ತುಳುನಾಡಿನ ಪತ್ರೊಡೆಗೆ ಸಿಕ್ಕಿದೆ ಆಯುಷ್ ಸಚಿವಾಲಯದ ಗ್ರೀನ್ ಸಿಗ್ನಲ್..ಆರೋಗ್ಯ ಪೂರ್ಣ ಆಹಾರ ಪಟ್ಟಿಯಲ್ಲಿ ಸದ್ದಿಲ್ಲದೇ ಸೇರಿಕೊಂಡಿದೆ ‘ಆಟಿ ಅಮಾಸೆಯ ಪತ್ರೊಡೆ’

ತುಳುನಾಡಿನಲ್ಲಿ ಆಟಿ(ಆಷಾಡ)ಮಾಸ ಬಂತೆಂದರೆ ಸಾಕು ಬಗೆ ಬಗೆಯ ತಿನಿಸುಗಳ ಘಮ ಎಲ್ಲಾ ಮನೆಗಳಲ್ಲೂ ಮಾಮೂಲು. ಆಟಿ ತಿಂಗಳಿನಲ್ಲಿ ಅತೀ ಮುಖ್ಯವಾದ, ಸಂಪ್ರದಾಯಿಕ ವಿಶೇಷ ದಿನವೆಂದರೆ ಆಟಿ ಅಮಾವಾಸ್ಯೆ.ಈ ದಿನದಂದು ಪ್ರತೀ ಮನೆಯಲ್ಲೂ ಪತ್ರೊಡೆ ಮಾಡುವುದು ರೂಢಿ. ಮರದ ಕೆಸುವಿನಲ್ಲಿ(ಮರ ಚೇವು) ಮಾಡುವ ಈ ತಿನಿಸಿಗೆ ಆಯುಷ್ ಸಚಿವಾಲಯದಿಂದ ಆರೋಗ್ಯ ಪೂರ್ಣ ಆಹಾರ ಪಟ್ಟಿಯಲ್ಲೂ ಸ್ಥಾನ ಸಿಕ್ಕಿದೆ.ಈ ಮೂಲಕ ತುಳುನಾಡಿನ, ತುಳುವರ ಆಹಾರ ಪದಾರ್ಥಗಳು ಆರೋಗ್ಯಕ್ಕೆ ಉತ್ತಮವಾದುದು ಎಂಬುವುದು ಸಾಬೀತಾಗಿದೆ.


ಆಯುಷ್ ಇಲಾಖೆ ಪ್ರಕಟಿಸಿದ 26 ಅರೋಗ್ಯಪೂರ್ಣ ಖಾದ್ಯಗಳ ಪೈಕಿ ಪತ್ರೊಡೆಗೆ ಸ್ಥಾನ ಸಿಕ್ಕಿರುವುದು ತುಳುವರ ಮನಸ್ಸಿನಲ್ಲಿ ಖುಷಿಯುಂಟು ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸಹಿತ ಉತ್ತರ ಕನ್ನಡ, ಶಿವಮೊಗ್ಗ, ಕೇರಳ ಗುಜರಾತ್ ಮುಂತಾದ ಕಡೆಗಳಲ್ಲೂ ತುಳುವರ ಪತ್ರೊಡೆ ಭಾರಿ ಖ್ಯಾತಿ ಪಡೆದಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಕಬ್ಬಿಣಾಂಶ ಹೆಚ್ಚಿರುವ ಕೆಸುವಿನ ಎಲೆಗಳು ಮನುಷ್ಯನ ದೇಹದಲ್ಲಿ ಹಿಮೋಗ್ಲೋಬಿನ್ ನ ಅಂಶವನ್ನು ಹೆಚ್ಚಿಸುತ್ತವೆ, ವಿಟಮಿನ್ ಸಿ ಹಾಗೂ ಬೀಟಾ ಕೇರೋಟಿನ್ ಕೂಡಾ ಇದರಲ್ಲಿದೆ ಎಂಬುವುದು ವೈದ್ಯಕೀಯ ವರದಿಯಾದರೂ, ತುಳುವರ ಪ್ರಕಾರ ಹೊಟ್ಟೆಯೊಳಗೆ ಸೇರಿಕೊಳ್ಳುವ ಕೂದಲು ಹಾಗೂ ಇನ್ನಿತರ ಅಂಶಗಳನ್ನು ಕೆಸುವಿನ ಎಲೆಯು ಹೊರಗೆ ಹಾಕುತ್ತವೆ ಎಂಬುವುದಾಗಿದೆ. ಇದೇ ಕಾರಣಕ್ಕಾಗಿ ಇಂದಿಗೂ ತುಳುನಾಡಿನಲ್ಲಿ ಪತ್ರೊಡೆಯು ಆಟಿ ಅಮಾವಾಸ್ಯೆ ಯಂದು ಮಾಡುತ್ತಾರೆ.


