ಸಿಎಂ ಪುತ್ರ ವಿಜಯೇಂದ್ರರ ಹೆಸರೇಳಿಕೊಂಡು ಹಣ ವಸೂಲಿ : ಸಚಿವ ಶ್ರೀರಾಮುಲು ಪಿಎ ಆರೆಸ್ಟ್, ರಿಲೀಸ್ | ಶ್ರೀರಾಮುಲು ತೀವ್ರ ಅಸಮಾಧಾನ !!
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಹೆಸರೇಳಿಕೊಂಡು ಹಣ ವಸೂಲಿ ಮಾಡಿದ ಆರೋಪದಲ್ಲಿ ಸಚಿವ ಶ್ರೀರಾಮುಲು ಪಿಎ ರಾಜು ಆಲಿಯಾಸ್ ರಾಜಣ್ಣನನ್ನು ಪೋಲೀಸರು ಬಂಧಿಸಿದ್ದಾರೆ. ಇದೀಗ ವಿಚಾರಣೆಯ ನಂತರ ರಾಜಣ್ಣ ರಿಲೀಸ್ ಆಗಿದ್ದಾನೆ.
ಖುದ್ದು ವಿಜಯೇಂದ್ರ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಶ್ರೀರಾಮುಲು ಮನೆಯಲ್ಲೇ ಆರೋಪಿ ರಾಜಣ್ಣನನ್ನ ವಶಕ್ಕೆ ಪಡೆದಿದ್ದಾರೆ. ಕೆಲಸ ಕೊಡಿಸ್ತೀನಿ, ವರ್ಗಾವಣೆ ಮಾಡಿಸ್ತೀನಿ ಅಂತ ಕೋಟ್ಯಂತರ ರೂಪಾಯಿ ಹಣ ವಸೂಲಿ ಮಾಡಿರೋ ಆರೋಪ ಆತನ ಮೇಲೆ ಕೇಳಿ ಬಂದಿದೆ. ಈ ಪಿ ಎ ಕಳೆದ ಎಂಟು ವರ್ಷಗಳಿಂದ ರಾಮುಲು ಅವರ ಜತೆ ಕೆಲಸ ಮಾಡುತ್ತಿದ್ದ. ಇದೀಗ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಪ್ಪತ್ತಕ್ಕೂ ಅಧಿಕ ಆಡಿಯೋ ರೆಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಇತ್ತ, ತಮ್ಮ ಬಳಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ್ದಾರೆ.ಇಂದು ವಿಧಾನಸೌಧದಲ್ಲಿ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ ಸಚಿವರು ಯಾರೂ ಕೂಡ ಯಾರ ಹೆಸರನ್ನೂ ದುರ್ಬಳಕೆ ಮಾಡಿಕೊಳ್ಳಬಾರದು, ಅದು ಸರಿಯಲ್ಲ, ನನ್ನ ಬಳಿ ಕೆಲಸಕ್ಕಿದ್ದ ರಾಜಣ್ಣ ವಿರುದ್ಧ ಎಫ್ ಐಆರ್ ದಾಖಲಾಗಿದೆ, ತನಿಖೆ ಕೂಡ ನಡೆಯುತ್ತಿದೆ, ಹೀಗಾಗಿ ನಾನು ಹೆಚ್ಚಿಗೆ ಮಾತನಾಡಲು, ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದರು.
ರಾಜಣ್ಣ ನನಗೆ ಗೊತ್ತಿರುವ ಹುಡುಗ, ನನ್ನ ಬಳಿಯೇ ಕೆಲಸ ಮಾಡುತ್ತಿದ್ದ, ಹಾಗೆಂದು ಅಧಿಕೃತವಾಗಿ ನನ್ನ ಕಚೇರಿಯಲ್ಲಿ ಕೆಲಸಕ್ಕೆ ಇದ್ದವನಲ್ಲ, ನಿನ್ನೆ ಆತನನ್ನು ನನ್ನ ನಿವಾಸಕ್ಕೆ ಬಂದು ಪೊಲೀಸರು ಬಂಧಿಸುವವರೆಗೆ ನನಗೆ ಯಾವುದೇ ಮಾಹಿತಿಯಿರಲಿಲ್ಲ ಎಂದರು.
ನನಗೆ ಮೊದಲೇ ಮಾಹಿತಿ ಇದ್ದಿದ್ದರೆ ಈ ಬಗ್ಗೆ ವಿಜಯೇಂದ್ರ ಅವರಲ್ಲಿ ಮಾತನಾಡಿ ಸರಿಪಡಿಸುತ್ತಿದ್ದೆ, ರಾಜುನನ್ನು ಕರೆದು ಕೇಳುತ್ತಿದ್ದೆ, ನನಗೆ ಮೊದಲೇ ಮಾಹಿತಿ ನೀಡಬೇಕಾಗಿದ್ದು, ಬಂಧನ ಆಗುವವರೆಗೆ ನನಗೆ ಈ ಬಗ್ಗೆ ಒಂಚೂರು ಮಾಹಿತಿ ಇರಲಿಲ್ಲ, ಈ ವಿಷಯದಲ್ಲಿ ತಪ್ಪು ಸಂವಹನ ನಡೆದಿದೆ, ತಮ್ಮ ಗಮನಕ್ಕೆ ತಾರದೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಹೇಳಿದರು. ಈ ಪ್ರಕರಣ ಬಗ್ಗೆ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಬಳಿ ಮಾತನಾಡುತ್ತೇನೆ. ಕಾನೂನು ಪ್ರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಿ ಎಂದು ಶ್ರೀರಾಮುಲು ಹೇಳಿದರು.
ವಿಜಯೇಂದ್ರ ವಿರುದ್ಧ ಅಸಮಾಧಾನ?:
ಮುಖ್ಯಮಂತ್ರಿಗಳ ಪುತ್ರ ವಿಜಯೇಂದ್ರ ತಂದೆಯ ಮತ್ತು ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆ, ಹಲವು ಸಚಿವರುಗಳಿಗೆ ಬೆಲೆಯೇ ಇಲ್ಲದಂತಾಗಿದೆ, ನಾಯಕತ್ವ ಬದಲಾವಣೆಯಾಗಬೇಕು ಎಂಬ ಕೂಗು ಆಗಾಗ ಕೇಳಿಬರುತ್ತಲೇ ಇರುತ್ತದೆ.
ಇಂದು ಸಚಿವ ಶ್ರೀರಾಮುಲು ಮಾತಿನ ಧಾಟಿಯಲ್ಲಿ ಅಸಮಾಧಾನವಿತ್ತು. ವಿಜಯೇಂದ್ರ ಅವರು ತಮ್ಮ ಗಮನಕ್ಕೆ ಬಾರದೆ ದೂರು ನೀಡಿದ್ದಾರೆ ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ.