ಮಹಿಳೆಯರ ಕೈಕಾಲು ಕಟ್ಟಿ ‘ಭೂತೋಚ್ಛಾಟನೆ’ ಮಾಡುತ್ತಿದ್ದ 30 ಮಂದಿಯ ಬಂಧನ
ಉತ್ತರ ಪ್ರದೇಶದ ಪ್ರಯಾಗ್ರಾಜ್
ಜಿಲ್ಲೆಯಲ್ಲಿ ಭೂತೋಚ್ಚಾಟನೆ ನಡೆಸುತ್ತಿದ್ದ 30 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಸಂಗಂ ನದಿಯ ತೀರದಲ್ಲಿ ಡ್ರಂಗಳನ್ನು ಬಾರಿಸುತ್ತಾ ಮಹಿಳೆಯರ ಕೈಕಾಲು ಕಟ್ಟಿ, ಚಾಟಿಯಿಂದ ಹೊಡೆಯುತ್ತ ಭೂತ ಬಿಡಿಸುವ ಪ್ರಯತ್ನ ಮಾಡುತ್ತಿದ್ದರು ಎನ್ನಲಾಗಿದೆ.
ಉ.ಪ್ರ.ದ ಮಹೋಬಾ ಮತ್ತು ಛತ್ತರಪುರ ಜಿಲ್ಲೆಗಳ ನಿವಾಸಿಗಳಾದ ಆರೋಪಿಗಳು, ಮಹಿಳೆಯರನ್ನು ಹೊಡೆಯುತ್ತ, ಕೂದಲು ಹಿಡಿದು ಎಳೆಯುತ್ತಿದ್ದರು. ನಿಂಬೆಹಣ್ಣು, ಕುಂಕುಮ ಮುಂತಾದ ಸಾಮಗ್ರಿಗಳನ್ನು ಹಿಡಿದು ಅವರ ಮೈಮೇಲೆ ಬಂದಿರುವ ದುಷ್ಟ ಶಕ್ತಿಗಳನ್ನು ಓಡಿಸುವುದಾಗಿ ಹೇಳಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಇವರನ್ನು ಗಮನಿಸಿದ ಕೆಲವು ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದರು. ದರಗಂಜ್ ಪೊಲೀಸರು ಸ್ಥಳಕ್ಕೆ ತಲುಪಿ, ನಡೆಸುತ್ತಿದ್ದ ಕಾರ್ಯವನ್ನು ನಿಲ್ಲಿಸಿ ಎಂದರೂ ಯಾರೂ ಕೇಳಲಿಲ್ಲ. ನಂತರ ಇದ್ದ 30 ಜನರನ್ನೂ ಬಂಧಿಸಿ ಠಾಣೆಗೆ ಕರೆದೊಯ್ಯಲಾಯಿತು ಎಂದು ಇನ್ಸ್ಪೆಕ್ಟರ್ ಅರವಿಂದ್ ಕುಮಾರ್ ಸಿಂಗ್ ಹೇಳಿದ್ದಾರೆ.
ಈ ರೀತಿಯ ಮೂಢನಂಬಿಕೆಗಳನ್ನು ನಂಬುವ ಜನರು ಇನ್ನೂ ನಮ್ಮ ಸಮಾಜದಲ್ಲಿ ಇದ್ದಾರೆ ಎಂಬುದೇ ದೊಡ್ಡ ಬೇಸರದ ಸಂಗತಿ. ಈ ರೀತಿಯ ಮೂಢನಂಬಿಕೆಗಳನ್ನು ನಿಷೇಧಿಸುವ ಕಾನೂನು ಜಾರಿಯಾಗಬೇಕಿದೆ, ಇಲ್ಲದಿದ್ದರೆ ಇಂತಹ ಘಟನೆಗಳು ಪದೇಪದೇ ನಡೆಯುತ್ತಲೇ ಇರುತ್ತವೆ.