ಪತ್ರೊಡೆ ತಯಾರಿಸುವ ವಿಧಾನವನ್ನೊಮ್ಮೆ ಕಲಿಯೋಣವೇ?: –

ಮೊದಲಿಗೆ ಒಂದು ಪಾತ್ರೆಯಲ್ಲಿ ಅಕ್ಕಿ, ಉದ್ದಿನ ಬೇಳೆ ಹಾಗೂ ಮೆಂತೆಯನ್ನು 3 -4 ಗಂಟೆಗಳ ಕಾಲ ನೆನೆ ಹಾಕಿ, ಆ ಬಳಿಕ ನೆನೆ ಹಾಕಿದ ಅಕ್ಕಿ ಮತ್ತಿತರ ಸಾಮಗ್ರಿಯನ್ನು ತೊಳೆದು ಮಿಕ್ಸಿ ಜಾರಿಗೆ ಹಾಕಿ, ಅದಕ್ಕೆ ತೆಂಗಿನ ತುರಿ, ಕೊತ್ತಂಬರಿ, ಜೀರಿಗೆ, ಕೆಂಪು ಮೆಣಸು, ಅರಿಶಿಣ, ಹುಣಸೆಹುಳಿ, ಬೆಲ್ಲ ಹಾಗೂ ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿಕೊಳ್ಳಬೇಕು. ರುಬ್ಬಿರುವ ಹಿಟ್ಟು ಗಟ್ಟಿಯಾಗಿರಲಿ ಜಾಸ್ತಿ ನೀರು ಸೇರಿಸಬೇಡಿ. -ಈಗ ಕೆಸವಿನ ಎಲೆಗಳನ್ನು ಚೆನ್ನಾಗಿ ತೊಳೆದು ಹಿಂಭಾಗದ ದಂಟು ತೆಗೆದು ಸಣ್ಣಗೆ ಹಚ್ಚಿಕೊಳ್ಳಬೇಕು. -ಸಣ್ಣಗೆ ಹಚ್ಚಿದ ಕೆಸವಿನ ಎಲೆಗಳನ್ನು ಈಗಾಗಲೇ ರುಬ್ಬಿಕೊಂಡಿರುವ ಮಸಾಲಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. -ಬಾಳೆ ಎಲೆ ತೊಳೆದು ಬಟ್ಟೆಯಿಂದ ಒರೆಸಿಡಬೇಕು. ಸ್ಟವ್ ಆನ್ ಮಾಡಿ ಅದರ ಮೇಲೆ ಬೆಂಕಿಗೆ ತಾಗದಂತೆ ಬಾಳೆಎಲೆ ಹಿಡಿದು ಬಾಡಿಸಬೇಕು.ಈಗ ಇದಕ್ಕೆ ಕೆಸವಿನ ಎಲೆ ಸೇರಿಸಿದ ಹಿಟ್ಟನ್ನು ಹಾಕಿ ಕೈಯಿಂದ ದಪ್ಪಗೆ ಹರಡಿ. ಈಗ ಬಾಳೆಎಲೆಯನ್ನು ಹಿಟ್ಟು ಹೊರಗೆ ಬಾರದಂತೆ ನಿಧಾನವಾಗಿ ಮಡಚಿಬೇಕು. ಬೇಕಿದ್ದರೆ ಮಡಚಿದ ಬಳಿಕ ಒಂದು ದಾರವನ್ನು ಕಟ್ಟಿ. ಹೀಗೆ ಮಾಡೋದ್ರಿಂದ ಬಾಳೆಎಲೆ ಬಿಚ್ಚಿಕೊಳ್ಳುತ್ತೆ ಎಂಬ ಭಯ ಇರೋದಿಲ್ಲ. -ಮಡಚಿದ ಬಾಳೆಎಲೆಗಳನ್ನು ಇಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ 30 ನಿಮಿಷಗಳ ಕಾಲ ಬೇಯಿಸಿ. -ಈಗ ಬಾಳೆಎಲೆ ಬಿಡಿಸಿ ಅದರೊಳಗಿರುವ ಪತ್ರೊಡೆ ಕಡುಬನ್ನು ನಿಧಾನಕ್ಕೆ ಹೊರತೆಗೆದು ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ. -ಈಗ ಬಾಳೆಎಲೆ ಬಿಡಿಸಿ ಅದರೊಳಗಿರುವ ಪತ್ರೊಡೆ ಕಡುಬನ್ನು ನಿಧಾನಕ್ಕೆ ಹೊರತೆಗೆದು ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ. -ಒಂದು ಪಾತ್ರೆಯನ್ನು ಸ್ಟವ್ ಮೇಲಿಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ, ಕರಿಬೇವು ಹಾಕಿ ಒಗ್ಗರಣೆ ಸಿದ್ಧಪಡಿಸಿ. ಇದಕ್ಕೆ ಈಗಾಗಲೇ ಕತ್ತರಿಸಿರುವ ಕಡುಬಿನ ತುಂಡುಗಳು, ಕಾಯಿತುರಿ ಹಾಗೂ ಬೆಲ್ಲ ಸೇರಿಸಿ ಮಿಕ್ಸ್ ಮಾಡಿದ್ರೆ ಪತ್ರೊಡೆ ಸವಿಯಲು ರೆಡಿ.

ತುಳುನಾಡಿನ ಸ್ಪೆಷಲ್ ಪತ್ರೊಡೆಯು ಪ್ರಪಂಚದೆಲ್ಲೆಡೆ ಹರಡಲಿ, ಪ್ರತೀ ಮನೆಯಲ್ಲೂ ಪತ್ರೊಡೆಯ ಸವಿ ಘಮಿಸಲಿ, ಆ ಮೂಲಕ ಆರೋಗ್ಯಪೂರ್ಣ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡೋಣ.

Leave A Reply

Your email address will not be published.