮಾಡಿದರೂ, ಆನಂತರದ ಸಮಿತಿಗಳು 16 ಕೋಟಿಯ ವೆಚ್ಚದಲ್ಲಿ ಶಾಶ್ವತವಾದ ಪರಿಹಾರ ಮಾಡುವ ಕ್ರಿಯಾ ಯೋಜನೆ ರೂಪಿಸಿತ್ತು.ಕೇವಲ ಯೋಜನೆ ರೂಪಿಸಿದೇ ವಿನಃ ಆ ಬಳಿಕ ಮುಜುರಾಯಿ ಇಲಾಖೆಯು ಇತ್ತ ಗಮನ ಹರಿಸಿಲ್ಲ.


ರಾಜ್ಯದ ಶ್ರೀಮಂತ ದೇವಸ್ಥಾನದಲ್ಲೇ ಈ ರೀತಿಯ ದುರಾವಸ್ಥೆಗೆ ಕಾರಣವಾದ ವ್ಯವಸ್ಥೆಯ ವಿರುದ್ಧ ಭಕ್ತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಕೋಟ್ಯಂತರ ಭಕ್ತರ ಆರಾಧ್ಯಮೂರ್ತಿ ಕುಕ್ಕೆ ಸುಬ್ರಹ್ಮಣ್ಯನಿಗೆ ಮಳೆಯಲ್ಲಿ ನೆನೆಯಬೇಕಾದ ಸ್ಥಿತಿಬಂದಿದ್ದು, ತನ್ನನ್ನು ನಂಬಿ ಬಂದ ಭಕ್ತರ ಸಂಕಷ್ಟಗಳನ್ನು ದೂರಮಾಡುವ ಸುಬ್ರಹ್ಮಣ್ಯ ಮಳೆಯಲ್ಲೇ ನೆನಯಬೇಕಿದೆ.


ಈ ಹಿಂದೆ ಪ್ಲಾಸ್ಟಿಕ್ ಹೊದಿಕೆಯ ಬಗ್ಗೆ ಭಕ್ತರಿಂದ ಆಕ್ರೋಶ ಕೇಳಿಬಂದಾಗ ವೈದಿಕ ಚಿಂತನೆ ಮೂಲಕ ಸುತ್ತುಪೌಳಿ ತೆಗೆಯುವ ನಿರ್ಧಾರದ ಬಗ್ಗೆ ಚಿಂತಿಸೋದಾಗಿ ಇಲಾಖೆ ಹೇಳಿತ್ತು.
ಕಳೆದ 13 ವರ್ಷಗಳಿಂದ ಇದೇ ಮಾತು ಮುಂದುವರೆದಿದ್ದು, ಈವರೆಗೂ ಸುಬ್ರಹ್ಮಣ್ಯನಿಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಈ ಹಿನ್ನಲೆಯಲ್ಲಿ ಈ ಬಾರಿ ಮತ್ತೊಮ್ಮೆ ಕುಕ್ಕೆ ಹಿತರಕ್ಷಣಾ ಸಮಿತಿ‌ಯಿಂದ ಧಾರ್ಮಿಕ ದತ್ತಿ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದು, ಪರಿಹಾರ ದೊರೆಯುತ್ತದೆಯೇ ಎಂಬುವುದನ್ನು ಕಾದುನೋಡಬೇಕಾಗಿದೆ.


ರಾಜ್ಯದ ಬೊಕ್ಕಸಕ್ಕೆ ಪ್ರತಿವರ್ಷ ಭಾರೀ ಆದಾಯ ನೀಡುವ ಕುಕ್ಕೆ ದೇವಸ್ಥಾನಕ್ಕೆ ಸರ್ಕಾರದಿಂದ ವಿಶೇಷ ಅನುದಾನವೇನೂ ಬೇಕಾಗಿಲ್ಲ. ದೇವಸ್ಥಾನದ ಆದಾಯವನ್ನೇ ಬಳಸಿ ದುರಸ್ತಿ ಕಾರ್ಯ ಮಾಡಬಹುದಾಗಿದೆ. ಆದರೆ ಅದೂ ಸಾಧ್ಯವಾಗದಿರುವುದು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾನೋ ಅಥವಾ ಪರಿಹಾರ ಕಾಣುವ ಯೋಗ ಕುಕ್ಕೆಯ ಸ್ವಾಮಿಗಿಲ್ಲವೋ ಎಂಬುವುದು ಅನುಮಾನಕ್ಕೆ ಕಾರಣವಾಗಿದೆ.ಎಲ್ಲದಕ್ಕೂ ಕಾಲವೇ ಉತ್ತರಿಸಬೇಕಾಗಿದೆ.

Leave A Reply

Your email address will not be published.