ಕೇವಲ ರೂ.10 ಕ್ಕೆ 100 ಕಿ.ಮೀ ಓಡುತ್ತೆ ಈ ಬೈಕ್ | ‘ಇನ್ನು ಎಷ್ಟು ಕೊಡುತ್ತೆ ಮೈಲೇಜು ?’ ಎಂದು ನೀವು ಕೇಳುವಂತೆಯೇ ಇಲ್ಲ, ಹಾಗಿದೆ ಈ ಇ-ಬೈಕ್ ಪರ್ಫಾರ್ಮೆನ್ಸ್
ಹೈದರಾಬಾದ್ : ಎಷ್ಟು ಕೊಡುತ್ತೆ, ಎಥ್ ಕೊರ್ಪುಂಡ್, ಕಿತ್ನ ದೇತಾಹೈ ಮುಂತಾದ ಪ್ರಶ್ನೆ ಕೇಳುವ ಭಾರತೀಯ ಗ್ರಾಹಕರಿಗಾಗಿ ಹೈದರಾಬಾದ್ ಮೂಲದ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯೊಂದು ಜಬರ್ದಸ್ತ್ ಮೈಲೇಜ್ ಉಳ್ಳ ಬೈಕ್ ಅನ್ನು ಬಿಡುಗಡೆ ಮಾಡಿದೆ. ಇನ್ನು ಮುಂದೆ ನೀವು ಮೈಲೇಜ್ ಕೇಳುವಂತೆಯೇ ಇಲ್ಲ. ಆ ರೇಂಜಿಗೆ ಇದೆ ಆ ಬೈಕಿನ ಮೈಲೇಜು.
ಹೈದರಾಬಾದ್ ಮೂಲದ ಎಲೆಕ್ಟ್ರಿಕ್ ವೆಹಿಕಲ್ ಕಂಪನಿಯಾಗಿರುವ ಗ್ರಾವ್ಟನ್ ಮೋಟಾರ್ಸ್ (Gravton Motors) Gravton Quanta ಕ್ವಾಂಟಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ. ಕಂಪನಿಯು ಈ ಎಲೆಕ್ಟ್ರಿಕ್ ಬೈಕ್ನ ಪರಿಚಯಾತ್ಮಕ ಬೆಲೆಯನ್ನು 99,000 ರೂ.ಗಳಿಗೆ ನಿಗದಿಪಡಿಸಿದೆ. ಇದು ಕೆಲವು ದಿನಗಳ ನಂತರ 1.1 ರಿಂದ 1.2 ಲಕ್ಷ ರೂ.ಗೆ ಏರಿಕೆಯಾಗಲಿದೆ ಎಂದು ಕಂಪನಿ ಹೇಳಿದೆ.
ಆರಂಭದಲ್ಲಿ ಕ್ವಾಂಟಾ ಹೈದರಾಬಾದ್ನಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಿರಲಿದೆ. ಆದರೆ ಕಂಪನಿಯು ನಂತರ ಅದನ್ನು ದೇಶದ ಇತರ ನಗರಗಳಲ್ಲಿಯೂ ಕೂಡ ಬಿಡುಗಡೆ ಮಾಡಲು ಯೋಜನೆ ರೂಪಿಸುತ್ತಿದೆ.
80ರೂ.ಗಳಲ್ಲಿ 800 ಕಿ.ಮೀ ಕ್ರಮಿಸಬಲ್ಲ ತಾಕತ್ತು
ಗ್ರಾವ್ಟನ್ ಕ್ವಾಂಟಾ ಎಲೆಕ್ಟ್ರಿಕ್ ಬೈಕ್ 80 ರೂ. ವೆಚ್ಚದಲ್ಲಿ 800 ಕಿ.ಮೀ. ಓಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಅಂದರೆ, 100 ಕಿ.ಮೀ. ಚಾಲನೆಗೆ ನಿಮಗೆ ಕೇವಲ ರೂ.10 ವೆಚ್ಚ ಬರಲಿದೆ. ಇದರಲ್ಲಿ 3 kWh Li-ion ಬ್ಯಾಟರಿ ಇದರಲ್ಲಿದೆ. ಇದು ಒಂದೇ ಚಾರ್ಜ್ನಲ್ಲಿ 150 ಕಿ.ಮೀ. ವರೆಗೆ ಓಡುತ್ತದೆ. ಎರಡು ಬ್ಯಾಟರಿಗಳನ್ನು ಒಟ್ಟಿಗೆ ಇಡುವ ಸೌಲಭ್ಯವನ್ನೂ ಕೂಡ ಈ ಬೈಕ್ ನಲ್ಲಿ ಕಲ್ಪಿಸಲಾಗಿದೆ. ಆ ಕಾರಣದಿಂದ ಅಂದರೆ, ನೀವು ಒಂದೇ ಬಾರಿಯ ಚಾರ್ಜಿಂಗ್ನಲ್ಲಿ ಒಟ್ಟು 320 ಕಿ.ಮೀ. ವರೆಗೆ ನಿಶ್ಚಿಂತೆಯಿಂದ ಗಾಡಿ ಚಲಾಯಿಸಬಹುದು. ನಿಮ್ಮನ್ನು 100 ಕಿಲೋ ಮೀಟರ್ ದೂರ ಹತ್ತಿಸಿಕೊಂಡು ನಿಮಗೆ ಸಾಥ್ ನೀಡುವ ಈ ಹೊಸ ಗೆಳೆಯ, 100 ಕಿಲೋ ಮೀಟರ್ ಪ್ರಯಾಣದ ನಂತರ ನಿಮ್ಮ ಜೇಬಿನಿಂದ ಕೇವಲ 10 ರೂಪಾಯಿ ಖರ್ಚು ಮಾಡಿಸಿ, ‘ ಹೆಂಗ್ ಸ್ವಾಮಿ ನಾನು ?” ಎಂದು ನಿಮ್ಮತ್ತ ಕಣ್ಣು ಮಿಟುಕಿಸಿ ನಿಮ್ಮ ಸ್ಮೈಲ್ ಗೆ ಸ್ಮೈಲ್ ಬೆರೆಸಲಿದೆ.
