ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ಅವ್ಯವಹಾರಗಳ ತನಿಖೆಯ ಕಾಗದ ಪತ್ರ ಕಳೆದುಕೊಂಡು, ತಡಕಾಡಿದ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು
ಕೊಲ್ಲೂರು ಮುಕಾಂಬಿಕಾ ದೇವಸ್ಥಾನದಲ್ಲಿ ೨೧.೫೦ ಕೋಟಿ ರೂಪಾಯಿಗಳ ಅವ್ಯವಹಾರವಾಗಿದೆ ಎಂದು ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಯ ಮಹಾಸಂಘವು ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ ಬಯಲು ಮಾಡಿತ್ತು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದ ಅವ್ಯವಹಾರಗಳ ತನಿಖೆ ಮಾಡಲು ಸವಿಸ್ತಾರವಾದ ವರದಿಯೊಳಗೊಂಡ ಮನವಿ ಪತ್ರವನ್ನು ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ದಿಂದ ೧೮.೩.೨೦೨೧ ರಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಸಲ್ಲಿಸಿತ್ತು.
ಈ ಬಗ್ಗೆ ಯಾವುದೇ ಸೂಕ್ತ ಕ್ರಮ ಕೈಗೊಂಡು ಮಾಹಿತಿ ನೀಡದ ಕಾರಣ ದೇವಸ್ಥಾನ ಮಹಾಸಂಘದಿಂದ ದಿನಾಂಕ ೧೭.೪.೨೦೨೧ ರಂದು ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ ಈ ಮನವಿಯ ಆಧಾರದ ಮೇಲೆ ಯಾವ ರೀತಿಯ ಕ್ರಮ ಜರುಗಿಸಲಾಗಿದೆ ಎಂಬ ಬಗ್ಗೆ ಕೇಳಲಾಗಿತ್ತು. ಇದಕ್ಕೆ ಯಾವುದೇ ಉತ್ತರ ಬಾರದಿರುವಾಗ ದಿನಾಂಕ ೧೫.೬.೨೦೨೧ ರಂದು ಮೇಲ್ಮನವಿಯನ್ನು ಸಲ್ಲಿಸಲಾಯಿತು.
ಈ ಮೇಲ್ಮನವಿಯ ವಿಚಾರಣೆಯನ್ನು ಮಾಡಲು ದಿನಾಂಕ ೨.೭.೨೦೨೧ ರಂದು ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಅರ್ಜಿದಾರರ ಜೊತೆಗೆ ಝೂಮ್ ಮೀಟಿಂಗ್ ಮೂಲಕ ಸಮಸ್ಯೆ ಬಗೆಹರಿಸಲು ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಅರ್ಜಿದಾರರು ಉಪಸ್ಥಿತರಿದ್ದು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಅವ್ಯವಹಾರಗಳ ಮನವಿಯ ಬಗ್ಗೆ ವಿಚಾರಿಸಿದಾಗ ಅಲ್ಲಿ ಅಧಿಕಾರಿಗಳ ಬಳಿ ಅದಕ್ಕೆ ಸಂಬಂಧಿಸಿದ ಯಾವುದೇ ಕಾಗದ ಪತ್ರ, ಮನವಿ ಪತ್ರ ಇಲ್ಲದಿರುವುದು ಗಮನಕ್ಕೆ ಬಂದಿತು.
ಈ ಸಂದರ್ಭದಲ್ಲಿ ಸಿಬ್ಬಂದಿಗಳ ವಿಚಾರಣೆ ಮಾಡಿದಾಗ, ಮನವಿ ಪತ್ರ ಅವರ ಬಳಿ ಇಲ್ಲದಿರುವುದು ಗಮನಕ್ಕೆ ಬಂದಿತು. ತದನಂತರ ಇಲಾಖೆಯವರು ಎರಡು ವಾರಗಳ ಸಮಯಾವಕಾಶ ಕೇಳಿ, ಈ ವಿಚಾರಣೆಯನ್ನು ದಿನಾಂಕ ೧೬ ಜುಲೈಗೆ ಮುಂದೂಡಿದರು. ಹಾಗಾಗಿ ಇದರಿಂದ ಧಾರ್ಮಿಕ ದತ್ತಿ ಇಲಾಖೆಯು ಸಾರ್ವಜನಿಕರು ನೀಡಿದ ಮನವಿ, ಪತ್ರದ, ಪತ್ರ ವ್ಯವಹಾರಗಳ ಬಗ್ಗೆ ಎಷ್ಟು ಜವಾಬ್ದಾರಿಯಿಂದ ಅದರ ನಿರ್ವಹಣೆ ಮಾಡುತ್ತದೆ ಎಂದು ಪ್ರಶ್ನೆ ನಿರ್ಮಾಣವಾಯಿತು.
ಇಲಾಖೆಯ ಒಂದು ದೇವಸ್ಥಾನ ಅವ್ಯವಹಾರಗಳ ಬಗ್ಗೆ ಇಷ್ಟು ನಿರ್ಲಕ್ಷ್ಯ ಮಾಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇತಿ ತಮ್ಮ ವಿಶ್ವಾಸಿ,
ಶ್ರೀ ಮೋಹನ ಗೌಡ
ಸಮನ್ವಯಕರು, ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ.
ದೂ. ಕ್ರ. 7204082609