ಮಗುವಿನ ಆರೋಗ್ಯಕ್ಕಿಂತ ರಿಪೋರ್ಟ್ ರೆಡಿ ಮಾಡುವುದು ಮುಖ್ಯವಾಯ್ತಾ…?ಕಡಬ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವಿರುದ್ಧ ಆಕ್ರೋಶ
ಕಡಬ: ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ಮಗುವಿಗೆ ಚಿಕಿತ್ಸೆ ನೀಡದೆ ಪೋಷಕರನ್ನು ಆಸ್ಪತ್ರೆಯ ಸಿಬ್ಬಂದಿ ಗಂಟೆಗಟ್ಟಲೆ ಕಾಯಿಸಿದ ಘಟನೆ ಕಡಬದಲ್ಲಿ ನಡೆದಿದೆ. ಈ ಬಗ್ಗೆ ಆಕ್ರೋಶಿತರಾಗಿರುವ ಮಗುವಿನ ತಂದೆ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಎಡಮಂಗಲ ಮೂಲದ ರಂಜಿತ್ ಎಂಬುವರು ತನ್ನ ಮಗುವನ್ನು ಜೂನ್ 29ರಂದು ಕಡಬ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ತಕ್ಷಣ ಸ್ಪಂದಿಸದೆ ಮಗುವನ್ನು ಮಧ್ಯಾಹ್ನದಿಂದ ಸಂಜೆಯವರೆಗೆ ಕಾಯಿಸಿದ್ದಾರೆ. ಕೇಂದ್ರದ ವೈದ್ಯಾಧಿಕಾರಿಗಳು ಸೂಚಿಸಿದರೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ.
ಮಧ್ಯಾಹ್ನದಿಂದ ಸಂಜೆಯವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಕಾದುಕುಳಿತ ರಂಜಿತ್ ಬಳಿಕ ಮಗುವನ್ನು ಸ್ಥಳೀಯ ಖಾಸಗಿ ಲ್ಯಾಬ್ ಒಂದರಲ್ಲಿ ಪರೀಕ್ಷೆಗೆ ಒಳಪಡಿಸಿದ್ದಾರೆ. ನಂತರ ಲ್ಯಾಬ್ ನವರ ಸೂಚನೆಯಂತೆ ಮಗುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದೀಗ ಮಗುವಿನ ತಂದೆ ರಂಜಿತ್ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶಿತರಾಗಿದ್ದಾರೆ. ಚಿಕಿತ್ಸೆ ನೀಡಲು ಸಾಧ್ಯವಾಗದಿದ್ದರೆ ಗಂಟೆಗಟ್ಟಲೆ ಕಾಯಿಸುವ ಅಗತ್ಯ ಏನಿದೆ. ಮಕ್ಕಳ ಆರೋಗ್ಯದಲ್ಲಿ ಚೆಲ್ಲಾಟವಾಡುವುದು ಸರಿಯಲ್ಲ ಆದ್ದರಿಂದ ಆಸ್ಪತ್ರೆಯ ದಾದಿಯರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಚಿತ್ರ ರಾವ್, ರಂಜಿತ್ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿರುವುದು ನಿಜ. ಆದರೆ ತಿಂಗಳ ಕೊನೆಯ ಆದಕಾರಣ ಆಸ್ಪತ್ರೆ ಸಿಬ್ಬಂದಿ ರಿಪೋರ್ಟ್ ರೆಡಿ ಮಾಡುವುದರಲ್ಲಿ ನಿರತರಾಗಿದ್ದರು. ಆದ್ದರಿಂದ ಅವರು ಕೋಪಗೊಂಡು ಪುನಹ ತೆರಳಿದ್ದಾರೆ. ಸಿಬ್ಬಂದಿಗಳು ಒತ್ತಡದ ನಡುವೆಯೂ ಸ್ಪಂದಿಸಬೇಕಿತ್ತು. ಈ ವಿಷಯ ನನಗೆ ತಡವಾಗಿ ಗಮನಕ್ಕೆ ಬಂದಿದೆ. ಈ ಬಗ್ಗೆ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದಿದ್ದಾರೆ.