ಈ ಬೈಕ್ ನ ಗರಿಷ್ಠ ವೇಗ 70 Kmph ಇದ್ದು ಈ ಬೈಕ್ ನ ಬಣ್ಣಗಳ ಆಯ್ಕೆಯಲ್ಲಿ ಕೂಡ ಹಲವು ಆಪ್ಷನ್ ಗಳು ಗ್ರಾಹಕರಿಗೆ ಇವೆ. ಸದ್ಯಕ್ಕೆ ಈ ಬೈಕ್ ಕೆಂಪು, ಬಿಳಿ ಮತ್ತು ಕಪ್ಪು ಎಂಬ ಒಟ್ಟು ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಕಪ್ಪು ಬಣ್ಣವನ್ನು ಸ್ಪೆಷಲ್ ಎಡಿಷನ್ ಆಗಿ ಮಾರಾಟ ಮಾಡಲಾಗುತ್ತದೆ.
ಮತ್ತು ಕಪ್ಪು ಬಣ್ಣದ ಬೈಕ್ ಸೀಮಿತ ಯುನಿಟ್ ಗಳನ್ನು ಮಾತ್ರ ಹೊಂದಿರಲಿದೆ. ಎಲೆಕ್ಟ್ರಿಕ್ ಬೈಕ್ಗಾಗಿ ಈಗಾಗಲೇ ಬುಕಿಂಗ್ ಆರಂಭಗೊಂಡಿದೆ. ಕಂಪನಿಯ ಅಧಿಕೃತ ವೆಬ್ಸೈಟ್ನಿಂದ ಗ್ರಾಹಕರು ಆನ್ಲೈನ್ನಲ್ಲಿ ಬುಕ್ ಮಾಡಬಹುದು. 3KW ನ BLDC ಮೋಟರ್ ನೀಡಲಾಗಿದ್ದು, ಇದು ಗರಿಷ್ಠ 170 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಬೈಕ್ನ ಗರಿಷ್ಠ ವೇಗ 70 ಕಿ.ಮೀ. ಗಳಷ್ಟಾಗಿದೆ.
ಕೇವಲ 90 ನಿಮಿಷಗಳಲ್ಲಿ ಫುಲ್ ಚಾರ್ಜಿಂಗ್ ಕ್ಷಮತೆ !
ಈ ಬೈಕ್ ನಲ್ಲಿ ನೀಡಲಾಗಿರುವ ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಬಳಸಿ ನೀವು ಕೇವಲ 90 ನಿಮಿಷಗಳಲ್ಲಿ ಈ ಬೈಕ್ ನ ಬ್ಯಾಟರಿ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ. ಅಂದರೆ, ಇದು 1 ಕಿ.ಮೀ/ಮಿನಿಟ್ ಲೆಕ್ಕಾಚಾರದಲ್ಲಿ ಇದು ಚಾರ್ಜ್ ಆಗುತ್ತದೆ. ಸಾಮಾನ್ಯ ಮೋಡ್ ನಲ್ಲಿ ಫುಲ್ ಚಾರ್ಜ್ ಆಗಲು ಈ ಬೈಕ್ 3 ಗಂಟೆಗಳ ಕಾಲಾವಕಾಶ ಬೇಕು. ಇ-ಬೈಕ್ ಗೆ ಐದು ವರ್ಷಗಳ ಬ್ಯಾಟರಿ ವಾರಂಟಿ ಇದೆ.
ಈ ಇ-ಬೈಕ್ ನಲ್ಲಿ 17 ಇಂಚಿನ ಗಾಲಿಗಳು, ಎರಡು ಚಕ್ರಗಳಿಗೆ ಡಿಸ್ಕ್ ಬ್ರೇಕ್ ಹಾಗೂ ಆಲ್ LED ಲೈಟಿಂಗ್ ನಂತನ ವೈಶಿಷ್ಟ್ಯಗಳನ್ನೂ ನೀಡಲಾಗಿದೆ.
ಈ ಬೈಕ್ ಅನ್ನು ನೀವು ಕ್ವಾಂಟಾ ಸ್ಮಾರ್ಟ್ ಆಪ್ ಮೂಲಕ ಕೂಡ ಕನೆಕ್ಟ್ ಮಾಡಬಹುದು. ಇದರಿಂದ ನಿಮಗೆ ರೋಡ್ ಸೈಡ್ ಅಸಿಸ್ಟೆಂಟ್, ಮ್ಯಾಪಿಂಗ್ ಸರ್ವಿಸ್ ಸ್ಟೇಷನ್, ರಿಮೋಟ್ ಲಾಕ್ / ಅನ್ ಲಾಕ್ ಹಾಗೂ ಲೈಟ್ ಆನ್ / ಆಫ್ ಗಳಂತಹ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಆಪ್ ನಲ್ಲಿ ನೀವು ನಿಮ್ಮ ವಾಹನದ ಟ್ರ್ಯಾಕಿಂಗ್ ಕೂಡ ಮಾಡಬಹುದಾಗಿದೆ.
ಇನ್ನು ಏನು ಯೋಚಿಸುತ್ತಿದ್ದೀರಿ??ಪೆಟ್ರೋಲ್ ಚಿಂತೆ ಮರೆತುಬಿಡಿ, ಈ ಬೈಕ್ ಏರಿ ಸವಾರಿ ಹೊರಡಲು ರೈಟ್ ಹೇಳಿ.